ಹುಬ್ಬಳ್ಳಿ: ಇಲ್ಲಿನ ಘಂಟಿಕೇರಿ ನಿವಾಸಿ ಶಂಕರ ದೊಡ್ಡಮನಿ (65)ಇಳಿವಯಸ್ಸಿನಲ್ಲಿ ಏಕಾಂಗಿಯಾಗಿ ಬೈಕ್ ಮೂಲಕ 14 ದಿನಗಳಲ್ಲಿ ಸುವರ್ಣ ಚತುಷ್ಪಥ ಮಾರ್ಗ ಸಂಚರಿಸುವ ಮೂಲಕ ಯುವಕರಲ್ಲಿ ಸ್ಫೂರ್ತಿ ತುಂಬಿದ್ದಾರೆ.
ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ನಿರ್ಮಾಣದ ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯನ್ನು ಒಮ್ಮೆ ಸುತ್ತಾಡಬೇಕೆಂದು ಕನಸು ಕಂಡಿದ್ದರು. ಆದರೆ ಅವರ ಜಯಂತಿ ಹಿನ್ನೆಲೆಯಲ್ಲಿ ಡಿಸೆಂಬರ್ 20ರಂದು ಚನ್ನಮ್ಮ ವೃತ್ತ ಮೂಲಕ ರ್ಯಾಲಿ ಆರಂಭಿಸಿದ್ದರು. ಹುಬ್ಬಳ್ಳಿಯಿಂದ ಆರಂಭಿಸಿ ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮೂಲಕ ಜ. 3 ರಂದು ನಗರಕ್ಕೆ ಆಗಮಿಸಿದ್ದಾರೆ. ಕಳೆದ 14 ದಿನಗಳಲ್ಲಿ 6400 ಕಿಮೀ. ಕ್ರಮಿಸಿದ್ದಾರೆ. ನಗರಕ್ಕಾಗಮಿಸಿದ ಅವರನ್ನು ಕುಟುಂಬ ಸದಸ್ಯರು, ಮಿತ್ರರು ಬರಮಾಡಿಕೊಂಡರು.
ದಿನವೊಂದಕ್ಕೆ ಸುಮಾರು 450 ಕಿಮೀ. ಕ್ರಮಿಸಿದ್ದಾರೆ. ಮುಂದೆ ಹುಬ್ಬಳ್ಳಿ-ಕನ್ಯಾಕುಮಾರಿ- ಕಾಶ್ಮೀರ-ಹುಬ್ಬಳ್ಳಿಯನ್ನು ಬೈಕಿನಲ್ಲಿ ಸುತ್ತಬೇಕೆನ್ನುವ ಉದ್ದೇಶ ಹೊಂದಿದ್ದು, ಯಾರಾದರೂ ಸಾಥ್ ನೀಡಿದರೆ ಅವರೊಂದಿಗೆ ತೆರಳುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಂಕರ ಅವರು, ಪ್ರಮುಖ ನಾಲ್ಕು ನಗರಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸುತ್ತಾಡಿದ್ದೇನೆ. ಆದರೆ ಇತರೆ ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಗುಣಮಟ್ಟ ನಮ್ಮಲ್ಲಿ ಕಾಣುವ ಸಾಧ್ಯವಿಲ್ಲ. ಹು-ಧಾ ಬೈಪಾಸ್‌ನಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು, ಇದನ್ನು ಅಗಲೀಕರಣ ಮಾಡುವ ಅಗತ್ಯವಿದೆ. ಇಂತಹ ಕ್ಲಿಷ್ಟಕರ ರಸ್ತೆಗಳನ್ನು ಪ್ರವಾಸದ ಸಂದರ್ಭದಲ್ಲಿ ಎಲ್ಲಿಯೂ ಕಾಣಲಿಲ್ಲ. ಈ ಹಿಂದೆ ಒಂದೇ ದಿನದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗಿ ವಾಪಸ್ ಬಂದಿದ್ದೆ. ಒಮ್ಮೆ ಬೆಂಗಳೂರಿಗೆ ಬೈಕ್‌ನಲ್ಲಿ ಪತ್ನಿಯನ್ನು ಕರೆದುಕೊಂಡು ಹೋಗಿ ಬಂದಿದ್ದೆ. ಬೈಕ್ ಹೆಚ್ಚು ಕ್ರೇಜ್ ಹೊಂದಿದ್ದು, ಮುಂದೆ ಇನ್ನಷ್ಟು ಪ್ರವಾಸ ಕೈಗೊಳ್ಳಬೇಕು ಎನ್ನುವ ಹುಮ್ಮಸ್ಸು ಇದೆ ಎಂದರು.
ಪುತ್ರಿ ಶ್ವೇತಾ ದ್ವಂತಿ ಮಾತನಾಡಿ, ಹಿಂದೆ ಸಾಕಷ್ಟು ಬಾರಿ ಬೈಕ್ ಮೂಲಕ ದೂರದ ನಗರಗಳಿಗೆ ಸಂಚರಿಸುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಸುತ್ತಾಡುವ ಕುರಿತು ಪ್ರಸ್ತಾಪಿಸಿದಾಗ ಈ ವಯಸ್ಸಿನಲ್ಲಿ ಹೇಗೆ ಎನ್ನುವ ಆತಂಕವಿತ್ತು. ಆದರೆ ಈ ರ್ಯಾಲಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮೊದಲ ಕೋವಿಡ್ ಸಂದರ್ಭದಲ್ಲಿ ಕೋವಿಡ್‌ಯೇತರ 70 ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವ, ಮನೆಗೆ ಕರೆದುಕೊಂಡು ಬರುವ ಉಚಿತ ಸೇವೆ ಮಾಡಿದ್ದರು ಎಂದರು.
ಶಿವಣ್ಣ ಹಂಗರಕಿ, ಸತೀಶ ದ್ವಂತಿ, ಮಸೂದ್ ಖತೀಬ್, ಶಿವಾನಂದ ಕರಡಿ, ಮಂಜುನಾಥ ಸುದ್ದಿಗೋಷ್ಠಿಯಲ್ಲಿ ಇದ್ದರು.