Advertisement

ಎಳವೆಯಲ್ಲಿ ಪರಿಸರ ಸರಂಕ್ಷಣೆ ಕುರಿತು ಅರಿವು ಮೂಡಿಸಲು ಹೊರಟ ಚಿನ್ನರು

08:22 PM Oct 01, 2020 | Karthik A |

2018ರಲ್ಲಿ ಹವಾಮಾನ ಬದಲಾವಣೆಯ ವಿರುದ್ಧ ಗ್ರೇಟಾ ಥನ್ಬರ್ಗ್‌ ತನ್ನ ಧ್ವನಿ ಎತ್ತಿದ್ದು ಜಗತ್ತಿನಾದ್ಯಂತ ಹಲವು ಯುವ ಪರಿಸರವಾದಿಗಳನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿ ಜಾಗತಿಕ ತಾಪಮಾನದ ವಿರುದ್ಧದ ಹೋರಾಟದಲ್ಲಿ ಭಾಗಿಯಾಗುವಂತೆ ಮಾಡಿತು.

Advertisement

ಪ್ರಸ್ತುತ ಏಕಬಳಕೆಯ ಪ್ಲಾಸ್ಟಿಕ್‌ ವಿರೋಧಿಸುವುದರಿಂದ ಹಿಡಿದು ಕೆರೆ, ನದಿಗಳನ್ನು ಸ್ವತ್ಛಗೊಳಿಸುವುದು, ಮರುಬಳಕೆ ಮಾಡಬಹುದಾದಂತಹ ವಸ್ತುಗಳ ಬಳಕೆಗೆ ಒತ್ತು ನೀಡುವಂತಹ ಹಲವು ಹವ್ಯಾಸಗಳಿಂದ ಭಾರತದ ಹಲವು ಮಕ್ಕಳು ಪರಿಸರ ರಕ್ಷಣೆಗೆ ಮುಂದಾಗಿದ್ದಾರೆ.

ಆಟ ಪಾಠ ಅಂತ ಕಲಿಯಬೇಕಾದ ವಯಸ್ಸಿನಲ್ಲಿ ನೈಸರ್ಗಿಕ ಸಂಪತ್ತು ಹಾಗೂ ಪರಿಸರ ಸಂರಕ್ಷಣೆ ಕುರಿತು ಅರಿತು ಮೂಡಿಸುವಲ್ಲಿ ನಿರತರಾಗಿದ್ದಾರೆ. ಹೀಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕೆಲವು ಯುವ ಪರಿಸರವಾದಿಗಳ ಪರಿಸರ ಪ್ರೇಮ ಹೇಗಿದೆ ಎಂಬುದನ್ನು ನೀವೇ ನೋಡಿ.

ಹಾಜಿಕ್‌ ಕಾಜಿ
14ರ ಹರೆಯದ ಹಾಜಿಕ್‌ ಕಾಜಿ ಸಮುದ್ರ ಸ್ವಚ್ಛಗೊಳಿಸುವ ವಿಶೇಷವಾಗಿ ಪ್ಲಾಸ್ಟಿಕ್‌ ತ್ಯಾಜ್ಯ ತೆಗೆಯುವ ಎರ್ವಿಸ್‌ ಯೋಜನೆಯಿಂದ ಖ್ಯಾತಿ ಗಳಿಸಿದ್ದಾನೆ. ಪುಣೆಯ ಈ ಬಾಲಪ್ರತಿಭೆ ಯೋಜನೆಯನ್ನು ತಯಾರಿಸಿ 2017 ರಲ್ಲಿ ನ್ಯೂಯಾರ್ಕ್‌ನಲ್ಲಿ ಟೆಡ್‌-ಎಡ್‌ ವೀಕೆಂಡ್‌ನ‌ಲ್ಲಿ ಪ್ರಸ್ತುತಪಡಿಸಿದ್ದಾನೆ. ಹಾಜಿಕ್‌ ಟೆಡ್‌-ಎಕ್ಸ್‌ ಗೇಟ್‌ ವೇ ಮುಂಬೈನಲ್ಲಿ ತನ್ನ ಎರ್ವಿಸ್‌ ಯೋಜನೆಯ ಬಗ್ಗೆ ಮಾತನಾಡಿದ್ದಾನೆ.

ಈ ಯುವ ಪರಿಸರವಾದಿಯ ಪ್ರಕಾರ, ಎರ್ವಿಸ್‌ ಜಲಜನಕ ಮತ್ತು ನವೀಕರಿಸಬಹುದಾದ ನೈಸರ್ಗಿಕ ಅನಿಲದಿಂದ ಚಾಲನೆಗೊಳ್ಳುವ ಒಂದು ದೊಡ್ಡ ಹಡಗಾಗಿದ್ದು, ಈ ಹಡಗು ಮೂರು ಕೆಲಸ ಮಾಡುತ್ತದೆ. ಸಮುದ್ರದಲ್ಲಿರುವ ತ್ಯಾಜ್ಯವನ್ನು, ಮಾಲಿನ್ಯಕಾರಕಗನ್ನು ಗುರಿತಿಸಿ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಲ್ಲಿ ಕಾರ್ಯಾಚರಿಸುತ್ತದೆ.

Advertisement

ಬಾಥ್‌ಟಬ್‌ನ ಮೂಲಕ ಈ ಯೋಜನೆಯ ಪ್ರಾಯೋಗಿಕ ಪರೀಕ್ಷೆ ಮಾಡಿರುವ ಹಾಜಿಕ್‌ ಸರೋವರಗಳನ್ನು, ನದಿ ಮೂಲಗಳನ್ನು ಸ್ವತ್ಛಗೊಳಿಸಲು ಈ ಯೋಜನೆ ಸಹಕಾರಿಯಾಗುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ.

ಲಿಸಿಪ್ರಿಯಾ ಕಂಗುಜಮ್‌
ಮನಿಪುರದ ಭಾಸಿಕೊಂಗ್‌ನಲ್‌ ಹುಟ್ಟಿದ ಎಂಟು ವರ್ಷದ ಲಿಸಿಪ್ರಿಯಾ ಕಂಗುಜಮ್‌ ಭಾರತದ ಕಿರಿಯ ಪರಿಸರವಾದಿಗಳಲ್ಲಿ ಒಬ್ಬಳು. ಈಕೆ ಕಳೆದ 2 ವರ್ಷದಿಂದ ಪರಿಸರ ಸರಂಕ್ಷಣೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಕಳೆದ 2019ರ ಜೂನ್‌ 21ರಲ್ಲಿ ಹವಾಮಾನ ಬದಲಾವಣೆಯ ವಿರುದ್ಧ ಕಾನೂನನ್ನು ಜಾರಿಗೊಳಿಸುವಂತೆ ಪ್ರಧಾನ ಮಂತ್ರಿಗಳ ಕಚೇರಿಯ ಹೊರಗೆ ಒಂದು ವಾರ ಧರಣಿ ಮಾಡಿದ್ದರು. ಅದೇ ವರ್ಷದ ಆಗಸ್ಟ್‌ನಲ್ಲಿ ಅವಳಿಗೆ ವರ್ಲ್ಡ್‌ ಚಿಲ್ಡ್ರನ್‌ ಪೀಸ್‌ ಪುರಸ್ಕಾರ-2019 ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಲ್ಲದೇ 2019ರ ಅಕ್ಟೋಬರ್‌ 21 ರಿಂದ 27ರ ವರೆಗೆ ಸಾವಿರಾರು ಬೆಂಬಲಿಗರೊಂದಿಗೆ ಹವಾಮಾನ ಬದಲಾವಣೆಯ ಕಾನೂನು ಜಾರಿಗೊಳಿಸಲು ಲಿಸಿಪ್ರಿಯಾ “ಗ್ರೇಟ್‌ ಅಕ್ಷೋಬರ್‌ ಮಾರ್ಚ್‌ 2019′ ಅಭಿಯಾನವನ್ನು ಆರಂಭಿಸಿದ್ದು, ಅಷ್ಟೆ ಅಲ್ಲದೆ 2019ರ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನವನ್ನು (ಸಿಒಪಿ 25) ಉದ್ದೇಶಿಸಿ ಮಾತನಾಡಿದ್ದಾಳೆ. ಯುಎನ್‌ ಸೆಕ್ರೆಟರಿ ಜನರಲ್‌ ಆಂಟೋನಿಯೊ ಗುಟೆರೆಸ್‌ ಅವರನ್ನು ಭೇಟಿಯಾಗಿ ವಿಶ್ವದ ಮಕ್ಕಳ ಪರವಾಗಿ ಒಂದು ನಿವೇದನ ಪತ್ರವನ್ನು ಸಲ್ಲಿಸಿದ್ದಾಳೆ.

ಜನ್ನತ್‌
ತನ್ನ ವಯಸ್ಸಿನ ಮಕ್ಕಳು ಆಟದಲ್ಲಿ ಮಗ್ನರಾಗಿರುವ ಈ ಸಮಯದಲ್ಲಿ ಜನ್ನತ್‌ ಕಾಶ್ಮೀರದ ದಾಲ್‌ ಕೆರೆಯನ್ನು ಸ್ವತ್ಛಗೊಳಿಸುವ ಕೆಲಸದಲ್ಲಿ ನಿರತಳಾಗಿದ್ದಾಳೆ. 2018ರಿಂದ ನದಿ ಸ್ವತ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಈಕೆ 5 ವರ್ಷವಿದ್ದಾಗಲೆ ತನ್ನ ತಂದೆಯ ಜತೆಗೆ ಪ್ರತಿದಿನ ಬೆಳಗ್ಗೆ ದೋಣಿಯಲ್ಲಿ ಕೆರೆಗೆ ಹೋಗಿ, ಪ್ಲಾಸ್ಟಿಕ್‌, ಮಧ್ಯದ ಬಾಟಲಿಗಳು ಮತ್ತು ತ್ಯಾಜ್ಯವನ್ನು ಸಂಗ್ರಹಿಸಿ ಅದನ್ನು ವಿಲೇವಾರಿ ಮಾಡುತ್ತಿದ್ದಳು. ಇವಳ ಕಾರ್ಯವನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್‌ ಮಾಡಿ, ಈ ಹುಡುಗಿಯ ಬಗ್ಗೆ ಕೇಳಲು ಖುಷಿಯಾಗುತ್ತದೆ! ಸ್ವಚ್ಛತೆಯೆಡೆಗಿನ ಅವಳ ಉತ್ಸಾಹ ಅದ್ಭುತ ಎಂದಿದ್ದರು.

ಸಾಯಿನಾಥ್‌ ಮನಿಕಂದನ್‌
ಅರಬ್‌ ದೇಶದಲ್ಲಿ ವಾಸವಾಗಿರುವ ಸಾಯಿನಾಥ್‌ ಮನಿಕಂದನ್‌ ಓರ್ವ ಮಹಾತ್ವಾಕಾಂಕ್ಷಿ ಪರಿಸರವಾದಿಯಾಗಿದ್ದು, ವಿಶ್ವ ಸಂಸ್ಥೆಯ ಸುಸ್ಥಿರ ಗುರಿಗಳನ್ನು ಭಾರತದಲ್ಲಿ ಸಾಧಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದಾನೆ. ಜತೆಗೆ ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಲ್ಲಿ ಒಂದಾದ ಹಸಿವಿನ ಸಮಸ್ಯೆಯನ್ನು ಪರಿಹಾರಿಸಿ ಶೂನ್ಯ ಹಸಿವು ಪ್ರಮಾಣವನ್ನು ಸಾಧಿಸಬೇಕೆಂಬ ಛಲ ಹೊಂದಿದ್ದಾನೆ. ಈ ಕಾರ್ಯಯೋಜನೆಗಳಿಗಾಗಿಯೇ ಮನಿಕಂದನ್‌ ಎರಡು ರೊಬೊಟ್‌ಗಳ ಮೂಲಮಾದರಿಗಳನ್ನು ಆನ್ವೇಷಣೆ ಮಾಡಿದ್ದಾನೆ.

ಕಡಲತೀರ ಪ್ರದೇಶಗಳನ್ನು ಸ್ವಚ್ಛಗೊಳಿಸಲು ರೊಬೊಟ್‌ ಕ್ಲೀನರ್‌ ಅನ್ನು ಮನಿಕಂದನ್‌ ಕಂಡುಹಿಡಿದಿದ್ದು, ಇದು ನೀರಿನ ಮೇಲ್ಮೆ„ಯಲ್ಲಿ ತೇಲುವ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡುವಲ್ಲಿ ಸಹಕಾರಿಯಾಗಿದೆ. ಹಾಗೇ ಶೂನ್ಯ ಹಸಿವನ್ನು ಸಾಧಿಸಲು ಅಗ್ರಿಬೋಟ್‌ ಎಂಬ ಯೋಜನೆಯನ್ನು ಹೊರ ತಂದಿದ್ದಾನೆ. ಇದು ರೈತರಿಗೆ ನೆಲ ಹದಗೊಳಿಸಲು, ಬೀಜ ಬಿತ್ತಲು ಮತ್ತು ಬೀಜಗಳನ್ನು ಮಣ್ಣಿನಿಂದ ಮುಚ್ಚಲು ಸಹಾಯ ಮಾಡುತ್ತದೆ.
ಸಾಯಿನಾಥ್‌ ತನ್ನ ಶಾಲೆಯಲ್ಲಿಯೆ ಮರುಬಳಕೆ ಮಾಡುವ ತ್ಯಾಜ್ಯವನ್ನು ಸಂಗ್ರಹಿಸುವ ಅಭಿಯಾನ ಶುರುಮಾಡಿದ್ದು, 2018 ರಲ್ಲಿ ದೈಯಾನಾ ಪ್ರಶಸ್ತಿ, ಇಂಟರ್‌ನ್ಯಾಷನಲ್‌ ಎಕೋ-ಹಿರೋ ಅವಾರ್ಡ್‌ 2019 ಸೇರಿದಂತೆ ಸಾಯಿನಾಥ್‌ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾನೆ.

 ಸುಶ್ಮಿತಾ ಜೈನ್‌, ಉಜಿರೆ 

 

Advertisement

Udayavani is now on Telegram. Click here to join our channel and stay updated with the latest news.

Next