ಹೈದರಾಬಾದ್ : ಇಲ್ಲಿನ ಹಳೇ ನಗರದ ಪುರಾನಿ ಹವೇಲಿಯಲ್ಲಿರುವ ನಿಜಾಮರ ಮ್ಯೂಸಿಯಂ ನಲ್ಲಿ ನಟ್ಟ ನಡು ರಾತ್ರಿ ನಡೆದಿರುವ ಕಳ್ಳತನದಲ್ಲಿ ಚಿನ್ನದ ಟಿಫಿನ್ ಬಾಕ್ಸ್, ಕಪ್, ಸಾಸರ್ ಸ್ಪೂನ್ ಮುಂತಾಗಿ ಹಲವಾರು ಅತ್ಯಮೂಲ್ಯ ಐತಿಹಾಸಿಕ ಕಲಾತ್ಮಕ ವಸ್ತುಗಳನ್ನು ಕದ್ದೊಯ್ಯಲಾಗಿದೆ.
ಮ್ಯೂಸಿಯಂ ನಲ್ಲಿ ಕಳವು ನಡೆದಿರುವುದು ನಿನ್ನೆ ಸೋಮವಾರವಷ್ಟೇ ಬೆಳಕಿಗೆ ಬಂದಿದೆ. ಪುರಾನಿ ಹವೇಲಿ ಅರಮನೆಯು ಮೀರ್ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವುದರಿಂದ ಇಲ್ಲಿ ಕಳವಿನ ಬಗ್ಗೆ ಕೇಸು ದಾಖಲುಗೊಂಡು ತನಿಖೆ ನಡೆಯುತ್ತಿದೆ.
ಕಳವಾಗಿರುವ ಚಿನ್ನದ ಟಿಫಿನ್ ಬಾಕ್ಸ್ 2 ಕಿಲೋ ತೂಕದ್ದಾಗಿದೆ. ಮಾತ್ರವಲ್ಲದೆ ಚಿನ್ನದ ಕಪ್, ಸಾಸರ್ ಮತ್ತು ಸ್ಪೂನ್ ಅತ್ಯಮೂಲ್ಯ ವಜ್ರಗಳಿಂದ ಖಚಿತವಾಗಿವೆ.
ಕಳ್ಳರು ಬಹುತೇಕ ಭಾನುವಾರ ರಾತ್ರಿ ಮ್ಯೂಸಿಯಂ ಪ್ರವೇಶಿಸಿರಬಹುದೆಂದು ಶಂಕಿಸಲಾಗಿದೆ. ಮ್ಯೂಸಿಯಂನ ಮೊದಲ ಮಹಡಿಯ ವೆಂಟಿಲೇಟರ್‌ನ ಕಬ್ಬಿಣದ ಗ್ಲಿಲ್ ಮುರಿದು ಕಳ್ಳರು ಒಳಪ್ರವೇಶಿಸಿದ್ದಾರೆ. ಇದಕ್ಕಾಗಿ ಅವರು ಹಗ್ಗ ಬಳಸಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸರೀಗ ಸಿಸಿಟಿವಿ ಚಿತ್ರಿಕೆಯನ್ನು ಪರಿಶೀಲಿಸುತ್ತಿದ್ದಾರೆ. ಈ ಕಳವು ಕೃತ್ಯದಲ್ಲಿ ಮ್ಯೂಸಿಯಂನ ಒಳಗಿನವರ ಪಾತ್ರ ಇರುವ ಬಗ್ಗೆಯೂ ತನಿಖೆ ನಡೆಯುತ್ತಿದೆ.