ಉಡುಪಿ: ಉಡುಪಿಯ ಕಡಿಯಾಳಿ ಗಣೇಶೋತ್ಸವ 1967 ರಲ್ಲಿ ಆರಂಭಗೊಂಡು ಜಿಲ್ಲೆಯ ಹಿರಿಯ ಗಣೇಶೋತ್ಸವ ಎಂಬ ಹೆಸರಿಗೆ ಪಾತ್ರವಾದರೆ 1968 ರಲ್ಲಿ ಆರಂಭಗೊಂಡ ಪರ್ಕಳ ಮತ್ತು ಬಾರಕೂರು ಗಣೇಶೋತ್ಸವಗಳು ಈಗ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿವೆ.
ಪರ್ಕಳದ ಗಣೇಶೋತ್ಸವ ಸ್ಥಳೀಯರಾದ ನಾರಾಯಣ ಶೆಟ್ಟಿಗಾರ್, ರಾಮದಾಸ ಹೆಗ್ಡೆ, ಮುರಳೀಧರ ತಂತ್ರಿ, ತಿಮ್ಮಪ್ಪ ಶೆಟ್ಟಿ, ಸದಾನಂದ ಪರ್ಕಳ, ಕಡ್ತಲ ರಾಮಚಂದ್ರ ನಾಯಕ್, ಪಿ. ಕೃಷ್ಣ ಶೆಟ್ಟಿಗಾರ್, ಪಿ.ಕೃಷ್ಣದಾಸ ಉಪಾಧ್ಯಾಯ ಅವರ ಸಮನ್ವಯದ ಚಿಂತನೆಯಲ್ಲಿ ಆರಂಭಗೊಂಡಿತು. ಆ ವರ್ಷ ಅಧ್ಯಕ್ಷರು, ಸಮಿತಿ ಇರಲಿಲ್ಲ. ಮರು ವರ್ಷ ಅಧ್ಯಕ್ಷರಾಗಿ ಆಯ್ಕೆಯಾದ ಗುರುರಾಜ ಜೋಯಿಸ್ ನಿರಂತರ ಇದೇ ಹುದ್ದೆಯಲ್ಲಿ ಮುಂದುವರಿದರು. 1980 ರಲ್ಲಿ ದೇವದಾಸ ಹೆಗ್ಡೆಯವರು ಅಧ್ಯಕ್ಷರಾದರು. 1981 ರಿಂದ 2002 ರವರೆಗೆ ಗುರುರಾಜ ಜೋಯಿಸರು ಅಧ್ಯಕ್ಷರಾದರೆ ಅವರ ಕಾಲಾನಂತರ ಅವರ ಪುತ್ರ ಶ್ರೀನಿವಾಸ ಉಪಾಧ್ಯಾಯರು ಅಧ್ಯಕ್ಷರಾಗಿದ್ದಾರೆ. ಪ್ರಸ್ತುತ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಮಹೇಶ್ ಠಾಕೂರ್, ಕಾರ್ಯದರ್ಶಿ ಹೆರ್ಗ ದಿನಕರ ಶೆಟ್ಟಿ, ಕಾರ್ಯದರ್ಶಿಯಾಗಿ ಮನೋಜ್ ಹೆಗ್ಡೆ ಕಾರ್ಯನಿರ್ವಹಿಸುತ್ತಿದ್ದಾರೆ.
1968 ರಲ್ಲಿ ಪರ್ಕಳ ಬೇಳಂಜೆ ವಿಠಲ ಹೆಗ್ಡೆಯವರ ಕಟ್ಟಡದಲ್ಲಿ ಇರಿಸಿ ಗಣಪತಿ ವಿಗ್ರಹವನ್ನು ಪೂಜಿಸಲಾಯಿತು. ಮರು ವರ್ಷ ಆ ಕಟ್ಟಡದಲ್ಲಿ ಸಿಂಡಿಕೇಟ್ ಬ್ಯಾಂಕ್ ಆರಂಭಗೊಂಡಿತು. ಆಗ ಭಕ್ತ ಬಿಲ್ಡಿಂಗ್‌ನಲ್ಲಿ, 1970 ರಲ್ಲಿ ಜೈಹಿಂದ್ ಬಿಲ್ಡಿಂಗ್‌ನಲ್ಲಿ, ಅನಂತರ 1980 ರವರೆಗೆ ಹೆರ್ಗ ಗ್ರಾ.ಪಂ. ಪಂಚಾಯತ್ ಕಟ್ಟಡದಲ್ಲಿ, 1981 ರಿಂದ 2003 ರವರೆಗೆ ಗಾಂಧೀ ಮೈದಾನದಲ್ಲಿ ಗಣಪತಿ ಪೂಜೆಗೊಂಡರೆ 2004 ರಲ್ಲಿ ಸರಕಾರದ 15 ಸೆಂಟ್ಸ್ ಜಾಗ, ದಯಾನಂದ ಶೆಣೈಯವರು ದಾನವಾಗಿ ನೀಡಿದ 5 ಸೆಂಟ್ಸ್ ಜಾಗದಲ್ಲಿ ಆತ್ರಾಡಿ ದಿಲೀಪ್‌ರಾಜ್ ಹೆಗ್ಡೆ ನೇತೃತ್ವ, ಕಬಿಯಾಡಿ ಜಯರಾಮ ಆಚಾರ್ಯ ಅಧ್ಯಕ್ಷತೆಯಲ್ಲಿ 4,000 ಚದರಡಿಯ ಸ್ವಂತ ಕಟ್ಟಡ ನಿರ್ಮಾಣಗೊಂಡಿತು. ಅಂದಿನಿಂದ ಇದೇ ಸ್ಥಳದಲ್ಲಿ ಗಣಪತಿ ಪೂಜೆಗೊಳ್ಳುತ್ತಿದ್ದಾನೆ. ಈಗ ಸುವರ್ಣ ಮಹೋತ್ಸವ ನಿಮಿತ್ತ ದಿಲೀಪ್‌ರಾಜ್ ಹೆಗ್ಡೆಯವರ ನೇತೃತ್ವದಲ್ಲಿ ಭೋಜನ ಸಭಾಂಗಣ ನಿರ್ಮಾಣಗೊಂಡಿದ್ದು ಗಣೇಶ ಚತುರ್ಥಿ ಶುಭವಸರದಲ್ಲಿ ಉದ್ಘಾಟನೆಗೊಳ್ಳಲಿದೆ.
ಬಾರಕೂರಿನ ಗಣೇಶೋತ್ಸವದ ಗಣಪತಿ ಪೂಜೆ ಆರಂಭದಿಂದ ಇದುವರೆಗೆ ಪಟ್ಟಾಭಿರಾಮಚಂದ್ರ ದೇವಸ್ಥಾನದಲ್ಲಿ ಒಂದೇ ಕಡೆ ನಡೆಯುತ್ತಿರುವುದು ವಿಶೇಷ. ಆರಂಭದಿಂದ ಇದುವರೆಗೆ ಬಿ.ಮಂಜುನಾಥ ಪೈ, ಎನ್.ನಾಗೇಶ್ ಕಾಮತ್, ಎಂ. ನಾರಾಯಣ ಭಂಡಾರ್‌ಕರ್, ವೈ. ಗಣಪತಿ ಕಾಮತ್ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಎಂ.ವೆಂಕಟರಮಣ ಭಂಡಾರ್‌ಕರ್, ಕಾರ್ಯದರ್ಶಿಯಾಗಿ ವೈ.ಮೋಹನದಾಸ ಕಾಮತ್, ಖಜಾಂಚಿಯಾಗಿ ಸುರೇಶ ಪೈ ಕಾರ್ಯನಿರ್ವಹಿಸುತ್ತಿದ್ದಾರೆ.
ಮೈಸೂರಿನ ಮಂಗಳೂರು ಗಣೇಶ್ ಬೀಡಿಯ ಗೋವಿಂದ ರಾವ್ ಅವರ ಸಲಹೆ ಮೇರೆಗೆ ಗಣೇಶನನ್ನು ಪೂಜಿಸುವ ಕ್ರಮ ಆರಂಭವಾಯಿತು. ಆಗ 1,005 ರೂ. ದೇಣಿಗೆ ಕೊಟ್ಟು ಅವರು ಪ್ರೋತ್ಸಾಹಿಸಿದ್ದರು. ಈಗಲೂ ಗೋವಿಂದ ರಾವ್ ಅವರ ಪುತ್ರ ಎಂ.ಜಗನ್ನಾಥ ಶೆಣೈ ಪ್ರೋತ್ಸಾಹ ನೀಡುತ್ತಿದ್ದು ಸುವರ್ಣ ಮಹೋತ್ಸವದ ಸವಿನೆನಪಿನ ಕಾರ್ಯಕ್ರಮದಲ್ಲಿ ಆ. 29 ರಂದು ಪಾಲ್ಗೊಳ್ಳುವರು. ಅಂದು ಗಣಪತಿ ವಿಗ್ರಹ ತಯಾರಿಗೆ 30 ರೂ. ಖರ್ಚಾದರೆ ಇಗ 20,000 ರೂ. ಖರ್ಚಾಗುತ್ತಿದೆ. ಸುವರ್ಣ ಮಹೋತ್ಸವದ ಸ್ಮರಣಾರ್ಥ ಗೋವಿಂದ ರಾವ್ ಹೆಸರಿನಲ್ಲಿ ಭೋಜನಶಾಲೆಯ ನಿರ್ಮಾಣಕ್ಕೆ ಆ. 29 ರಂದು ಭೂಮಿಪೂಜೆ ನಡೆಯುತ್ತಿದೆ. ಆ. 29 ರಂದು ಎರಡೂ ಕಾರ್ಯಕ್ರಮಗಳಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಪಾಲ್ಗೊಳ್ಳುವರು.