ನಟ ಗಣೇಶ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಆದರೆ, ಗಣೇಶ್ ಮಾತ್ರ ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಅದಕ್ಕೆ ಅವರ ಕೊಟ್ಟ ಬೆಂಗಳೂರು ನಿವಾಸದಲ್ಲಿ ಇರೋದಿಲ್ಲ ಎನ್ನುವುದು. ಈ ಕುರಿತು ಅಭಿಮಾನಿಗಳಲ್ಲಿ ಗಣೇಶ್ ಮನವಿಯೊಂದನ್ನು ಮಾಡಿದ್ದಾರೆ.
“ನನ್ನ ಆತ್ಮೀಯ ಅಭಿಮಾನಿಗಳೇ, ಜುಲೈ 2ರಂದು ನಾನು ನನ್ನ ಬೆಂಗಳೂರು ನಿವಾಸದಲ್ಲಿ ಲಭ್ಯವಿಲ್ಲ. ಅದೇಕೋ ತಮ್ಮೊಂದಿಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ನನ್ನ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ. ಹೀಗಾಗಿ ನನ್ನ ಪ್ರೀತಿಯ ಅಭಿಮಾನಿಗಳು ಮನೆಯ ಬಳಿ ಬಾರದೇ ತಾವು ಇದ್ದಲ್ಲಿಂದಲೇ ನನ್ನನ್ನು ಹರಸಿ, ಆಶೀರ್ವ ದಿಸಿ. ಮುಂದಿನ ವರ್ಷ ಖಂಡಿತ ಒಟ್ಟಿಗೆ ಹುಟ್ಟುಹಬ್ಬ ಆಚರಿಸೋಣ. ಅನಾನುಕೂಲಕ್ಕೆ ಕ್ಷಮೆಯಿರಲಿ. ಎಂದಿನ ತಮ್ಮಅಭಿಮಾನದ ನಿರೀಕ್ಷೆಯೊಂದಿಗೆ, ನಿಮ್ಮವ ಗಣೇಶ’ ಎಂದಿದ್ದಾರೆ.
ಈ ಪೋಸ್ಟ್‌ಗೆ ಅಭಿಮಾನಿಗಳು ಬೇಸರ ತಂದಿರೋದು ಸುಳ್ಳಲ್ಲ. ತಮ್ಮ ನೆಚ್ಚಿನ ನಟನನ್ನು ಈ ಬಾರಿಯಾದರೂ ಹತ್ತಿರದಿಂದ ನೋಡಿ, ಬರ್ತ್‌ಡೇ ಶುಭಕೋರುವ ಆಸೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಇನ್ನು, ಸಿನಿಮಾ ವಿಚಾರಕ್ಕೆ ಬರುವುದಾದರೆ ಗಣೇಶ್ ಅವರ “ಕೃಷ್ಣಂ ಪ್ರಣಯ ಸಖೀ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಆಗಸ್ಟ್ 15ರಂದು ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರದ ಹಾಡು ಹಿಟ್‌ಲಿಸ್ಟ್ ಸೇರಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರದ “ಚಿನ್ನಮ್ಮ..’ ಹಾಡು ಯೂಟ್ಯೂಬ್‌ನಲ್ಲಿ 10 ಮಿಲಿಯನ್ ವೀಕ್ಷಣೆ ಪಡೆದಿದೆ.
ಕವಿರಾಜ್ ಅವರು ಬರೆದು ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು ಖ್ಯಾತ ಗಾಯಕ ಕೈಲಾಶ್ ಖೇರ್ ಹಾಗೂ ಇಂದು ನಾಗರಾಜ್ ಹಾಡಿದ್ದಾರೆ. ಈ ಚಿತ್ರವನ್ನು ಶ್ರೀನಿವಾಸರಾಜು ನಿರ್ದೇಶನ ಮಾಡಿದ್ದು, ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣವಿದೆ. ಗಣೇಶ್ “ಕೃಷ್ಣಂ ಪ್ರಣಯ ಸಖಿ’ ಚಿತ್ರದ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಕಾರಣ ಕಥೆ. ಫ್ಯಾಮಿಲಿ ಡ್ರಾಮಾ ಸಿನಿಮಾವನ್ನು ಗಣೇಶ್ ಈಗಾಗಲೇ ಸಾಕಷ್ಟು ಮಾಡಿದ್ದಾರೆ. ಆದರೆ, ಇಂತಹ ಕಥೆಯನ್ನು ಮಾಡಿಲ್ಲ. “ಇಂತಹ ಕಥೆ ಸಿಗೋದು ವಿರಳ.
ಇದು ಕೇವಲ ಫ್ಯಾಮಿಲಿ ಡ್ರಾಮಾವಲ್ಲ. ಇಲ್ಲೊಂದು ಥ್ರಿಲ್ಲರ್ ಅಂಶವಿದೆ. ಅದು ಇಡೀ ಸಿನಿಮಾವನ್ನು ಬೇರೆ ಲೆವೆಲ್‌ಗೆ ಕೊಂಡೊಯ್ಯುತ್ತದೆ. ಸಿನಿಮಾ ಆರಂಭವಾಗಿ 10 ನಿಮಿಷದಿಂದಲೇ ಪ್ರೇಕ್ಷಕರಲ್ಲಿ ಹಲವು ಕುತೂಹಲ, ಪ್ರಶ್ನೆಗಳು ಮೂಡುತ್ತವೆ. ಆ ಮಟ್ಟಿಗೆ ನಿರ್ದೇಶಕರು ಥ್ರಿಲ್ಲರ್ ಅಂಶವನ್ನು ಫ್ಯಾಮಿಲಿ ಕಥೆಗೆ ತುಂಬಾ ಚೆನ್ನಾಗಿ ಬ್ಲೆಂಡ್ ಮಾಡಿದ್ದಾರೆ’ ಎನ್ನುತ್ತಾರೆ ಗಣೇಶ್.