Advertisement

ಸಾಹಿತ್ಯ ಅಕಾಡೆಮಿಯಿಂದ “ಬಂಗಾರದ ಎಲೆಗಳು’ಯೋಜನೆ 

07:35 AM Aug 20, 2017 | |

ಬೆಂಗಳೂರು: ನಾಡಿನ ಎಲ್ಲ ಸಾಹಿತಿಗಳ ಪ್ರಾಥಮಿಕ ವಿವರಗಳನ್ನು ಹೊಂದಿರುವ ಸಮಗ್ರ ಕೋಶ ರಚಿಸಲು ಕರ್ನಾಟಕ ಸಾಹಿತ್ಯ ಅಕಾಡೆಮಿ “ಬಂಗಾರದ ಎಲೆಗಳು’ ಎಂಬ ವಿಶಿಷ್ಟ ಯೋಜನೆಯನ್ನು ಕಾರ್ಯಗತಗೊಳಿಸಲು ನಿರ್ಧರಿಸಿದೆ.

Advertisement

“ಬಂಗಾರದ ಎಲೆಗಳು’ ಯೋಜನೆಯಡಿ ಹೊರಬರುವ ಸಾಹಿತಿಗಳ ಈ ಸಮಗ್ರ ಕೋಶದಲ್ಲಿ ಸುಮಾರು 200 ವರ್ಷಗಳ ಎಲ್ಲ ಸಾಹಿತಿಗಳ ಸಂಕ್ಷಿಪ್ತ ಪರಿಚಯ ಇರಲಿದೆ. ಈ ಯೋಜನೆಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲು ಅಕಾಡೆಮಿ ಗುರಿ ಇಟ್ಟುಕೊಂಡಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ಶನಿವಾರ ನಡೆದ ಮೊದಲ ಸರ್ವ ಸದಸ್ಯರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಡಾ. ಅರವಿಂದ ಮಾಲಗತ್ತಿ, ಸಾಹಿತಿಗಳ ಕೋಶ ಅಕಾಡೆಮಿಗೆ ಜೀವಕೋಶ ಇದ್ದಂತೆ. ಹಾಗಾಗಿ ಕನ್ನಡದ ಎಲ್ಲ ಸಾಹಿತಿಗಳ ಪ್ರಾಥಮಿಕ ವಿವರಗಳನ್ನು ಒಳಗೊಂಡ ಪುಸ್ತಕ ಹೊರತರುವ ಉದ್ದೇಶದಿಂದ “ಬಂಗಾರದ ಎಲೆಗಳು’ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಯೋಜನೆ ಸ್ವರೂಪ ಗುರುತಿಸುವ ಜವಾಬ್ದಾರಿ ಸ್ಥಾಯಿ ಸಮಿತಿಗೆ ನೀಡಲಾಗಿದೆ ಎಂದರು.

ಸಾಹಿತಿಗಳ ಸಮಗ್ರ ಕೋಶದಲ್ಲಿ ನವೋದಯ ಪೂರ್ವದ ಕೆಂಪು ನಾರಾಯಣನ ಮುದ್ರಾಮಂಜೂಷ ಕೃತಿಯಿಂದ ಪ್ರಾರಂಭಿಸಿ ಇಂದಿನ ಕಾಲದವರೆಗಿನ ಎಲ್ಲ ಲೇಖಕರ ಮಾಹಿತಿ ಒಳಗೊಂಡ ಪುಸ್ತಕ ಹೊರತರುವ ಉದ್ದೇಶವಿದೆ. 1820ರಿಂದ 2020ರವರೆಗಿನ ಎಲ್ಲ ಲೇಖಕರ ಪರಿಚಯ ಇದು ಒಳಗೊಂಡಿರುತ್ತದೆ. ಇದರಲ್ಲಿ ಲೇಖಕನ ಹುಟ್ಟಿದ ದಿನಾಂಕ, ಊರು, ಉದ್ಯೋಗ, ಕುಟುಂಬದ ಸಂಕ್ಷಿಪ್ತ ವಿವರ, ಪ್ರಕಟಿತ ಕೃತಿಗಳು, ಪ್ರಶಸ್ತಿಗಳು, ಸಂದ ಗೌರವಗಳು ಮತ್ತು ವ್ಯಕ್ತಿತ್ವದ ಕುರಿತು ಸಂಕ್ಷಿಪ್ತವಾಗಿ ನೀಡಲಾಗುವುದು. ಪ್ರಮುಖ ಕೃತಿಗಳ ಕುರಿತು ಒಂದೆರಡು ವಾಕ್ಯದ ವಿವರಣೆಯನ್ನೂ ನೀಡುವ ಆಲೋಚನೆ ಇದೆ. ಕನಿಷ್ಠ ಎರಡು ಕೃತಿ ಪ್ರಕಟಿಸಿದವರನ್ನು ಲೇಖಕರು ಎಂದು ಪರಿಗಣಿಸಲು ಚಿಂತಿಸಲಾಗಿದೆ. ಆದರೆ, ಅಕಾಡೆಮಿಯ ಸಭೆಯಲ್ಲಿ ಚರ್ಚಿಸಿ ಸ್ಪಷ್ಟ ನಿರ್ಧಾರಕ್ಕೆ ಬರುವುದಾಗಿ ಅವರು ಮಾಹಿತಿ ನೀಡಿದರು.

ರಾಜ್ಯದ ಯಾವುದೇ ಭಾಗದ ಲೇಖಕ ತಮ್ಮ ವೈಯುಕ್ತಿಕ ವಿವರಗಳು ಹಾಗೂ ತನಗೆ ಗೊತ್ತಿರುವ ನೆರೆಹೊರೆಯ ಲೇಖಕರ, ಈಗಾಗಲೇ ನಿಧನ ಹೊಂದಿರುವ ಲೇಖಕರು, ಸಾಹಿತಿಗಳ ಮಾಹಿತಿಗಳನ್ನು ಅಕಾಡೆಮಿಯ ಇ-ಮೇಲ್‌ -sahithya.academy@gmail.com ವಿಳಾಸಕ್ಕೆ ಕಳುಹಿಸ ಬಹುದು. ಎಲ್ಲ ಕಡೆಯಿಂದ ಮಾಹಿತಿ ಬಂದ ಬಳಿಕ ಯಾವ ಸಾಹಿತಿ, ಲೇಖಕರ ಪರಿಚಯವನ್ನ ಸಾಹಿತ್ಯ ಕೋಶದಲ್ಲಿ ನೀಡಬಹುದು ಎಂಬ ಮಾನದಂಡಗಳನ್ನು ನಿಗದಿಗೊಳಿಸಲಾಗುವುದು. ಸಾಹಿತಿಗಳ ಕೋಶದ ಮಾಹಿತಿ ಮುದ್ರಣ ರೂಪದಲ್ಲಿ ಹೊರತರುವುದರ ಜೊತೆಗೆ ಅಕಾಡೆಮಿಯ ವೈಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಮಾಲಗತ್ತಿ ವಿವರಿಸಿದರು.

Advertisement

ಅಕಾಡೆಮಿಗೆ ಆಧುನಿಕ ಸ್ಪರ್ಶ: ಅರವಿಂದ ಮಾಲಗತ್ತಿ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಉನ್ನತೀಕರಿಸಲು
ನಿರ್ಧರಿಸಲಾಗಿದ್ದು, ಅದರಂತೆ ಟ್ವಿಟರ್‌, ಫೇಸ್‌ಬುಕ್‌, ಗೂಗಲ್‌ ಪ್ಲಸ್‌ಗಳಲ್ಲಿ ಅಕಾಡೆಮಿಯ ಖಾತೆ ಹಾಗೂ ಪುಟ
ತೆರೆಯಲಾಗುವುದು. ಅಕಾಡೆಮಿಯ ಯೋಜನೆಗಳನ್ನು ರೂಪಿಸಲು ಗಣ್ಯರು- ಸಾಹಿತಿಗಳು, ಲೇಖಕರು, ವಿಮರ್ಶಕರ
ಸಭೆ ಕರೆದು ಸಮಾಲೋಚನೆ ನಡೆಸಲಾಗುವುದು. ಇದರ ಜತೆಗೆ ಯುವ ಬರಹಗಾರರ ಸಲಹೆಗಳನ್ನು ಪಡೆದುಕೊಳ್ಳಲಾಗುವುದು.

ಅಕಾಡೆಮಿಯಲ್ಲಿ ಪತ್ಯೇಕ ಮಾರಾಟ ವಿಭಾಗ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಅರವಿಂದ ಮಾಲಗತ್ತಿ ಮಾಹಿತಿ ನೀಡಿದರು.ಸಹ ಸದಸ್ಯರ ನೇಮಕ: ಸರ್ಕಾರ ನೇಮಕ ಮಾಡಿದ ಸದಸ್ಯರಲ್ಲದೇ ಮೂವರು ಸಹ ಸದಸ್ಯರನ್ನು ನೇಮಿಸಿಕೊಳ್ಳುವ ಅಧಿಕಾರ ಅಕಾಡೆಮಿಗೆ ಇದೆ. ಅದರಂತೆ ಕಲಬುರಗಿಯ ವಿಕ್ರಂ ವಿಸಾಜಿ, ತುಮಕೂರಿನ ಶೈಲಾ ನಾಗರಾಜ್‌ ಹಾಗೂ ಮೈಸೂರಿನ ನೀಲಗಿರಿ ತಳವಾರ ಅವರನ್ನು ಅಕಾಡೆಮಿಯ ಸಹ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಮಾಲಗತ್ತಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next