ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಖಾಸಗಿ ದರ್ಬಾರ್ ಒಂದಾ
ಗಿದ್ದು, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರಾಜಮಾನರಾಗಿ ಖಾಸಗಿ ದರ್ಬಾರ್ ನಡೆಸುವ ಸಿಂಹಾಸನವನ್ನು ಸೋಮ ವಾರ ಅಂಬಾವಿಲಾಸ ಅರಮನೆಯಲ್ಲಿ ಶಾಸ್ತ್ರೋಕ್ತವಾಗಿ ಜೋಡಣೆ ಮಾಡಿ ಪೂಜೆ ಸಲ್ಲಿಸಲಾಯಿತು.
ಅ.15ರಿಂದ 24ರ ವರೆಗೆ ಅರಮನೆಯಲ್ಲಿ ವಿವಿಧ ಧಾರ್ಮಿಕ ಕಾರ್ಯ ಜರಗಲಿದ್ದು, ಪ್ರತಿ ದಿನ ಸಂಜೆ ಖಾಸಗಿ ದರ್ಬಾರ್ ನಡೆಯಲಿದೆ. ದಸರಾ ಆರಂಭಕ್ಕೆ 6 ದಿನಗಳಷ್ಟೇ ಬಾಕಿ ಇರುವುದರಿಂದ ಶಾಸ್ತ್ರೋಕ್ತವಾಗಿ ಸಿಂಹಾಸನ ಜೋಡಿಸಿ ದರ್ಬಾರ್‌ಗೆ ಸಿದ್ಧತೆ ಮಾಡಲಾಯಿತು. ಇದುವರೆಗೆ ಅರಮನೆಯ ಸುಪರ್ದಿನಲ್ಲಿದ್ದ ಸಿಂಹಾಸನವನ್ನು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಜಿಲ್ಲಾಡಳಿತದ ವಶಕ್ಕೆ ನೀಡಿದರು.
ಬಿಗಿ ಭದ್ರತೆಯಲ್ಲಿ ಸ್ಟ್ರಾಂಗ್ ರೂಂನಿಂದ ಹೊರತೆಗೆದು ಶುಭ ಲಗ್ನದಲ್ಲಿ ಸಿಂಹಾಸನ ಜೋಡಣೆ ಮಾಡಲಾಯಿತು. ಬಳಿಕ ಪ್ರಮೋದಾದೇವಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಸಿಂಹಾಸನದ ಜೋಡಣೆ ಕಾರ್ಯ ನಡೆಯಿತು. ಬಳಿಕ ಪಟ್ಟದ ಕುದುರೆ, ಪಟ್ಟದ ಹಸುವನ್ನು ಕಲ್ಯಾಣಮಂಟಪ ಸಮೀಪದ ಅಂಗಳಕ್ಕೆ ಕರೆತಂದು ಪೂಜಿಸಲಾಯಿತು.
ನವರಾತ್ರಿಯ ಮೊದಲ ದಿನವಾದ ಅ.15ರಂದು ಚಿನ್ನದ ಸಿಂಹಾಸನಕ್ಕೆ ಸಿಂಹಜೋಡಣ ಕಾರ್ಯ ನಡೆದ ಬಳಿಕ ಖಾಸಗಿ ದರ್ಬಾರ್ ನಡೆಯುತ್ತದೆ. ಅಂದು ಮಧ್ಯಾಹ್ನದವರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಆಯುಧ ಪೂಜೆ ದಿನವಾದ ಅ.23ರಂದು ಮಧ್ಯಾಹ್ನದವರೆಗೆ ಹಾಗೂ ವಿಜಯದಶಮಿ ದಿನವಾದ ಅ.24ರಂದು ದಿನವಿಡೀ ಅರಮನೆಗೆ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ.