Advertisement
ಸ್ವರ್ಣ ಪುಷ್ಪಮಾರ್ಚ್ – ಮೇ ತಿಂಗಳಲ್ಲಿ ಹಳದಿ ಬಣ್ಣದ ಹೂವನ್ನು ಗೊಂಚಲು ಗೊಂಚಲಾಗಿ ಮರ ತುಂಬಾ ಬಿಟ್ಟು ಮೈಮನ ಪುಳಕಗೊಳಿಸುವ ಕೊನ್ನೆ ಹೂ ಎಂಬ ಹೆಸರಿನಿಂದ ಕರೆಯಲ್ಪಡುವ ಕಕ್ಕೆ ಅಥವಾ ಸ್ವರ್ಣ ಪುಷ್ಪವನ್ನು ಇಂಗ್ಲಿಷ್ ಭಾಷೆಯಲ್ಲಿ ಗೋಲ್ಡನ್ ಶವರ್ ಟ್ರೀಸ್ ಎಂದೇ ಕರೆಯಲ್ಪಟ್ಟಿದೆ. ಇದು ಥೈಲ್ಯಾಂಡ್ ದೇಶದ ರಾಷ್ಟ್ರೀಯ ಪುಷ್ಪ. ಕೇರಳ ರಾಜ್ಯದ ರಾಜ್ಯ ಪುಷ್ಪವಾಗಿದೆ. ತಮಿಳಿನಲ್ಲಿ ಈ ಹೂವನ್ನು ಕೊಂಡ್ರೈ ಎಂದು ಕರೆಯುತ್ತಾರೆ. ಫಬಸಿಯ ಕುಟುಂಬಕ್ಕೆ ಸೇರಿದ ಕಾಸಿಯ ಫಿಸ್ಟೂಲ ಎಂಬುದು ಸಸ್ಯಶಾಸ್ತ್ರೀಯ ಹೆಸರು. ಸಂಸ್ಕೃತದಲ್ಲಿ ಸುವರ್ಣಕ, ಮಲಯಾಳದಲ್ಲಿ ‘ಕೊನ್’ ಮುಂತಾದ ಹೆಸರಿದೆ. ಇಂಡಿಯಾನಾ ಲಬರ್ನಮ್ ಎಂಬ ಹೆಸರಿನಿಂದಲೂ ಕರೆಯಲ್ಪಡುವುದಿದೆ.
ವರುಷದ ಆರಂಭದಲ್ಲಿ ಮೊದಲ ನೋಟಕ್ಕೆ ಆರಾಧ್ಯ ದೇವರನ್ನು ನೋಡುವ ಕ್ರಮವನ್ನು ಕಣಿ ಕಾಣುವುದು ಎನ್ನಲಾಗುತ್ತದೆ. ಕಣಿ ಎಂದರೆ ಶ್ರೇಯಸ್ಸು, ಶಕುನ, ಭವಿಷ್ಯ ಎಂಬ ಅರ್ಥಗಳೂ ಇವೆ. ಮನೆಯನ್ನು ಸಿಂಗರಿಸಿ ಹಿಂದಿನ ದಿನ ರಾತ್ರಿಯೇ ದೇವರ ವಿಗ್ರಹದ ಜತೆಗೆ ಕಣಿಯ ಸಾಮಗ್ರಿಗಳನ್ನು ಇರಿಸಲಾಗುತ್ತದೆ. ನವ ಧಾನ್ಯಗಳು, ಬಟ್ಟೆಬರೆ, ಬಂಗಾರದ ಆಭರಣ. ಫಲವಸ್ತುಗಳು ಇತ್ಯಾದಿಗಳೊಂದಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ಪಾತ್ರೆಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ ಮತ್ತು ಕನ್ನಡಿ ಇರಿಸಲಾಗುತ್ತದೆ. ಕಣಿ ಸಿದ್ಧಪಡಿಸುವ ಸಂದರ್ಭದಲ್ಲಿ ಬಂಗಾರದ ಹೂ ಕೊನ್ನೆ ಹೂಗಳನ್ನು ಜೋಡಿಸುತ್ತಾರೆ. ಎಲ್ಲರೂ ಬೆಳಗಿನ ಜಾವವೇ ಎದ್ದು, ಮಿಂದು ಹೊಸಬಟ್ಟೆ ಧರಿಸಿ ಗುರುಹಿರಿಯರಿಗೆ ವಂದಿಸಿ ನಂತರ ಕಣಿ ಕಾಣುತ್ತಾರೆ. ಕಣಿ ಕಂಡ ತತ್‌ಕ್ಷಣ ಕನ್ನಡಿಯಲ್ಲಿ ತಮ್ಮ ಮುಖವನ್ನೇ ನೋಡಿಕೊಳ್ಳಬೇಕು ಎಂದೂ ಸಾಂಪ್ರದಾಯಿಕ ಹೇಳಿಕೆಯೊಂದಿದೆ. ಇದರಿಂದ ಆಯುರಾರೋಗ್ಯ, ಐಶ್ವರ್ಯಗಳ ಸಮೃದ್ಧಿಯಾಗುವುದು ಎಂಬ ಆಶಯ ಅಡಗಿದೆ ಎಂದು ಹಿರಿಯರು ಹೇಳುತ್ತಾರೆ. ಒಕ್ಕಲುಗಳ ಕಾಲದಲ್ಲಿ ಒಕ್ಕಲಿನಲ್ಲಿ ಇದ್ದವರು ದನಿಗಳಿಗೆ ‘ಬಿಸುಕಾಣಿಕೆ’ ಕೊಡುವ ಒಂದು ಸಂಪ್ರದಾಯವಿತ್ತು. ಆದರೆ ಅದು ಈಗ ತುಂಬಾ ಕಡಿಮೆಯಾಗಿದೆ.
Related Articles
Advertisement