ಹುಬ್ಬಳ್ಳಿ: ಪ್ಯಾಂಟ್‌ನ ಬೆಲ್ಟ್ನಲ್ಲಿ ಚಿನ್ನದ ಗಟ್ಟಿಗಳನ್ನು ಬಚ್ಚಿಟ್ಟುಕೊಂಡು ಬಂದಿದ್ದ ಅಕ್ಕಸಾಲಿಗನನ್ನು ಸಿಸಿಬಿ ಪೊಲೀಸರು ರವಿವಾರ ರಾತ್ರಿ ಗಿರಣಿಚಾಳ ಏಳು ಮಕ್ಕಳ ತಾಯಿ ಗುಡಿ ಹಿಂಭಾಗದಲ್ಲಿ ಬಂಧಿಸಿದ್ದು, ಸುಮಾರು 38.50 ಲಕ್ಷ ರೂ. ಮೌಲ್ಯದ 804 ಗ್ರಾಂ ತೂಕವುಳ್ಳ ಎರಡು ಚಿನ್ನದ ಗಟ್ಟಿ, ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಕೇಶ್ವಾಪುರ ಮಧುರಾ ಎಸ್ಟೇಟ್‌ನ ಅಕ್ಕಸಾಲಿಗ ಚೇತನ ಜನ್ನು ಎಂಬಾತನೆ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಉಡುಪಿಯಿಂದ ಯಾವುದೇ ದಾಖಲಾತಿಗಳಿಲ್ಲದೆ ಚಿನ್ನದ ಗಟ್ಟಿಗಳನ್ನು ಅಕ್ರಮವಾಗಿ ತರುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಇನ್ಸ್‌ಪೆಕ್ಟರ್ ಅಲ್ತಾಫ ಮುಲ್ಲಾ ನೇತೃತ್ವದಲ್ಲಿ ದಾಳಿ ಮಾಡಿ ಚಿನ್ನದ ಗಟ್ಟಿಗಳ ಸಮೇತ ಅಕ್ಕಸಾಲಿಗನನ್ನು ವಶಕ್ಕೆ ಪಡೆಯಲಾಗಿದೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದಿ ಪ್ರಚಾರ ಸಭಾ ಗಲಾಟೆ; 50ಕ್ಕೂ ಹೆಚ್ಚು ಜನರ ವಿರುದ್ಧ ದೂರು
ಧಾರವಾಡ: ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಆಡಳಿತಕ್ಕಾಗಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ಜನರ ಮೇಲೆ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದಲ್ಲದೇ ಸಭಾದ ಎದುರು ಸೋಮವಾರ ಪೊಲೀಸ್ ಬಂದೋಬಸ್ತ್ ಕೂಡ ಕೈಗೊಳ್ಳಲಾಗಿದೆ.
2020ರ ಮೇ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಹೊಸ ಆಡಳಿತ ಮಂಡಳಿಯ ಅ ಧಿಕಾರಕ್ಕೆ ಧಾರವಾಡ ಹೈಕೋರ್ಟ್ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿತ್ತು. ನ್ಯಾಯಾಲಯದ ಮಧ್ಯಂತರ ತಡೆಯಾಜ್ಞೆಯ ಹಿನ್ನೆಲೆಯಲ್ಲಿ ಅರ್ಜಿದಾರರು ತಡೆಯಾಜ್ಞೆಯ ಪ್ರತಿಯನ್ನು ಸಭೆಯ ಕಚೇರಿಗೆ ಸಲ್ಲಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಎರಡೂ ಗುಂಪುಗಳ ಮಧ್ಯೆ ಪರಸ್ಪರ ವಾಗ್ವಾದ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಇದೀಗ 50ಕ್ಕೂ ಅಧಿಕ ಜನರ ವಿರುದ್ಧ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ನಗರ ಶಾಖೆಯ ಆಡಳಿತಾಧಿಕಾರಿ ಎಸ್. ರಾಧಾಕೃಷ್ಣ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.