ತಿರುವನಂತಪುರಂ:ಕೇರಳ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸುವ ಮೂಲಕ ಇದೀಗ ಹೊಸ ತಿರುವು ಸಿಕ್ಕಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಸ್ವಪ್ನಾ ಸುರೇಶ್ ಕೋರ್ಟ್ ನಲ್ಲಿ ಹೇಳಿದ್ದೇನು?
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸ್ವತಃ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪತ್ನಿ ಮತ್ತು ಮಗಳು, ಅಳಿಯ ಶಾಮೀಲಾಗಿರುವುದಾಗಿ ಸ್ವಪ್ನಾ ಸುರೇಶ್ ಕೋರ್ಟ್ ನಲ್ಲಿ ಬಹಿರಂಗಪಡಿಸಿರುವುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಇದನ್ನೂ ಓದಿ:ಸಿಮೆಂಟ್ ಸೀಟು ಲೋಡ್ ಮಾಡುತ್ತಿದ್ದ ವೇಳೆ ಕಾರು ಢಿಕ್ಕಿ: ಯುವಕ ಸಾವು
2016ರಲ್ಲಿ ಪಿಣರಾಯಿ ವಿಜಯನ್ ಅವರು ದುಬೈಗೆ ತೆರಳಿದ್ದರು. ಆಗ ಸಿಎಂ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಿವಶಂಕರ್ ಅವರು ಸಿಎಂ ವಿಜಯನ್ ದುಬೈ ಭೇಟಿಯ ಕುರಿತು ಎಲ್ಲಾ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದ್ದರು. ಆದರೆ ಎರಡು ದಿನದ ನಂತರ ಶಿವಶಂಕರ್ ಅವರು ಕರೆ ಮಾಡಿ, ಸಿಎಂ ಬ್ಯಾಗ್ ವೊಂದನ್ನು ಮರೆತು ಬಂದಿದ್ದು, ಅದನ್ನು ಕೂಡಲೇ ದುಬೈಗೆ ರವಾನಿಸುವಂತೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಬ್ಯಾಗ್ ಕಳುಹಿಸಿದ್ದು, ಅದನ್ನು ಕಾನ್ಸುಲೇಟ್ ನಲ್ಲಿ ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿತ್ತು, ಅದೇ ರೀತಿ ಚಿನ್ನ ಕಳ್ಳಸಾಗಣೆಯೂ ನಡೆದಿತ್ತು ಎಂದು ಸ್ವಪ್ನಾ ಆರೋಪಿಸಿದ್ದಾರೆ.
ಆದರೆ ಇದೊಂದು ರಾಜಕೀಯ ಪ್ರೇರಿತ ಆರೋಪ ಎಂದು ಪಿಣರಾಯಿ ವಿಜಯನ್ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ. ಏತನ್ಮಧ್ಯೆ ತನಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಖುದ್ದು ನ್ಯಾಯಾಧೀಶರ ಮುಂದೆ ಹಾಜರಾಗಿದ್ದ ಸ್ವಪ್ನಾ ಸುರೇಶ್ ಸುದೀರ್ಘ ಹೇಳಿಕೆಯನ್ನು ನೀಡಿದ್ದರು.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಎಂ ಪಿಣರಾಯಿ ವಿಜಯನ್, ಪತ್ನಿ ಕಮಲಾ ವಿಜಯನ್, ಪುತ್ರಿ ವೀಣಾ ವಿಜಯನ್, ಮಾಜಿ ಕಾರ್ಯದರ್ಶಿ ನಳಿನಿ ನಿಟ್ಟೋ, ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಸಿಎಂ ರವೀಂದ್ರನ್, ಹಾಲಿ ಸಚಿವ ಕೆ.ಟಿ.ಜಲೀಲ್ ಶಾಮೀಲಾಗಿರುವುದಾಗಿ ಸ್ವಪ್ನಾ ಕೋರ್ಟ್ ಗೆ ತಿಳಿಸಿರುವುದಾಗಿ ವಿವರಿಸಿದ್ದಾರೆ.