Advertisement

ಮುಚ್ಚಿ ತೆರೆದ ನಾರ್ಯಬೈಲು ಶಾಲೆಗೆ ಸುವರ್ಣ ಸಂಭ್ರಮ

04:50 PM Dec 15, 2017 | |

ಕಾಣಿಯೂರು: ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದರಿಂದ ಸರಕಾರದ ಮಾರ್ಗಸೂಚಿಯಂತೆ ಒಂದು ಬಾರಿ ಮುಚ್ಚಿ, ಊರಿನ ವಿದ್ಯಾಭಿಮಾನಿಗಳ ಸಹಕಾರದೊಂದಿಗೆ ಪುನರಾರಂಭಗೊಂಡ ಬೆಳಂದೂರು ಗ್ರಾ.ಪಂ. ವ್ಯಾಪ್ತಿಯ ಕಾಯಿಮಣ ಗ್ರಾಮದ ನಾರ್ಯಬೈಲು ಸರಕಾರಿ ಕಿರಿಯ
ಪ್ರಾಥಮಿಕ ಶಾಲೆಗೆ ಈ ಬಾರಿ ಸುವರ್ಣ ಮಹೋತ್ಸವದ ಸಂಭ್ರಮ.

Advertisement

1ರಿಂದ 5ನೇ ತರಗತಿವರೆಗೆ ಶಿಕ್ಷಣ ನೀಡುತ್ತಿರುವ ಈ ಶಾಲೆಯಲ್ಲಿ ಈಗ 23 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರಸ್ತುತ ಸುವರ್ಣ ಮಹೋತ್ಸವ ಸಂದರ್ಭದಲ್ಲಿರುವ ಈ ಶಾಲೆ ವಿದ್ಯಾರ್ಥಿಗಳ ಕೊರತೆಯನ್ನು ಈಗಲೂ ಎದುರಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ, ಇಲ್ಲಿ ಅಂಗನವಾಡಿ ಕೇಂದ್ರ ಇಲ್ಲದಿರುವುದು. ಕಾಯಿಮಣದಲ್ಲಿ ಅಂಗನವಾಡಿ ಮಂಜೂರು ಮಾಡಿದರೆ ಈ ಶಾಲೆ ಉಳಿಯುತ್ತದೆ. ಶಾಲೆಗೆ ಮಕ್ಕಳು ಲಭ್ಯರಾಗುತ್ತಾರೆ ಎಂಬುದು ಇಲ್ಲಿನ ಪ್ರಮುಖರ ಅಭಿಮತ.

2011ರಲ್ಲಿ ಮುಚ್ಚಿತ್ತು!
ವಿದ್ಯಾರ್ಥಿಗಳ ಕೊರತೆಯ ಕಾರಣದಿಂದ 2011ರಲ್ಲಿ ಈ ಶಾಲೆಯನ್ನು ಮುಚ್ಚಲಾಗಿತ್ತು. ಊರಿನವರ ಪರಿಶ್ರಮದ ಫಲವಾಗಿ 2013ರಲ್ಲಿ ಮತ್ತೆ ಈ ಶಾಲೆ ಆರಂಭವಾಯಿತು. ಆದರೆ ಮಕ್ಕಳ ಸಂಖ್ಯೆ ಹೆಚ್ಚಳವಾಗಲಿಲ್ಲ.

ಎಲ್‌ಕೆಜಿ ಆರಂಭವಾಗಿತ್ತು
ಊರವರು ಸೇರಿ ಸ್ಥಳೀಯ ಯುವಕ ಮಂಡಲದ ಕಚೇರಿಯಲ್ಲಿ ಎಲ್‌ಕೆಜಿ ತರಗತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೌಖೀಕ ಆದೇಶದಂತೆ ಆರಂಭಿಸಿದ್ದರು. ಬಳಿಕ ಸರಕಾರದ ಸೂಚನೆಯಂತೆ ಇದನ್ನು ಮುಚ್ಚಲಾಯಿತು. ಎಲ್‌ಕೆಜಿಗೆ 18 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದರು. ಅವರಿಗೆ ಯಾವುದೇ ಶುಲ್ಕ ವಿಧಿಸದೆ ಶಾಲೆಯ ಉಳಿವಿನ ಹಿತದೃಷ್ಟಿಯಿಂದ ತರಗತಿ ನಿರ್ವಹಣೆಯನ್ನು ಊರ ಶಿಕ್ಷಣಾಭಿಮಾನಿಗಳು ಮಾಡಿದ್ದರು.

ಅಂಗನವಾಡಿ ಬೇಕು, ಮಕ್ಕಳೂ ಬರಬೇಕು!
ಕಾಯಿಮಣ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಇದ್ದರೂ ಇಲ್ಲಿ ಅಂಗನವಾಡಿ ಇಲ್ಲ. ಪಕ್ಕದ ಊರುಗಳಲ್ಲಿ ಅಂಗನವಾಡಿ ಇದೆ. ಇಲ್ಲಿನ ಪುಟಾಣಿಗಳು ಮುಂದಿನ ಶಿಕ್ಷಣಕ್ಕಾಗಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗೆ ಸೇರ್ಪಡೆಯಾಗುತ್ತಿದ್ದಾರೆ. ಆದ ಕಾರಣ ಕಾಯಿಮಣದಲ್ಲಿ ಅಂಗನವಾಡಿಯನ್ನು ಮಂಜೂರು ಮಾಡಿದರೆ ನಾರ್ಯಬೈಲು ಕಿರಿಯ ಪ್ರಾಥಮಿಕ ಶಾಲೆಯನ್ನು ಉಳಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಸ್ಥಳೀಯರು, ಈ ಕುರಿತು ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.

Advertisement

ಸರಕಾರಿ ಲೆಕ್ಕಾಚಾರದಂತೆ ಶಾಲೆಯ ಆರ್‌ಟಿಸಿಯಲ್ಲಿ 4.30 ಎಕ್ರೆ ನಿವೇಶನ ಇದೆ. ಆದರೆ ಅಳತೆ ಮಾಡಿ ನೋಡಿದಾಗ 1.85 ಎಕ್ರೆ ಮಾತ್ರ ಶಾಲೆ ವಶದಲ್ಲಿದೆ. ಉಳಿದ ನಿವೇಶನ ಏನಾಯಿತು ಎಂಬುದನ್ನರಿಯಲು ಸರ್ವೆ ಇಲಾಖೆಯಿಂದ ಗಡಿ ಗುರುತು ಕಾರ್ಯ ನಡೆಯಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಾಲಾಭಿವೃದ್ಧಿ ಸಮಿತಿಯಿಂದ ಈ ಬಗ್ಗೆ ಸರ್ವೆ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.

ಡಿ. 16: ಸುವರ್ಣ ಮಹೋತ್ಸವ
ನಾರ್ಯಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಸುವರ್ಣ ಮಹೋತ್ಸವ ಮತ್ತು ರಂಗಮಂದಿರ ಉದ್ಘಾಟನ ಸಮಾರಂಭ ಡಿ. 16ರಂದು ನಡೆಯಲಿದೆ. ಶಾಲೆಯು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ 50 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ಹಿರಿಮೆಯನ್ನು ಹೊಂದಿದೆ. ಕಾಯಿಮಣ ಗ್ರಾಮದಲ್ಲಿರುವ ಏಕೈಕ ಶಾಲೆ ಇದು. ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸುವ ಉದ್ದೇಶದಿಂದ ಸುವರ್ಣ ಮಹೋತ್ಸವ ಸಮಿತಿ ಹಾಗೂ ಊರವರ ಸಹಕಾರದಲ್ಲಿ ಸಿದ್ಧತೆ ಮಾಡಲಾಗಿದೆ.
-ರಾಧಾಕೃಷ್ಣ ಮುಂಡಾಳ, ಎಸ್‌ಡಿಎಂಸಿ ಅಧ್ಯಕ್ಷರು

ಅಂಗನವಾಡಿ ತೆರೆದರೆ ಶಾಲೆ ಉಳಿದೀತು
ಇಲ್ಲಿ ಅಂಗನವಾಡಿ ಆರಂಭಿಸಿದರೆ ಮಾತ್ರ ನಾರ್ಯಬೈಲು ಶಾಲೆ ತನ್ನ ಅಸ್ತಿತ್ವ ಉಳಿಸಿಕೊಂಡೀತು. ಇಲ್ಲದಿದ್ದರೆ ಶಾಲೆಗೆ ಸೇರ್ಪಡೆಯಾಗುವ ಮಕ್ಕಳ ಸಂಖ್ಯೆ ವೃದ್ಧಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಮ ಕೈಗೊಳ್ಳಬೇಕು.
ಕಳುವಾಜೆ ವೆಂಕಟ್ರಮಣ ಗೌಡ,
   ಅಧ್ಯಕ್ಷರು ಸುವರ್ಣ ಮಹೋತ್ಸವ ಸಮಿತಿ

ನೂತನ ರಂಗಮಂದಿರ
ಶಾಲೆಗೆ 6 ಲಕ್ಷ ರೂ. ವೆಚ್ಚದಲ್ಲಿ ನೂತನ ರಂಗಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಶಾಸಕರ, ಜಿಲ್ಲಾ ಪಂಚಾಯತ್‌ನ ಯಾವುದೇ ಅನುದಾನ ಲಭ್ಯವಾಗಿಲ್ಲ. ಊರ ದಾನಿಗಳ ಸಹಕಾರದಿಂದ ಈ ಕಾರ್ಯ ನಡೆಯುತ್ತಿದೆ. ವಿದ್ಯಾಭಿಮಾನಿಗಳಿಂದ ಇನ್ನಷ್ಟು ಧನಸಹಾಯವನ್ನು ನಿರೀಕ್ಷಿಸಲಾಗಿದೆ.
ಚಂದ್ರಶೇಖರ್‌ ಮುಂಡಾಳ ,
  ಕಾರ್ಯದರ್ಶಿ ಸುವರ್ಣ ಮಹೋತ್ಸವ ಸಮಿತಿ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next