ಬೆಂಗಳೂರು: ಪೊಲೀಸರ ಸೋಗಿನಲ್ಲಿ ಚಿನ್ನಾಭರಣ ಕುಸುರಿ ಮಾಡುವ ಮಳಿಗೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿ ಪರಾರಿಯಾಗಿರುವ ಘಟನೆ ಹಲಸೂರುಗೇಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೃತ್ಯದಲ್ಲಿ ಪೊಲೀಸ್ ಸಿಬ್ಬಂದಿಯೂ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು ಈ ಬಗ್ಗೆ ತನಿಖೆ ಮುಂದುವರಿದಿದೆ.
ಕೃತ್ಯದಲ್ಲಿ ಪೊಲೀಸ್ ಸಿಬ್ಬಂದಿಯೂ ಪಾಲ್ಗೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಸದ್ಯ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ತನಿಖೆ ಪೂರ್ಣಗೊಂಡ ಬಳಿಕ ಸಿಬ್ಬಂದಿಯ ಪಾತ್ರದ ಬಗ್ಗೆ ಸ್ಪಷ್ಟತೆ ತಿಳಿಯಲಿದೆ ಎಂದು ಅಧಿಕಾರಿ ತಿಳಿಸಿದರು.
ನಗರ್ತ್‌ಪೇಟೆ ಕ್ರಾಸ್‌ನಲ್ಲಿರುವ ಕಾರ್ತಿಕ ಎಂಬುವವರು ಚಿನ್ನದ ಗಟ್ಟಿಗಳನ್ನು ಕರಗಿಸುವುದು ಸೇರಿದಂತೆ ಆಭರಣಗಳ ಕುಸುರಿ ಕೆಲಸ ಮಾಡುತ್ತಿದ್ದು ಮಳಿಗೆಯೊಂದನ್ನು ಇಟ್ಟುಕೊಂಡಿದ್ದಾರೆ. ನವೆಂಬರ್ 11ರಂದು ಮಧ್ಯಾಹ್ನ ಕಾರೊಂದರಲ್ಲಿ ಆಗಮಿಸಿದ ನಾಲ್ವರು ಅಪರಿಚಿತರು ಬಾಗಿಲು ತೆರೆದಿದ್ದು ತಮ್ಮನ್ನು ಪೊಲೀಸರು ಎಂದು ಪರಿಚಯಿಸಿಕೊಂಡಿದ್ದಾರೆ. ಪೊಲೀಸ್ ಸಮವಸ್ತ್ರ ಹೋಲು ಪ್ಯಾಂಟ್ ಧರಿಸಿದ್ದರಿಂದ ಪೊಲೀಸರು ಎಂದೇ ಅಲ್ಲಿನ ಸಿಬ್ಬಂದಿ ನಂಬಿದ್ದಾರೆ.
ಇದನ್ನೂ ಓದಿ:ಜೈಲಿನ ಕೈದಿಗಳು ತಯಾರಿಸಿದ ಹವಾಯಿ ಚಪ್ಪಲಿ ಸದ್ಯದಲ್ಲೇ ಕೇರಳ ಮಾರುಕಟ್ಟೆ ಪ್ರವೇಶ
ಮಳಿಗೆ ಒಳಗಡೆ ಬಂದ ಅಪರಿಚಿತರು ಏಕಾಏಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅಲ್ಲಿನ ಸಿಬ್ಬಂದಿಯ ಫೋನ್‌ಗಳನ್ನು ಕಿತ್ತಿಟ್ಟುಕೊಂಡಿದ್ದಾರೆ. ಬಳಿಕ, ಒಂದು ಚಿನ್ನದ ಗಟ್ಟಿ ಹಾಗೂ ಸುಮಾರು 300 ಗ್ರಾಂ ಚಿನ್ನವನ್ನು ಎತ್ತಿಕೊಂಡು ಈ ಚಿನ್ನಕ್ಕೆ ದಾಖಲೆಗಳನ್ನು ನೀಡಿ ಎಂದು ಹೆದರಿಸಿದ್ದಾರೆ. ಬಳಿಕ ಕಾರಿನಲ್ಲಿ ಪರಾರಿಯಾಗಿದ್ದರು.ಈ ಕುರಿತು ಕಾರ್ತಿಕ ಎಂಬುವವರು ಹಲಸೂರು ಗೇಟ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
“ಪ್ರಕರಣ ಸಂಬಂಧ ತನಿಖೆ ನಡೆಸಿ ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಉದ್ದೇಶಪೂರ್ವಕವಾಗಿ ಸಂಚು ರೂಪಿಸಿ ಆರೋಪಿಗಳು ಈ ಕೃತ್ಯ ಎಸಗಿರುವುದು ಕಂಡು ಬಂದಿದೆ. ಆರೋಪಿಗಳಿಗೆ ಸುಲಿಗೆ ಮಾಡಲು ಬೇರೊಬ್ಬ ಡೀಲ್ ನೀಡಿದ್ದು ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದಾರೆ. ಅವರ ಬಂಧನಕ್ಕೆ ಕ್ರಮ ವಹಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.