ನಾಯಕನನ್ನು ಇಲ್ಲಿ ಸುಮಾರು 75 ವರ್ಷದ ವ್ಯಕ್ತಿಯನ್ನಾಗಿಸಲು ಸಾಕಷ್ಟು ಯೋಚಿಸಿ, ಚರ್ಚಿಸಿ ಒಳ್ಳೆಯ ಮೇಕಪ್ ಮ್ಯಾನ್ ಹುಡುಕಿ ಕರೆತರಲಾಗಿದೆ. ಪ್ರತಿ ದಿನ ಈ ಮೇಕಪ್‌ಗಾಗಿಯೇ ಸುಮಾರು 4 ತಾಸು ಸಮಯ ಬೇಕಾಗುತ್ತಿತ್ತು. ನಾಯಕನ ಮುಖಕ್ಕೆ ಹೋಲಿಕೆಯಾಗುವ ಮೇಕಪ್ ಹಾಗು ಮೋಲ್ಡ್‌ಗೆ ಒಂದು ತಿಂಗಳ ತಯಾರಿ ಬೇಕು…
ವಿಜಯರಾಘವೇಂದ್ರ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ಮಾಡಿಕೊಂಡು ಬಂದ ಪಾತ್ರಗಳಿಗೆ ಹೋಲಿಸಿದರೆ, ಇಲ್ಲೊಂದು ಚಿತ್ರದ ಪಾತ್ರ ವಿಭಿನ್ನ ಮತ್ತು ವಿನೋದ ಎನ್ನಬಹುದು. ಅಷ್ಟರಮಟ್ಟಿಗೆ ಅವರು ಈ ಬಾರಿ ಹೊಸ ಆಲೋಚನೆಯುಳ್ಳ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ. ಆ ಚಿತ್ರ ಬೇರಾವುದು ಅಲ್ಲ, “ಮಾಲ್ಗುಡಿ ಡೇಸ್’. ಈಗಾಗಲೇ ಚಿತ್ರೀಕರಣ ಪೂರೈಸಿರುವ ಈ ಚಿತ್ರ ಜನವರಿ ಕೊನೆಯ ವಾರದಲ್ಲಿ ತೆರೆಗೆ ಬರಲಿದೆ.
ಅಂದಹಾಗೆ, “ಮಾಲ್ಗುಡಿ ಡೇಸ್’ ಅಂದಾಕ್ಷಣ ಶಂಕರ್‌ನಾಗ್ ನೆನಪಾಗುತ್ತಾರೆ. ಕಾರಣ, “ಮಾಲ್ಗುಡಿ ಡೇಸ್’ ಎಂಬ ಧಾರಾವಾಹಿಯನ್ನು ಶಂಕರ್‌ನಾಗ್ ನಿರ್ದೇಶಿಸಿ ನಟಿಸಿ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಈಗ ಅದೇ ಹೆಸರಿನ “ಮಾಲ್ಗುಡಿ ಡೇಸ್’ ಚಿತ್ರ ಆಗಿದೆಯಾದರೂ, ಅದಕ್ಕೂ ಇದಕ್ಕೂ ಯಾವ ಸಂಬಂಧವಿಲ್ಲ. ಈಗಾಗಲೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ. ಚಿತ್ರವನ್ನು ಕಿಶೋರ್ ಮೂಡುಬಿದ್ರೆ ನಿರ್ದೇಶಿಸಿದ್ದಾರೆ. ಆ ಬಗ್ಗೆ ಹೇಳುವ ಕಿಶೋರ್ ಮೂಡುಬಿದ್ರೆ, : “ಮಾಲ್ಗುಡಿ ಎಂಬ ಊರಲ್ಲಿ ನಡೆಯುವ ಕಾಲ್ಪನಿಕ ಕಥೆ ಇದು. ಮುಖ್ಯವಾಗಿ ಈ ಚಿತ್ರ ನೆನಪುಗಳ ಸುತ್ತ ಸಾಗಲಿದ್ದು, ಚಿತ್ರ ನೋಡುವ ಪ್ರತಿಯೊಬ್ಬರಿಗೂ ಇದು ತಮ್ಮ ಸುತ್ತಮುತ್ತಲಿನಲ್ಲಿ ನಡೆದ ಕಥೆಯೇನೋ ಎಂಬ ಭಾಸವಾಗುತ್ತದೆ. ಈ ಚಿತ್ರದ ಹೈಲೈಟ್ ಅಂದರೆ ವಿಜಯ ರಾಘವೇಂದ್ರ ಅವರು 75 ವರ್ಷ ವ್ಯಕ್ತಿಯಾಗಿ ಕಾಣಿಸಿಕೊಂಡಿರುವುದು. ಪ್ರಾಸ್ಥೆಟಿಕ್ ಮೇಕಪ್ ಮೂಲಕ ಅವರೊಬ್ಬ ಸಾಹಿತಿಯಾಗಿ ಮೊದಲ ಬಾರಿಗೆ ನಟಿಸಿದ್ದಾರೆ. ಚಿತ್ರದುದ್ದಕ್ಕೂ ವಿಜಯ ರಾಘವೇಂದ್ರ ಅವರು ವಯಸ್ಸಾದ ವ್ಯಕ್ತಿಯ ಗೆಟಪ್‌ನಲ್ಲೇ ಕಾಣುತ್ತಾರೆ. ಕೇರಳ ಮೂಲದ ರೋಶನ್ ಆ ಮೇಕಪ್ ಮಾಡಿದ್ದಾರೆ. ಇದು ಬಿಟ್ಟರೆ, ಇದರ ನಡುವೆ ಬೇರೆ ಗೆಟಪ್ ಇದ್ದರೂ, ಅದು ಸಹ ವಿನೂತನವಾಗಿಯೇ ಇರಲಿದೆ. ಅದನ್ನು ತೆರೆ ಮೇಲೆ ನೋಡಬೇಕೆಂಬುದು ನಿರ್ದೇಶಕರ ಹೇಳಿಕೆ.
ವಿಜಯರಾಘವೇಂದ್ರ ಅವರ ಸಿನಿಜರ್ನಿಯಲ್ಲಿ ಇದೊಂದು ಹೊಸಬಗೆಯ ಚಿತ್ರ ಮತ್ತು ಪಾತ್ರ ಎನ್ನುವ ನಿರ್ದೇಶಕರು, ನಾಯಕನನ್ನು ಇಲ್ಲಿ ಸುಮಾರು 75 ವರ್ಷದ ವ್ಯಕ್ತಿಯನ್ನಾಗಿಸಲು ಸಾಕಷ್ಟು ಯೋಚಿಸಿ, ಚರ್ಚಿಸಿ ಒಳ್ಳೆಯ ಮೇಕಪ್ ಮ್ಯಾನ್ ಹುಡುಕಿ ಕರೆತರಲಾಗಿದೆ. ಪ್ರತಿ ದಿನ ಈ ಮೇಕಪ್‌ಗಾಗಿಯೇ ಸುಮಾರು 4 ತಾಸು ಸಮಯ ಬೇಕಾಗುತ್ತಿತ್ತು. ನಾಯಕನ ಮುಖಕ್ಕೆ ಹೋಲಿಕೆಯಾಗುವ ಮೇಕಪ್ ಹಾಗು ಮೋಲ್ಡ್‌ಗೆ ಒಂದು ತಿಂಗಳ ತಯಾರಿ ಬೇಕು. ವಿಜಯರಾಘವೇಂದ್ರ ಅವರು ಪಾತ್ರಕ್ಕೆ ಸಾಕಷ್ಟು ತಯಾರಿ ನಡೆಸಿದ್ದಾರೆ. ಅಷ್ಟೇ ಪ್ರೀತಿಯಿಂದ ಆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ತೀರ್ಥಹಳ್ಳಿ, ಮಂಗಳೂರು, ಪಾಂಡಿಚೇರಿ, ಬಾಳೆಹೊನ್ನೂರು, ಕಳಸ, ಶೃಂಗೇರಿ, ಆಗುಂಬೆ ಸುತ್ತಮುತ್ತಲ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ರತ್ನಾಕರ್ ನಿರ್ಮಾಪಕರು.