ಬೆಂಗಳೂರು: ರೈತರ ಸರಣಿ ಆತ್ಮಹತ್ಯೆಗಳು ಯುವಕರನ್ನು ಕೃಷಿಯಿಂದ ವಿಮುಖಗೊಳಿಸುತ್ತಿವೆ. ಆದರೆ, ಈ ಆತ್ಮಹತ್ಯೆಗಳು ಆ ಯುವತಿಯನ್ನು ಕೃಷಿ ಶಿಕ್ಷಣಕ್ಕೆ ಕರೆತರುವಂತೆ ಮಾಡಿದವು. ಈಗ ಅದೇ ವಿದ್ಯಾರ್ಥಿನಿ ಕೃಷಿ ವಿಜ್ಞಾನ ಪದವಿಯಲ್ಲಿ ಚಿನ್ನದ ಹುಡುಗಿಯಾಗಿ ಮಿನುಗುತ್ತಿದ್ದಾಳೆ!
ಮಿಥಿಲಾ ಹೆಗ್ಡೆ, ಆ ಚಿನ್ನದ ಹುಡುಗಿ. ಮೂಲ ಉಡುಪಿಯಾದರೂ ಹುಟ್ಟಿ, ಬೆಳೆದಿದ್ದು ಮಹಾರಾಷ್ಟ್ರದ ಮುಂಬೈ. ಬಿಎಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ)ಗೆ ಆಯ್ಕೆ ಮಾಡಿಕೊಂಡಿದ್ದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ. ಶುಕ್ರವಾರ ವಿವಿಯ 52ನೇ ಘಟಿಕೋತ್ಸವದಲ್ಲಿ ಕುಲಾಧಿಪತಿ ವಜುಭಾಯಿ ವಾಲ ಅವರು ಮಿಥಿಲಾ ಅವರಿಗೆ ಆರು ಚಿನ್ನದ ಪದಕಗಳು ಮತ್ತು ಒಂದು ಚಿನ್ನದ ಪದಕದ ಪ್ರಮಾಣಪತ್ರ ನೀಡಿ ಗೌರವಿಸಿದರು.
ನಿರ್ಲಕ್ಷ್ಯವೂ ಪ್ರೇರಣೆಯಾಯ್ತು: ನಂತರ ಉದಯವಾಣಿಯೊಂದಿಗೆ ತಮ್ಮ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡ ಮಿಥಿಲಾ ಹೆಗ್ಡೆ, ನಾನು ಎಸ್ಸೆಸ್ಸೆಲ್ಸಿ ಆಸುಪಾಸು ಇದ್ದಾಗಲೇ ವಿದರ್ಭ ರೈತರ ಸರಣಿ ಆತ್ಮಹತ್ಯೆಗಳು ನನ್ನನ್ನು ತುಂಬಾ ಕಾಡಿದವು. ನಿತ್ಯ ನಾವು ಬದುಕಬೇಕಾದರೆ, ರೈತ ಆಹಾರ ಉತ್ಪಾದನೆ ಮಾಡಬೇಕು. ಇಷ್ಟು ಅನಿವಾರ್ಯವಾಗಿದ್ದರೂ ಯಾಕೆ ಕೃಷಿ ಕ್ಷೇತ್ರ ಇಷ್ಟೊಂದು ನಿರ್ಲಕ್ಷ್ಯಕ್ಕೊಳಪಟ್ಟಿದೆ ಎಂದು ಯೋಚನೆಗೆ ಹಚ್ಚಿತು. ಅಷ್ಟೇ ಅಲ್ಲ, ಯಾಕೆ ಎಲ್ಲರೂ ಡಾಕ್ಟರ್ ಅಥವಾ ಎಂಜಿನಿಯರ್ ಆಗಲು ಬಯಸುತ್ತಾರೆ ಎಂಬ ಪ್ರಶ್ನೆಯೂ ಕಾಡಿತು. ಇದು ನನಗೆ ಕೃಷಿ ಪದವಿಗೆ ಪ್ರೇರೇಪಿಸಿತು ಎಂದು ಹೇಳಿದರು.
ನನ್ನ ನಿರ್ಧಾರಕ್ಕೆ ಅಪ್ಪ-ಅಮ್ಮನ ಸಹಕಾರವೂ ಸಿಕ್ಕಿತು. ಅಪ್ಪ ಮುಂಬೈನ ದೂರಸಂಪರ್ಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಾನು ಮುಂದೆ ಅಹಮದಾಬಾದ್‌ನ ಐಐಎಂನಲ್ಲಿ ಎಂಬಿಎ ಮಾಡಲಿದ್ದು, ತದನಂತರ ಕಾರ್ಪೋರೇಟ್ ಕ್ಷೇತ್ರದಲ್ಲಿ ಸ್ವಲ್ಪ ಅನುಭವ ಪಡೆಯುತ್ತೇನೆ. ಆಮೇಲೆ ನಾನೇ ಕೃಷಿ ಉದ್ಯಮ ಆರಂಭಿಸಲು ಉದ್ದೇಶಿಸಿದ್ದೇನೆ. ಕಲಿತದ್ದೆಲ್ಲವನ್ನೂ ಕೃಷಿ ಕ್ಷೇತ್ರಕ್ಕೆ ಧಾರೆ ಎರೆಯುತ್ತೇನೆಎಂದು ತಿಳಿಸಿದರು.
ಸಹನಾಗೆ ಅತಿ ಹೆಚ್ಚು ಚಿನ್ನ: ಮತ್ತೋರ್ವ ಚಿನ್ನದ ಹುಡುಗಿ ಸಹನಾ ಭಟ್. ಈ ಮೊದಲು ಡಾಕ್ಟರ್ ಆಗಲು ಬಯಸಿದ ಸಹನಾ ಅವರಿಗೆ ಯಾವುದೋ ಒಂದು ಕ್ಷಣದಲ್ಲಿ ಅನಿಸಿದ್ದು-ಡಾಕ್ಟರ್ ಇಲ್ಲದೆ ಬದುಕಬಹುದು. ಆದರೆ, ಕೃಷಿ ಇಲ್ಲದೆ ಬದುಕುವುದು ಹೇಗೆಎಂಬ ಪ್ರಶ್ನೆ ಹುಟ್ಟಿತು. ಮರುಗಳಿಗೆಯಲ್ಲಿ ಅವರ ಗುರಿ ಬದಲಾಯಿತು. ಈಗ ಅವರು ಇಡೀ ಘಟಿಕೋತ್ಸವದಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಡಾಕ್ಟರ್ ಆಗ್ತೀನೆ. ಆದರೆ, ಕೃಷಿಯಲ್ಲಿ!: ಅದೇ ರೀತಿ, ಕೃಷಿ ಕುಟುಂಬದಿಂದಲೇ ಬಂದ ಚಿನ್ನದ ಹುಡುಗ ಎಂ.ಎಸ್. ಉದಯಕುಮಾರ್, ಕೃಷಿ ವೈದ್ಯನಾಗುವತ್ತ ಹೆಜ್ಜೆ ಇಟ್ಟಿದ್ದಾರೆ.
ಎಂಬಿಬಿಎಸ್ ಮಾಡಲು ಹೊರಟ ಕೋಲಾರದ ಉದಯಕುಮಾರ್‌ಗೆ ಸೀಟು ಸಿಗಲಿಲ್ಲ. ಸಿಕ್ಕಿದ್ದರೂ ಆ ಶಿಕ್ಷಣದ ವೆಚ್ಚ ಭರಿಸಲು ಶಕ್ತಿಯೂ ಅವರ ಪೋಷಕರಿಗೆ ಇರಲಿಲ್ಲ. ಇದೆಲ್ಲವನ್ನೂ ಮನಗಂಡು ಅವರು ಆಯ್ಕೆ ಮಾಡಿಕೊಂಡಿದ್ದು ಎಂಎಸ್ಸಿ (ಕೃಷಿ ಅರ್ಥಶಾಸ್ತ್ರ). ಇದರಿಂದ ಕಷ್ಟಪಟ್ಟು ಓದಿದ ಅವರು ಇಂದು ಏಳು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು.
ಈ ಸಂದರ್ಭದಲ್ಲಿ ಉದಯವಾಣಿಯೊಂದಿಗೆ ಮಾತಿಗಿಳಿದ ಅವರು, ಕೃಷಿ ಕುಟುಂಬದಿಂದ ಬಂದ ನಾನು ಡಾಕ್ಟರ್ ಆಗಬೇಕು ಎಂದು ಮನೆಯವರೆಲ್ಲರೂ ಕನಸು ಕಂಡಿದ್ದರು. ಆದರೆ, ಸೀಟು ಸಿಗಲಿಲ್ಲ. ಅಂದು ಸೀಟು ಸಿಗದೆ ಇರುವುದು ಒಳ್ಳೆಯದಾಯ್ತು ಅನಿಸುತ್ತಿದೆ. ಅದಕ್ಕಿಂತ ಒಳ್ಳೆಯ ಸೇವೆ ಮಾಡುವ ಅವಕಾಶ ಇಲ್ಲಿ ಸಿಗಲಿದೆ. ಕುಟುಂಬದ ಸದಸ್ಯರ ಆಸೆಯಂತೆಯೇ ಡಾಕ್ಟರ್ ಕೂಡ ಆಗುತ್ತೇನೆ. ಆದರೆ, ಕೃಷಿ ಡಾಕ್ಟರ್! ಪಿಎಚ್‌ಡಿ ಮಾಡಿ ಪ್ರೊಫೆಸರ್ ಆಗುವ ಗುರಿ ಇದೆಎಂದು ಹೇಳಿದರು.
– ವಿಜಯಕುಮಾರ್ ಚಂದರಗಿ