Advertisement

ಗಾಲ್ಫ್ ಮೈದಾನ ಸ್ಥಳಾಂತರ?

11:58 AM Jul 15, 2018 | |

ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಗಾಲ್ಫ್ ಮೈದಾನವನ್ನು ಸ್ಥಳಾಂತರ ಮಾಡುವ ಕುರಿತು ಚರ್ಚಿಸುವುದಾಗಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ. ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ನಿಲ್ಲಿಸಿದ್ದ ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಅವರ ಕಾರಿನ ಮೇಲೆ ಶನಿವಾರ ಮಧ್ಯಾಹ್ನ ಗಾಲ್ಫ್ ಚೆಂಡು ಬಿದ್ದು ಗಾಜು ಒಡೆದಿದೆ. 

Advertisement

ಈ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, ಗಾಲ್ಫ್ ಮೈದಾನದ ಸುತ್ತ ಹಾಕಿರುವ ಬಲೆ ಎತ್ತರಿಸುವುದು ಹಾಗೂ ಸಾಧ್ಯವಾದರೆ ಗಾಲ್ಫ್ ಮೈದಾನ ಸ್ಥಳಾಂತರ ಮಾಡಬಹುದೇ ಎಂಬ ಕುರಿತು ಗಾಲ್ಫ್ ಕ್ಲಬ್‌ ಮುಖ್ಯಸ್ಥರ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ, ವಿಧಾನಸೌಧ, ವಿಕಾಸಸೌಧ,ಲೋಕಾಯುಕ್ತ ಕಚೇರಿ, ಕೃಷ್ಣಾ, ಕಾವೇರಿ ನಿವಾಸಗಳನ್ನು ಹೈ ಸೆಕ್ಯುರಿಟಿ ಝೋನ್‌ ಎಂದು ಘೋಷಿಸಿ ನೂರು ಜನ ಸಿಬ್ಬಂದಿ ಇರುವ ಪ್ರತ್ಯೇಕ ರಕ್ಷಣಾ ದಳ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

ಶೀಘ್ರವೇ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಲಾಗುವುದು. ಜು.18 ರಂದು ರಾಜ್ಯದ ಸಮಸ್ಯೆಗಳ ಕುರಿತು ದೆಹಲಿಯಲ್ಲಿ ಸಂಸದರ ಸಭೆ ನಡೆಸಲು ಮುಖ್ಯಮಂತ್ರಿ ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು. ಕೆಆರ್‌ ಎಸ್‌ ಭರ್ತಿಯಾಗಿರುವುದರಿಂದ ಜು.20ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಾಗಿನ ಅರ್ಪಿಸಲಿದ್ದಾರೆ ಎಂದು ಅವರು ಹೇಳಿದರು

ನೂರಡಿ ಎತ್ತರದ ನೆಟ್‌ ಮೇಲಿಂದ ಬಂದು ಕಾರಿನ ಮೇಲೆ ಬಿದ್ದ  ಗಾಲ್ಫ್  ಚೆಂಡು! ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಅಂಗಳಕ್ಕೆ ಮತ್ತೆ ಗಾಲ್ಫ್ ಚೆಂಡು ಬಂದು ಬಿದ್ದು ನಗರದ ಹೆಚ್ಚುವರಿ ಪೊಲಿಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಅವರ ಕಾರಿನ ಗಾಜಿಗೆ ಹಾನಿಯಾಗಿದೆ.

Advertisement

ಶನಿವಾರ ಮಧ್ಯಾಹ್ನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬೆಂಗಳೂರು ಅಭಿವೃದ್ಧಿ ಕುರಿತು ಬಿ-ಪ್ಯಾಕ್‌ ಸಂಸ್ಥೆ ಸದಸ್ಯರೊಂದಿಗೆ ನಡೆಸಿದ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸೀಮಂತ್‌ ಕುಮಾರ್‌ ಸಿಂಗ್‌ ಅವರ ಕಾರಿನ ಮೇಲೆ ಚೆಂಡು ಬಿದ್ದಿತು. ಗಾಲ್ಫ್ ಗ್ರೌಂಡ್‌ಗೆ ಹಾಕಿರುವ ಸುಮಾರು ನೂರು ಅಡಿ ಎತ್ತರದ ಬಲೆಯನ್ನೂ ದಾಟಿ ಚೆಂಡು ಕಾರಿನ ಮೇಲೆ ಬಿದ್ದದ್ದು ಕೆಲ ಹೊತ್ತು ಆತಂಕ ಸೃಷ್ಟಿಸಿತು.

ಕಾಕತಾಳೀಯ ಎನ್ನುವಂತೆ 2006ರಲ್ಲಿ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ದ್ದಾಗ ಗಾಲ್ಫ್ ಚೆಂಡುಗಳು ಗೃಹ ಕಚೇರಿ ಕೃಷ್ಣಾ ಒಳಗೆ ಬಂದು ಬೀಳುತ್ತಿದ್ದವು. ಆಗ ಗಾಲ್ಫ್ ಮೈದಾನದ ಸುತ್ತ ಎತ್ತರದ ಬಲೆ ಹಾಕುವಂತೆ ಕುಮಾರಸ್ವಾಮಿ ಸೂಚಿಸಿದ್ದರು. ಅದರಂತೆ ಗಾಲ್ಫ್ ಮೈದಾನ ಸುತ್ತ ನೂರು ಅಡಿ ಎತ್ತರದ ಬಲೆ ಹಾಕಲಾಗಿತ್ತು. ಪ್ರಕರಣದ ಬಗ್ಗೆ ಸೀಮಂತ್‌ ಕುಮಾರ್‌ ಸಿಂಗ್‌ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಗಾಲ್ಫ್ ಕ್ಲಬ್‌ ಆಡಳಿತ ಮಂಡಳಿ ವಿರುದ್ಧ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next