ಬೆಳಗಾವಿ: ಅಕ್ಷಯ ತೃತೀಯ ಹಬ್ಬದಂದು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆಭರಣ ಪ್ರಿಯರು ಚಿನ್ನಾಭರಣ ಖರೀದಿಸಿದ್ದು, ಬಹುತೇಕ ಅಂಗಡಿಗಳಲ್ಲಿ ಸೋಲ್ಡ್ ಔಟ್ ಆಗಿರುವುದೂ ಕಂಡು ಬಂತು. ಕೊರೊನಾ ಸಂಕಷ್ಟದಲ್ಲಿದ್ದ ಜನರು ಎರಡು ವರ್ಷಗಳ ಕಾಲ ಚಿನ್ನಾಭರಣ ಖರೀದಿಸಲು ಅಷ್ಟೊಂದು ಉತ್ಸಾಹ ತೋರಿರಲಿಲ್ಲ. ಆದರೆ ಈ ಸಲ ಅತ್ಯಂತ ಉತ್ಸಾಹದಿಂದ ಚಿನ್ನಾಭರಣ ಅಂಗಡಿಗಳಿಗೆ ಬಂದು ಚಿನ್ನ, ಬೆಳ್ಳಿ ಖರೀದಿಸಿದ್ದಾರೆ. ಜಿಲ್ಲೆಯಾದ್ಯಂತ 100 ಕೋಟಿ ರೂ. ಗೂ ಹೆಚ್ಚು ಮೌಲ್ಯದ ವ್ಯಾಪಾರ-ವಹಿವಾಟು ನಡೆದಿದೆ.
ಈ ಸಲ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರು ಬಂಗಾರ ಖರೀದಿ ಮಾಡಿದ್ದರಿಂದ ಬಹುತೇಕ ಕಡೆ ಚಿನ್ನಾಭರಣಗಳು ಮುಗಿದಿದ್ದವು, ಇನ್ನೂ ಕೆಲವು ಕಡೆಗೆ ಸುತ್ತುಂಗುರ, ಗಟ್ಟಿ ಬಂಗಾರ ಸಂಜೆ 4 ಗಂಟೆ ಸುಮಾರಿಗೆ ಮುಗಿದವು. ಸಣ್ಣ ಪುಟ್ಟ ಅಂಗಡಿಗಳಲ್ಲೂ ಗಟ್ಟಿ ಬಂಗಾರ ಸಿಗದೇ ಗ್ರಾಹಕರು ವಾಪಸ್ ಆಗುವುದು ಕಂಡು ಬಂತು.
ನಗರದ ಪೋತದಾರ ಜ್ಯುವೆಲರ್, ಮಲಬಾರ್, ಕಲ್ಯಾಣ ಜ್ಯುವೆಲರ್ ಸೇರಿದಂತೆ ಅನೇಕ ಚಿನ್ನಾಭರಣ ಅಂಗಡಿಗಳಲ್ಲಿ ಜನರು ಮುಹೂರ್ತ ನೋಡಿಕೊಂಡು ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ನಗರದ ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಶಹಾಪುರ ಭಾಗದಲ್ಲಿರುವ ಬಂಗಾರದ ಅಂಗಡಿಗಳಲ್ಲಿ ಫುಲ್ ರಷ್ ಆಗಿತ್ತು. 3-4 ದಿನಗಳಿಂದ ಬ್ಯಾಂಕುಗಳಿಗೆ ರಜೆ ಇದ್ದಿದ್ದರಿಂದ ಗ್ರಾಹಕರು ಚಿನ್ನಾಭರಣ ಖರೀದಿ ವೇಳೆ ಪರದಾಡುವಂತಾಯಿತು. ಶನಿವಾರ, ರವಿವಾರ, ಸೋಮವಾರ ಹಾಗೂ ಮಂಗಳವಾರ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಬ್ಯಾಂಕುಗಳು ಬಂದ್ ಆಗಿದ್ದವು. ಚಿನ್ನಾಭರಣ ಖರೀದಿಗೆ ಬಂದಿದ್ದ ಗ್ರಾಹಕರಿಗೆ ನಗದು ಹಣ ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಬಹುತೇಕ ಎಟಿಎಂಗಳಲ್ಲಿಯೂ ಹಣ ಇರಲಿಲ್ಲ.
ಚಿನ್ನಾಭರಣ ಅಂಗಡಿಗಳಲ್ಲಿ ಕೆಲವು ಅಂಗಡಿಕಾರರು ಚೆಕ್ ಪಡೆದರೆ, ಇನ್ನೂ ಕೆಲವರು ಗೂಗಲ್ ಪೇ, ಫೋನ್ ಪೇ, ಪೇಟಿಎಂ ಸೇರಿದಂತೆ ಆ್ಯಪ್‌ಗಳ ಮೂಲಕ ಹಣ ಸ್ವೀಕರಿಸಿದರು.
2 ವರ್ಷ ಕೊರೊನಾದಿಂದ ಚಿನ್ನಾಭರಣ ವ್ಯಾಪಾರ-ವಹಿವಾಟು ಆಗಿರಲಿಲ್ಲ. ಈ ಬಾರಿಯ ಅಕ್ಷಯ ತೃತೀಯಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಂದು ಚಿನ್ನ ಖರೀದಿಸಿದ್ದಾರೆ. ಅನೇಕ ಕಡೆಗೆ ಚಿನ್ನ ಸೋಲ್ಡ್ ಔಟ್ ಆಗಿದೆ. ಈ ಬಾರಿ ದಾಖಲೆ ಪ್ರಮಾಣದಲ್ಲಿ ಚಿನ್ನ ಮಾರಾಟವಾಗಿದೆ.
-ಅನಿಲ್ ಪೋತದಾರ, ಪೋತದಾರ ಜ್ಯುವೆಲರ್ ಮಾಲೀಕರು