Advertisement

ಹೆತ್ತವರ ಬೆವರಿನ ಹನಿಗೆ ಮಗಳ ಬಂಗಾರದ ಉಡುಗೊರೆ!

03:02 PM Jan 23, 2018 | |

ವಿಜಯಪುರ: ಸೋಮವಾರ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸದಲ್ಲಿ ಚಿನ್ನ ಬಾಚಿರುವ ಹಲವು ಬಾಲೆಯರಲ್ಲಿ ಚಿನ್ನದ ಹ್ಯಾಟ್ರಿಕ್‌ ಪಡೆದಿರುವ ಮಂಡ್ಯದ ಚಿನ್ನದ ಬಾಲೆ ಬಿಂದು ವಿಭಿನ್ನವಾಗಿ
ನಿಂತಿದ್ದಾಳೆ. ನನ್ನ ಚಿನ್ನದ ಗೊಂಚಲು ಬಡತನದ ಪರಿಚಯ ಇಲ್ಲದಂತೆ ನನ್ನನ್ನು ಬೆಳೆಸಿದ ಹೆತ್ತವರಿಗೆ ಸಲ್ಲಬೇಕು ಎನ್ನುವ ಆಕೆಯ ಮಾತು ಹಲವು ಮಕ್ಕಳಿಗೆ ಸ್ಫೂರ್ತಿಯಾಗಿದೆ.

Advertisement

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ತನ್ನಲ್ಲಿರುವ ಪ್ರತಿಭೆಯನ್ನು ಒರೆಗೆ ಹಚ್ಚಿ ಮೂರು ಚಿನ್ನದ ಪದಕ ಕೊರಳಿಗೆ ಹಾಕಿಕೊಂಡಿರುವ ಮಂಡ್ಯ ಮೂಲದ ವಿದ್ಯಾರ್ಥಿನಿಯ ಕೌಟುಂಬಿಕ ಬದುಕು ಹಾಗೂ ಸಂಕಷ್ಟಗಳನ್ನು ಮೀರಿ ಬೆಳೆದ ರೀತಿ ಎಲ್ಲರಿಗೂ ಸ್ಪೂರ್ತಿಯಾಗಿದೆ. ಊರವರ ಬಟ್ಟೆಗಳನ್ನು ಮಡಿ ಮಾಡಿ, ಇಸ್ತ್ರಿ ಚಿಕ್ಕಿ ಮಡಿಕೆ ಹಾಕಿ ಕೊಡುವ ಶಿವರಾಂ ಅವರ ಪುತ್ರಿ ಎಸ್‌. ಬಿಂದು ಮೂರು ಚಿನ್ನದ ಬಾಚಿದ ಬಾಲೆ. ಅಪ್ಪನ ಪರಿಶ್ರಮದ ಬೆವರಿಗೆ ಮಗಳು ಚಿನ್ನದ ಫಲಿತ ತಂದು ಕೊಟ್ಟಿದ್ದಾಳೆ. ಬ್ಯಾಂಕಿಂಗ್‌ನಲ್ಲಿ ಉನ್ನತ ಸಾಧನೆ ಮೂಲಕ ಉನ್ನತ ಹುದ್ದೆಗೇರಬೇಕು ಎಂಬ ಕನಸು ಕಂಡಿದ್ದಾಳೆ. 

ಇನ್ನು ಮಾತೃಭಾಷೆ ಕನ್ನಡದಲ್ಲೇ ಕಲಿತು ಕೂಲಿ ಮಾಡುವ ಅವ್ವನಿಗೆ ಕೊರಳಿಗೆ ಚಿನ್ನದ ಪದಕಗಳನ್ನು ನೀಡಿದ ಬಾಲೆ ಜಮಖಂಡಿಯ ತಾಯವ್ವ ಮಾಂಗ. ಮನೆಯಲ್ಲಿ ಬಡತನದ್ದೇ ಅಟ್ಟಹಾಸ. ಆದರೆ ಕೂಲಿ ಮಾಡುವ ಅವ್ವ ಹನುಮವ್ವ ತನ್ನ ಮಗಳೂ ಶಿಕ್ಷಣ ಪಡೆಯಬೇಕು. ಉನ್ನತ ಶಿಕ್ಷಣದೊಂದಿಗೆ ದೊಡ್ಡ ಉದ್ಯೋಗಕ್ಕೆ ಸೇರಿಕೊಂಡು ಸಮಾಜಕ್ಕೆ ಬೆಳಕಾಗಲಿ ಎಂಬ ಹಂಬಲ. ಅವ್ವ ಕಂಡ ಕನಸಿನ ಮೊದಲ ಗುರಿ ಸಾಧಿಸಿರುವ ಮಗಳು ಮಾಯವ್ವ, ಮೂರು ಚಿನ್ನದ ಪದಕಗಳನ್ನು ತಂದು ಅವ್ವ ಅಂದುಕೊಂಡಿದನ್ನು ಮಾಡಿ ತೋರಿದ್ದಾಳೆ. ಅವ್ವ ಕೂಲಿ ಮಾಡಿ ಪರಿಶ್ರಮದಿಂದ ನನ್ನನ್ನು ಓದಿಸಿದ ಕಷ್ಟದ ಮುಂದೆ ನನ್ನ ಚಿನ್ನದ ಸಾಧನೆ ಯಾವ ಲೆಕ್ಕ, ಅವ್ವ ಪಟ್ಟ ಕಷ್ಟದ ಬೆವರಿನ ಫಲವೇ ನನ್ನ ಚಿನ್ನದ ಗುಟ್ಟು. ಆಕೆಗಲ್ಲದೇ ಇನ್ನು ಯಾರಿಗೂ ಇದು ಸಲ್ಲದು, ನಾನು ಗಳಿಸಿದ ಚಿನ್ನದ ಗೊಂಚಲು ಅವ್ವನೇ ಅಡಗಿದ್ದಾಳೆ ಎಂದು ಭಾವುಕಳಾದಳು ಮಾಯವ್ವ, ಪಕ್ಕದಲ್ಲೇ ಅವ್ವನನ್ನು ನಿಲ್ಲಿಕೊಂಡು ಚಿನ್ನದ ಪಕಗಳನ್ನು ಆಕೆಗೆ ಸಮರ್ಪಿಸಿದಳು.

ಅರ್ಥಶಾಸ್ತ್ರಜ್ಞೆ ಆಗುವ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಂಡಿರುವ ಬೆಳಗಾವಿ ಜಿಲ್ಲೆ ಬೈಲಹೊಂಗಲದ ಕನ್ಯಾಕುಮಾರಿ ಪೂಜಾರಿ ಚಿನ್ನದ ಬಾಚಿದ ಅನ್ನದಾತನ ಮಗಳು. ಮನೆಯ ಆರ್ಥಿಕ ಆಧಾರವಾಗಿರುವ ಒಕ್ಕಲುತನವನ್ನೇ ನಂಬಿಕೊಂಡಿರುವ ಕನ್ಯಾಕುಮಾರಿ ಅರ್ಥಶಾಸ್ತ್ರದಲ್ಲಿ ಸಾಧಿಸುವ ಗುರಿ ಹಾಕಿಕೊಂಡಿದ್ದಾಳೆ. 
ಒಕ್ಕಲುತನದ ಕುಟುಂಬದ ಹಿನ್ನೆಲೆಯಲ್ಲಿ ಬಂದ ಇವಳು ಅರ್ಥಶಾಸ್ತ್ರಜ್ಞೆಯಾಗುವ ಕನಸು ಕಟ್ಟಿಕೊಂಡಿದ್ದಾರೆ. ಇನ್ನೊಬ್ಬ ಅನ್ನದಾತ ಕಷ್ಟಪಟ್ಟು ನನ್ನನ್ನು ಓದಿಸಿದ ನನ್ನ ಕೃಷಿಕರಾದ ತಂದೆಗೆ ನಾನು ಚಿನ್ನದ ಪದಕವನ್ನು ಉಡುಗೊರೆಯಾಗಿ ನೀಡಿದ್ದೇನೆ. ಅವರು ನನಗಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅವರ ಋಣ ತೀರಿಸಲು ಸಾಧ್ಯವಿಲ್ಲ. ಚಿನ್ನದ ಪದಕ ಪಡೆದ ಖುಷಿ
ಮಾತ್ರ ನಾನು ಅವರಿಗೆ ನೀಡಿದ್ದೇನೆ ಎಂದು ಹಿಂದಿ ವಿಭಾಗದಲ್ಲಿ ಎರಡು ಚಿನ್ನದ ಪದಕ ಪಡೆದ ಕವಿತಾ ಪವಾರ ಸಂತಸ ಹಂಚಿಕೊಂಡಳು.

ಇನ್ನು ಸಮಾಜಶಾಸ್ತ್ರ ವಿಭಾಗದಲ್ಲಿ ಮೂರು ಚಿನ್ನದ ಪದಕ ಪಡೆದ ಪ್ರಿಯಾ ಬೆಳ್ಳೆಣ್ಣವರ ಅವರಿಗೆ ಸಮಾಜಸೇವೆ ಮಾಡುವ ಆಶಯ. ಓದಿದ್ದು ಸಮಾಜಶಾಸ್ತ್ರ. ಭವಿಷ್ಯದಲ್ಲಿ ಸಮಾಜಶಾಸ್ತ್ರದಲ್ಲಿ ಉನ್ನತ ಸಂಶೋಧನೆ ಕೈಗೊಳ್ಳುವ ಜೊತೆಗೆ ಸಮಾಜಸೇವೆ ಮಾಡುವ ಹಂಬಲವನ್ನು ಬೆಳ್ಳೆಣ್ಣವರ ವ್ಯಕ್ತಪಡಿಸಿದರು. 

Advertisement

„ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next