Advertisement

“ಗೋಲ್ಡನ್‌ ಸ್ಕ್ವಾಡ್ರನ್’ಇನ್ನು ಮುಂದೆ “ರಫೇಲ್‌ ಸ್ಕ್ವಾಡ್ರನ್’

09:27 AM Sep 12, 2019 | Team Udayavani |

ಹೊಸದಿಲ್ಲಿ: ಕಾರ್ಗಿಲ್‌ ಕಾರ್ಯಾಚರಣೆಯಲ್ಲಿ ಪ್ರಮುಖ ಭೂಮಿಕೆ ನಿಭಾಯಿಸಿದ್ದ “ನಂ.17 ಗೋಲ್ಡನ್‌ ಸ್ಕ್ವಾಡ್ರನ್‌’ ಅನ್ನು ಮತ್ತೆ ಪುನಾರಂಭಿಸಲಾಗಿದೆ. ಅದನ್ನು ದೇಶದ ಮೊದಲ “ರಫೇಲ್‌ ಸ್ಕ್ವಾಡ್ರನ್‌’ ಆಗಿ ಗುರುತಿಸಲಾಗುತ್ತದೆ. ಹರ್ಯಾಣದ ಅಂಬಾಲದಲ್ಲಿರುವ ವಾಯುಪಡೆಯ ನೆಲೆಯಲ್ಲಿ ಐಎಎಫ್ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್‌ ಬಿ.ಎಸ್‌.ಧನೋವಾ ಮಂಗಳವಾರ ಅದನ್ನು ಉದ್ಘಾಟಿಸಿದ್ದಾರೆ.

Advertisement

ಪುನರಾರಂಭಗೊಂಡಿರುವ ಈ ಸ್ಕ್ವಾಡ್ರನ್‌ ಅನ್ನು ಅ.8ರಂದು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರ ಗೊಳ್ಳಲಿರುವ ರಫೇಲ್‌ ಯುದ್ಧ ವಿಮಾನದ ನಿರ್ವಹಣೆ ಮತ್ತು ಬಳಕೆಯ ಉಸ್ತುವಾರಿಗಾಗಿ ಬಳಸಿಕೊಳ್ಳಲಾಗುತ್ತದೆ. 1951ರ ಅ.1ರಂದು “ನಂ.17 ಗೋಲ್ಡನ್‌ ಸ್ಕ್ವಾಡ್ರನ್‌’ ಅನ್ನು ಶುರು ಮಾಡಲಾಗಿತ್ತು. ಆರಂಭದಲ್ಲಿ ಹಾರ್ವರ್ಡ್‌ 2ಬಿ ಟ್ರೈನರ್‌ ಅನ್ನು ಬಳಕೆ ಮಾಡಲಾಗುತ್ತಿತ್ತು.

ಅನಂತರದ ವರ್ಷದಲ್ಲಿ ಬ್ರಿಟನ್‌ ನಿರ್ಮಿತ ಹಾಕರ್‌ ಹಂಟರ್‌ ಮತ್ತು ರಷ್ಯಾ ನಿರ್ಮಿತ ಮಿಗ್‌ 21 ಯುದ್ಧ ವಿಮಾನಗಳ ಬಳಕೆ ಮಾಡಲು ಶುರು ಮಾಡಲಾಯಿತು. ಬದಲಾದ ಕಾಲಘಟ್ಟದಲ್ಲಿ ಮಿಗ್‌21 ಯುದ್ಧ ವಿಮಾನಗಳನ್ನು ಹಂತ ಹಂತವಾಗಿ ಹಿಂಪಡೆದುಕೊಳ್ಳಲು ಆರಂಭಿಸಿದ್ದರಿಂದ 2016ರಲ್ಲಿ ಅದನ್ನು ರದ್ದು ಮಾಡಲಾಯಿತು. ಅ.8ರಂದು ದಸರೆಯ ದಿನದಂದು ಫ್ರಾನ್ಸ್‌ನಲ್ಲಿ ರಫೇಲ್‌ ಯುದ್ಧ ವಿಮಾನವನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗುತ್ತದೆ. ಅವುಗಳ ನಿರ್ವಹಣೆ ಮತ್ತು ಬಳಕೆಗಾಗಿ 24
ಮಂದಿ ಐಎಎಫ್ನ ಪೈಲಟ್‌ಗಳ ತಂಡವನ್ನು ಆಯ್ಕೆ ಮಾಡಲಾಗಿದೆ. ಹೊಸ ಮಾದರಿಯ ಯುದ್ಧ ವಿಮಾನಗಳ ಬಳಕೆಗೆ 24 ಮಂದಿ ಪೈಲಟ್‌ಗಳಿಗೆ ಸೂಕ್ತ ತರಬೇತಿಯನ್ನೂ ನೀಡಲಾಗುತ್ತದೆ.

ಅ.8ರಂದು ಫ್ರಾನ್ಸ್‌ಗೆ ರಾಜನಾಥ್‌
ಮುಂದಿನ ತಿಂಗಳ ಎಂಟರಂದು ಫ್ರಾನ್ಸ್‌ನಲ್ಲಿ ಮೊದಲ ಹಂತದಲ್ಲಿ ರಫೇಲ್‌ ಯುದ್ಧ ವಿಮಾನಗಳ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ಅದರಲ್ಲಿ ಭಾಗವಹಿಸುವ ನಿಟ್ಟಿನಿಂದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪ್ಯಾರಿಸ್‌ಗೆ ತೆರಳಲಿದ್ದಾರೆ. ಐಎಎಫ್ ಮುಖ್ಯಸ್ಥ ಬಿ.ಎಸ್‌.ಧನೋವಾ ಸೆ.19-20ರ ಅವಧಿಯಲ್ಲಿ ತೆರಳಬೇಕಾಗಿತ್ತಾದರೂ, ಇದೀಗ ಅವರು ರಕ್ಷಣಾ ಸಚಿವರ ಪ್ರವಾಸದ ವೇಳೆಯಲ್ಲಿಯೇ ಫ್ರಾನ್ಸ್‌ಗೆ ತೆರಳಲಿದ್ದಾರೆ. ಕೆಲವೊಂದು ದಾಖಲೆಗಳಿಗೆ ಸಹಿ ಹಾಕುವ ನಿಟ್ಟಿನಲ್ಲಿ ಧನೋವಾ ಮತ್ತು ಹಿರಿಯ ಅಧಿಕಾರಿಗಳು ತೆರಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next