ಬೆಂಗಳೂರು: ಅಂಗಡಿಗಳಲ್ಲಿ ಒಂಟಿ ಮಹಿಳೆಯರು ಇರುವುದನ್ನು ಗಮನಿಸಿ ಗ್ರಾಹಕರ ಸೋಗಿನಲ್ಲಿ ಹೋಗಿ ಪುಸಲಾಯಿಸಿ ಆಭರಣಗಳನ್ನು ಬಿಚ್ಚಿಸಿಕೊಂಡು ಪರಾರಿ ಯಾಗುತ್ತಿದ್ದ ಮಹಿಳೆ ಸೇರಿ ಇಬ್ಬರು ಆರೋ ಪಿಗಳು ಬಸವೇಶ್ವರನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಡಿ.ಜೆ.ಹಳ್ಳಿ ನಿವಾಸಿ ಸಜ್ಜದ್ ಮೊಹಮ್ಮದ್ ಅಲಿ (38) ಮತ್ತು ಬಾಣಸವಾಡಿ ನಿವಾಸಿ ವೈತ್ಯಾಗಿ (40) ಬಂಧಿತರು. ಆರೋಪಿಗಳಿಂದ 7.55 ಲಕ್ಷ ರೂ. ಮೌಲ್ಯದ 202 ಗ್ರಾಂ ಚಿನ್ನಾ ಭರಣ ಮತ್ತು ಎರಡು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಪೈಕಿ ಅಲಿ ಇತ್ತೀಚೆಗೆ ಠಾಣೆ ವ್ಯಾಪ್ತಿಯ ಡ್ರೈಫ್ರೂಟ್ಸ್ ಅಂಗಡಿಯಲ್ಲಿದ್ದ ಮಹಿಳೆಯನ್ನು ಮಾತನಾಡಿಸಿ ಕೆಲ ವಸ್ತುಗಳನ್ನು ಖರೀದಿಸಿದ್ದಾನೆ. ಬಳಿಕ ನಿಮ್ಮ ಮಾಂಗಲ್ಯ ಸರ ಚೆನ್ನಾಗಿದೆ ಎಂದು ಫೋಟೋ ತೆಗೆದುಕೊಂಡಿದ್ದಾನೆ. ಬಳಿಕ ಮಾಂಗಲ್ಯ ಸರವನ್ನು ತೆಗೆಸಿ ನಮ್ಮ ಚಿನ್ನಾಭರಣ ಮಳಿಗೆಯ ಕೆಲಸದವರಿಗೆ ತೋರಿಸಿ ತಂದುಕೊಡುವುದಾಗಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ:ಒಎಲ್‌ಎಕ್ಸ್ ನಲ್ಲಿ ಹಾಕಿದ ವಾಹನ ಕದಿಯುತ್ತಿದ್ದ ಭೂಪ
ಕ್ಯಾಟರಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದ ಅಲಿ ಹಾಗೂ ಕಲ್ಯಾಣ ಮಂಟಪದಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ವೈತ್ಯಾಗಿ ಪರಿಚಯವಾಗಿದೆ. ಇಬ್ಬರು ಸಂಚು ರೂಪಿಸಿ ಕೃತ್ಯ ಎಸಗುತ್ತಿದ್ದರು. ಅಲಿ ಗ್ರಾಹಕರ ಸೋಗಿನಲ್ಲಿ ಅಂಗಡಿಗಳಿಗೆ ಹೋಗಿ ಒಂಟಿ ಮಹಿಳೆಯರನ್ನು ವಂಚಿಸಿ ಚಿನ್ನಾಭರಣ ತರುತ್ತಿದ್ದ. ಅದನ್ನು ವೈತ್ಯಾಗಿ ಫೈನಾನ್ಸ್ ಕಂಪನಿಯಲ್ಲಿ ಅಡಮಾನ ಇಟ್ಟು ಬಂದ ಹಣವನ್ನು ಹಂಚಿಕೊಳ್ಳುತ್ತಿದ್ದರು ಎಂದು ಪೊಲೀಸರು ಹೇಳಿದರು. ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.