Advertisement

ಎಲ್ರ ಕಾಲೆಳಿಯತ್ತೆ ಕಾಲ ಚಿತ್ರದ ಗೋಲ್ಡ್‌ ಸಾಂಗ್‌ ಬಿಡುಗಡೆ

11:51 AM Aug 08, 2022 | Team Udayavani |

ಚಂದನ್‌ ಶೆಟ್ಟಿ ನಾಯಕರಾಗಿ ನಟಿಸಿರುವ ‘ಎಲ್ರ ಕಾಲೆಳಿಯತ್ತೆ ಕಾಲ’ ಚಿತ್ರದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರ ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧವಾಗುತ್ತಿದೆ. ಉಷಾ ಗೋವಿಂದರಾಜು ನಿರ್ಮಾಣದ ಸುಜಯ್‌ ಶಾಸ್ತ್ರಿ ನಿರ್ದೇಶಿಸಿದ್ದಾರೆ. ನಾಯಕ ಚಂದನ್‌ ಶೆಟ್ಟಿಗೆ ಅರ್ಚನಾ ಕೊಟ್ಟಿಗೆ ನಾಯಕಿ.

Advertisement

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಸುಜಯ್‌, “ನಮ್ಮ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದೆ. ಸದ್ಯದಲ್ಲೇ ಮೊದಲ ಪ್ರತಿ ಬರಲಿದೆ. ಪ್ರಚಾರ ಕಾರ್ಯ ಶುರುವಾಗಿದ್ದು, ಚಿತ್ರದ ಮೊದಲ ಹಾಡು,ಗೋಲ್ಡ್‌ ಫ್ಯಾಕ್ಟರಿ ಬಿಡುಗಡೆಯಾಗಿದೆ.  ಅದೊಂದು ಮದುವೆಯ ಆರತಕ್ಷತೆಯ ಹಾಡು. ರಾಜಗುರು ಹೊಸಕೋಟೆ ಬರೆದಿರುವ ಈ ಹಾಡನ್ನು ಗುರುರಾಜ ಹೊಸಕೋಟೆ, ಪ್ರವೀಣ್‌ – ಪ್ರದೀಪ್‌ ಹಾಡಿದ್ದಾರೆ. ಮುಂದೆ‌ ಐದು ಅಥವಾ 10 ದಿನಗಳಿಗೊಮ್ಮೆ ಚಿತ್ರದ ಹಾಡು ಅಥವಾ ಕಂಟೆಂಟ್‌ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರವನ್ನು ಮುಂದುವರೆಸುತ್ತೇವೆ. ಇದೊಂದು 80ರ ದಶಕದ ಕಥೆ. ಒಂದು ಘಟನೆ ಒಬ್ಬ ವ್ಯಕ್ತಿಯ ಜೀವನದಲ್ಲಿ ಯಾವ ತರಹದ ಪಾತ್ರ ವಹಿಸುತ್ತದೆ ಎಂದು ಹೇಳುವ ಪ್ರಯತ್ನ ಮಾಡಿದ್ದೇವೆ. ಕಾಲ ಯಾರನ್ನೂ ಬಿಡುವುದಿಲ್ಲ, ಎಲ್ಲರ ಕಾಲನ್ನೂ ಎಳೆಯುತ್ತದೆ ಎಂದು ಈ ಚಿತ್ರದ ಮೂಲಕ ತೋರಿಸುವುದಕ್ಕೆ ಹೊರಟಿದ್ದೇವೆ. ಇಲ್ಲಿ ಚಂದನ್‌ ಮತ್ತು ಅರ್ಚನಾ ಅವರ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್‌ ಆಗಿದೆ. ಅವರು ನಟಿಸಬಾರದು. ಸಹಜವಾಗಿ ವರ್ತಿಸಬೇಕು ಎಂಬುದು ನನ್ನ ಆಸೆ ಆಗಿತ್ತು. ಹಾಗಾಗಿ, ವರ್ಕ್‌ ಶಾಪ್‌ ಮಾಡಿದೆ. ಇಬ್ಬರೂ ಬಹಳ ಸಹಜವಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರ ವಿಭಿನ್ನವಾಗಿ ಮತ್ತು ನಾವು ಅಂದು ಕೊಂಡಿದ್ದಕ್ಕಿಂತ ಚೆನ್ನಾಗಿ ಮೂಡಿಬಂದಿದೆ. ನಿರ್ಮಾಪಕರು ಮತ್ತು ಚಿತ್ರತಂಡದವರ ಸಹಕಾರವಿಲ್ಲದಿದ್ದರೆ, ಈ ಸಿನಿಮಾ ಸಾಧ್ಯವಾಗುತ್ತಿರಲಿಲ್ಲ’ ಎನ್ನುವುದು ನಿರ್ದೇಶಕ ಸುಜಯ್‌ ಶಾಸ್ತ್ರಿ ಮಾತು.

ನಾಯಕ ಚಂದನ್‌ ಶೆಟ್ಟಿ ಕೂಡಾ ಈ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ” ನಮ್ಮ ಚಿತ್ರದ ಮೊದಲ ಹಾಡು ಗೋಲ್ಡ್‌ ಫ್ಯಾಕ್ಟರಿ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ನಾನು ತುಂಬಾ ಸಿಟ್ಟಾಗಿರುತ್ತೇನೆ. ಅದಕ್ಕೊಂದು ಕಾರಣವೂ ಇರುತ್ತದೆ. ಹಾಡು, ಚಿತ್ರ ಎರಡೂ ಬಹಳ ಚೆನ್ನಾಗಿ ಮೂಡಿ ಬಂದಿದೆ. ಇದೊಂದು ವಿಭಿನ್ನವಾದ ಚಿತ್ರ. ಸುಜಯ್‌ ಶಾಸ್ತ್ರಿ ಅವರಿಂದ ತುಂಬಾ ಕಲಿತೆ’ ಎಂದರು. ಉಳಿದಂತೆ ಚಿತ್ರತಂಡ ತಮ್ಮ ಅನುಭವ ಹಂಚಿಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next