Advertisement
ಹೌದು, ಅಂದುಕೊಂಡಿದ್ದನ್ನು ಸಾಧಿಸಲು ಇರಬೇಕಾದ ಛಲ, ಶ್ರದ್ಧೆ, ನಿರಂತರ ಅಭ್ಯಾಸವನ್ನು ತಪಸ್ಸಿನ ಮಾದರಿಯಲ್ಲಿ ಅಳವಡಿಸಿಕೊಂಡಿದ್ದಾಗಲೇ ಯಶಸ್ಸು ಸಾಧ್ಯ. ಇಂಥ ಪ್ರಾಮಾಣಿಕ ಯಶಸ್ಸನ್ನು ಮೊನ್ನೆ ಮೊನ್ನೆಯಷ್ಟೇ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ 21ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಳುಗಳು ಗಳಿಸಿಬಂದಿದ್ದಾರೆ. ಇದು ಸಹಜವಾಗಿಯೇ ದೇಶದ ಕ್ರೀಡಾಭಿಮಾನಿಗಳಲ್ಲಿ ಖುಷಿ ತಂದಿದೆ. ಅಷ್ಟೇ ಅಲ್ಲ, ಬೆಟ್ಟದಷ್ಟು ಕನಸು ಹೊತ್ತು ಅಭ್ಯಾಸ ನಡೆಸುತ್ತಿರುವ ದೇಶದ ಯುವ ಕ್ರೀಡಾಳುಗಳಲ್ಲಿ ಆತ್ಮವಿಶ್ವಾಸವನ್ನೂ ಹೆಚ್ಚಿಸಿದೆ. ಈಗಿನಿಂದಲೇ ಪ್ರಯತ್ನಿಸಿದರೆ ಮುಂದೊಂದು ದಿನ ಇಂಥದ್ದೊಂದು ಸಾಧನೆ ನಮ್ಮಿಂದಲೂ ಸಾಧ್ಯ ಎನ್ನುವ ಭರವಸೆ ಆಂತರ್ಯದಲ್ಲಿ ಮೂಡಲಾರಂಭಿಸಿದೆ. ಪ್ರತಿಯೊಬ್ಬ ಪದಕ ವಿಜೇತರೂ ತಮ್ಮ ಸುತ್ತಲಿನ ಯುವ ಮನಸ್ಸುಗಳ ಸ್ಫೂರ್ತಿಯ ಸೆಲೆಯಾಗಿದ್ದಾರೆ.
ಭಾರತದಲ್ಲಿ ಕ್ರಿಕೆಟ್‌ಗೆ ಸಿಗುವ ಮಾನ್ಯತೆ ಉಳಿದ ಕ್ರೀಡೆಗಳಿಗೂ ಸಿಕ್ಕರೆ ನಿಧಾನವಾಗಿ ವಿಶ್ವಮಟ್ಟದಲ್ಲಿ ಪ್ರಾಬಲ್ಯ ಸಾಧಿಸುವ ಪ್ರತಿಭೆಗಳನ್ನು ಕಾಣಲು ಸಾಧ್ಯ ಎನ್ನುವುದಕ್ಕೆ ಗೋಲ್ಡ್ ಕೋಸ್ಟ್‌ನ ಪ್ರದರ್ಶನ ಉತ್ತಮ ಉದಾಹರಣೆ. 2010ರಲ್ಲಿ ಭಾರತದಲ್ಲಿಯೇ ಕಾಮನ್ವೆಲ್ತ್ ಕ್ರೀಡಾಕೂಟ ನಡೆದಾಗ ಭಾರತ 101 ಪದಕಗಳನ್ನು ಗೆದ್ದುಕೊಂಡಿತ್ತು. ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತ್ತು. ಈಗ ಆಸ್ಟ್ರೇಲಿಯಾ ನೆಲದಲ್ಲಿ 26 ಚಿನ್ನ, 20 ಬೆಳ್ಳಿ, 20 ಕಂಚು ಸೇರಿ 66 ಪದಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇದು ಉತ್ತಮ ಭರವಸೆಯ ಸಾಧನೆಯೇ ಸರಿ. ಆದರೆ ಗ್ಲಾಸೊYàನಲ್ಲಿ 2014ರಲ್ಲಿ ನಡೆದ ಕ್ರೀಡಾಕೂಟಕ್ಕೆ ಹೋಲಿಸಿ ನೋಡಿದರೆ ಭಾರತದ ಸಾಧನೆ ಭಾರೀ ಪ್ರಗತಿಯಲ್ಲಿದೆ ಎಂದು ಹೇಳಿಕೊಳ್ಳಲಾಗದು. ಏಕೆಂದರೆ, ಗ್ಲಾಸೊYàನಲ್ಲಿ ಭಾರತ ಒಟ್ಟು 64 ಪದಕಗಳನ್ನು ಗೆದ್ದುಕೊಂಡಿತ್ತು. 15 ಚಿನ್ನದೊಂದಿಗೆ ಐದನೇ ಸ್ಥಾನದಲ್ಲಿತ್ತು. ಈ ಬಾರಿ 26 ಸ್ವರ್ಣಗಳಿಕೆಯ ಸಾಧನೆ ಮಾಡಿದೆ. ಆ ಮೂಲಕ ಪದಕ ಪಟ್ಟಿಯಲ್ಲಿ ಬಡ್ತಿ ಪಡೆಯುವಂತೆ ಮಾಡಿದೆ.
Related Articles
Advertisement
ಶೂಟಿಂಗ್‌ನಲ್ಲಿ ಶ್ರೇಷ್ಠ ಸಾಧನೆ:ಗೋಲ್ಡ್‌ಕೋಸ್ಟ್‌ನಲ್ಲಿ ಭಾರತ ಶೂಟಿಂಗ್‌ನಲ್ಲೇ 7 ಚಿನ್ನ, 4 ಬೆಳ್ಳಿ ಹಾಗೂ 5 ಕಂಚು ಸೇರಿ 16 ಪದಕಗಳನ್ನು ಗೆದ್ದು ಕೊಂಡಿದೆ. ಒಂದು ಕ್ರೀಡಾ ಪ್ರಕಾರದಲ್ಲಿ ಇಷ್ಟು ಪದಕ ಗಳಿಕೆ ಇದೇ ಮೊದಲು. ಈ ಸಾಧನೆಗೆ ದೇಶದ ಅನೇಕ ಶೂಟರ್‌ಗಳು ಸ್ಫೂರ್ತಿಯಾಗಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು. ಹಾಗೇ ಕುಸ್ತಿಯಲ್ಲೂ ಭಾರತ ನಿರೀಕ್ಷೆಯಂತೆ ಉತ್ತಮ ಸಾಧನೆ ತೋರಿದೆ. 5 ಚಿನ್ನ, 3ಬೆಳ್ಳಿ, 4 ಕಂಚು ಸೇರಿ ಒಟ್ಟು 12 ಪದಕಗಳನ್ನು ಗೆದ್ದುಕೊಂಡಿದೆ. ಬಾಕ್ಸಿಂಗ್ ಮತ್ತು ವೇಟ್‌ಲಿಫ್ಟಿಂಗ್‌ನಲ್ಲಿ ತಲಾ 9 ಪದಕಗಳು ಭಾರತದ ಪಾಲಾಗಿವೆ. ವೇಟ್ ಲಿಫ್ಟಿಂಗ್‌ನಲ್ಲಿ 5 ಚಿನ್ನ,
ಬಾಕ್ಸಿಂಗ್‌ನಲ್ಲಿ 3 ಚಿನ್ನ ಗೆದ್ದುಕೊಂಡಿದೆ. ಉಳಿದಂತೆ ಟೇಬಲ್ ಟೆನಿಸ್‌ನಲ್ಲಿ ಮೂರು ಚಿನ್ನ, ಉಳಿದ ವಿಭಾಗಗಳಲ್ಲಿ 8 ಪದಕಗಳು ಭಾರತದ ಮಡಿಲು ಸೇರಿವೆ. ಕನ್ನಡಿಗ, ಕರಾವಳಿಯ ಕುವರ ಪಿ.ಗುರುರಾಜ್ ಕೂಟದ ಆರಂಭದ ದಿನವೇ ಮೊದಲ ಪದಕ ಗೆದ್ದು ನಿರೀಕ್ಷೆ ಹೆಚ್ಚಿಸುವಂತೆ ಮಾಡಿದ್ದೂ ಈ ಬಾರಿಯ ವಿಶೇಷವಾಗಿತ್ತು. ಗಣಪತಿ ಅಗ್ನಿಹೋತ್ರಿ ಕ್ರೀಡಾ ಸಚಿವಾಲಯ ಆಶ್ರಯ ತಾಣವಾಗಲಿ
ಕ್ರೀಡಾ ಪೋಷಣೆಯ ವಿಚಾರ ಬಂದಾಗ ಸಹಜವಾಗಿ ಕ್ರೀಡಾ ಸಚಿವಾಲಯ, ಕ್ರೀಡಾ ಇಲಾಖೆ/ಅಧಿಕಾರಿಗಳ ಹಾಗೂ ಕ್ರೀಡಾ ಸಚಿವರುಗಳ ಅಸಹಕಾರ ಕಣ್ಣಿಗೆ ರಾಚುತ್ತದೆ. ಆದರೆ ಕಳೆದ ಕೆಲ ವರ್ಷಗಳಿಂದೀಚೆ ಸರ್ಕಾರದ ಒಂದಿಷ್ಟು ಯೋಜನೆಗಳು ಕ್ರೀಡಾಕ್ಷೇತ್ರದ ಕೆಲ ಗಮನಾರ್ಹ ಸಾಧನೆಗೆ ಕಾರಣವಾಗಿವೆ.
ಅವೆಲ್ಲದಕ್ಕಿಂತ ಮುಖ್ಯವಾಗಿ ಕ್ರೀಡಾ ಸಚಿವರು ಕ್ರೀಡಾಪಟುವೇ ಆಗಿದ್ದರೆ ಒಂದಿಷ್ಟು ವೃತ್ತಿಪರವಾದ ಅಭಿವೃದ್ಧಿ ಗಮನಿಸಲು ಸಾಧ್ಯವಾಗುತ್ತದೆ. ಸದ್ಯಕ್ಕೆ ದೇಶದ ಕ್ರೀಡಾ ಸಚಿವರಾದ ವಿಶ್ವಶ್ರೇಷ್ಠ ಶೂಟರ್‌ಗಳಲ್ಲಿ ಒಬ್ಬರಾದ ರಾಜ್ಯವರ್ಧನ್‌ಸಿಂಗ್ ರಾಥೋಡ್ ಬಗ್ಗೆ ಕ್ರೀಡಾವಲಯದಿಂದಲೇ ಉತ್ತಮ ಅಭಿಪ್ರಾಯಗಳು ಕೇಳಿಬರುತ್ತಿವೆ. ಕ್ರೀಡಾಕೂಟಗಳಲ್ಲಿ ಉತ್ತಮ ಫಲಿತಾಂಶ ಬಂದಾಗ ಇದು ಸಹಜ ಎನಿಸಿದರೂ, ಫಲಿತಾಂಶಕ್ಕೆ ಕ್ರೀಡಾ ಸಚಿವರ ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳ ಹಿತಾಸಕ್ತಿಯೂ ಒಂದು ಪ್ರಮುಖ ಕಾರಣವಾಗಿರುತ್ತವೆ ಎನ್ನುವುದೂ ಅಷ್ಟೇ ಸತ್ಯ.
ಹಾಗೇ ಆಯಾ ಕ್ರೀಡೆಗಳಲ್ಲಿ ಕೋಚ್‌ಗಳ ಕಾರ್ಯ ಕೂಡ ಮೆಚ್ಚುವಂಥದ್ದಾಗಿದೆ. ಸರ್ಕಾರ ಮುಂಬರುವ ದಿನಗಳಲ್ಲಿ ದೇಶದಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಕೋಚ್‌ಗಳನ್ನು ನೇಮಕ ಮಾಡಿಕೊಳ್ಳುವಲ್ಲಿಯೂ ವಿಶೇಷ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾದ ಅನಿವಾರ್ಯತೆ ಇದ್ದೇ ಇದೆ. ವಿಷಾದದ ಸಂಗತಿ ಏನೆಂದರೆ, ದೇಶದ ಅನೇಕ ಕ್ರೀಡಾ ಕೇಂದ್ರಗಳಲ್ಲಿ ಇಂದಿಗೂ ವಿದೇಶಿ ಕೋಚ್‌ಗಳಿಗೆ ಹೆಚ್ಚಿನ ಮಾನ್ಯತೆ ದೊರೆಯುತ್ತಿದೆ. ಬದಲಾಗಿ ದೇಶದ ಅನುಭವಿಗಳನ್ನೇ ಕೋಚ್‌ಗಳನ್ನಾಗಿ ನೇಮಕ ಮಾಡಿ, ಅವರಿಗೆ ಅಂತಾರಾಷ್ಟ್ರೀಯ ಗುಣಮಟ್ಟ ಕಾಪಾಡಿಕೊಳ್ಳುವಂತೆ ತರಬೇತಿ ಕೊಡಿಸಬೇಕಾದ ಕೆಲಸ ಸರ್ಕಾರದಿಂದ ಆಗಬೇಕಿದೆ. ಒಲಿಂಪಿಕ್ಸ್ ನಮ್ಮ ಗುರಿ:
ರಾಜ್ಯವರ್ಧನ್ ಕಾಮನ್ವೆಲ್ತ್ ಕ್ರೀಡಾಕೂಟದ ಸಾಧನೆ ಪ್ರಶಂಸನೀಯ. ಭಾರತದ ಕ್ರೀಡಾಪಟುಗಳು ಆಸೀಸ್ ನೆಲದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಪದಕ ಗಳಿಕೆಗಿಂಥ ಗುಣಮಟ್ಟದ ಪ್ರದರ್ಶನ ಭರವಸೆಯ ಆಶಾಕಿರಣಕ್ಕೆ ಸಾಕ್ಷಿಯಾಗಿದೆ. ಭಾರತ ಮುಂಬರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿಯೂ ಇದೇ ಪ್ರದರ್ಶನ ನೀಡುವಂತೆ ಆಗಬೇಕೆನ್ನುವುದೇ ನಮ್ಮ ಗುರಿ. 2020, 2024 ಹಾಗೂ 2028ರ ಒಲಿಂಪಿಕ್ಸ್ ಕ್ರೀಡಾಕೂಟಗಳನ್ನು ಗುರಿಯಾಗಿಸಿಕೊಂಡು ಸರ್ಕಾರ ಹೆಜ್ಜೆ ಇಡುತ್ತಿದೆ. ದೂರಾಲೋಚನೆ ಇದ್ದಾಗಲೇ ಕ್ರೀಡಾಕ್ಷೇತ್ರದಲ್ಲಿ ನಿರೀಕ್ಷಿಸಿದ್ದನ್ನು ಸಾಧಿಸಲು ಸಾಧ್ಯ. ಅಲ್ಪಾವಧಿಯಲ್ಲಿ ಭಾರೀ ನಿರೀಕ್ಷೆ ಇಟ್ಟುಕೊಂಡು ಕ್ರೀಡಾಪಟುಗಳ ಮೇಲೆ ಒತ್ತಡ ಹೇರುವುದರಿಂದ ಫಲ ದಕ್ಕಲು ಸಾಧ್ಯವಿಲ್ಲ ಎನ್ನುವುದು ಕೇಂದ್ರ ಕ್ರೀಡಾ ಸಚಿವ, ಶೂಟರ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರ ಅಭಿಮತ.