ಹಟ್ಟಿ ಚಿನ್ನದ ಗಣಿ: ಚಿನ್ನದ ಗಣಿ ಕಂಪನಿಯಲ್ಲಿ ಅದಿರು ಸಂಸ್ಕರಿಸಿ ಚಿನ್ನ ಉತ್ಪಾದಿಸುವ ಸಾಗ್ ಆ್ಯಂಡ್ ಬಾಲ್ ಮಿಲ್‌ನ ಪ್ರಮುಖ ಸಲಕರಣೆಗಳಾದ ಲೈನರ್‌ಗಳು ವಿಫಲವಾಗುತ್ತಿರುವುದರಿಂದ ವಾರದಿಂದ ಅದಿರು ಸಂಸ್ಕರಣೆ ಪದೇ ಪದೆ ಸ್ಥಗಿತಗೊಳ್ಳುತ್ತಿದೆ.
ಭೂ ಕೆಳಮೈಯಿಂದ ಚಿನ್ನದ ಅದಿರು ಹೊರತಂದರೂ ಅದನ್ನು ಮಿಲ್‌ನಲ್ಲಿ ಸಂಸ್ಕರಿಸಿದಾಗ ಮಾತ್ರ ಚಿನ್ನ ಉತ್ಪಾದನೆಯಾಗುತ್ತದೆ. ಅದಿರು ಸಂಸ್ಕರಣೆಗಾಗಿ ದಶಕದ ಹಿಂದೆ ಗಣಿ ಆಡಳಿತ ವರ್ಗ 68 ಕೋಟಿ ರೂ. ವೆಚ್ಚದಲ್ಲಿ ಸಾಗ್ ಆ್ಯಂಡ್ ಬಾಲ್ ಮಿಲ್ ನಿರ್ಮಿಸಿದೆ. ಪ್ರತಿ ಗಂಟೆಗೆ 100 ಟನ್ ಅದಿರು ಸಂಸ್ಕರಿಸುವ ಸಾಮರ್ಥ್ಯದ ಮಿಲ್ 24 ಗಂಟೆ ಕಾರ್ಯ ನಿರ್ವ ಹಿಸುತ್ತದೆ. ಕಾಲಕಾಲಕ್ಕೆ ಕೆಲವು ಸಲಕರಣೆ ಬದಲಾಯಿಸುವುದು ಸಹಜ. ಹೀಗೆ ಸಲಕರಣೆ ಗಳನ್ನು ಬದಲಾಯಿಸುವಾಗ ಹೊಸದಾಗಿ ತಂದಿರುವ ಸಲಕರಣೆಗಳು ಕಳಪೆ ಮಟ್ಟದ್ದಾಗಿವೆ ಎಂಬ ದೂರುಗಳು ಕಾರ್ಮಿಕರಿಂದ ಕೇಳಿ ಬಂದಿವೆ.
ಸಾಗ್ ಆ್ಯಂಡ್ ಬಾಲ್ ಮಿಲ್ ಕಾರ್ಯನಿರ್ವಹಿಸಲು ಲೈನರ್‌ಗಳು ಅಗತ್ಯ. ಅವುಗಳು ಸವೆದಾಗ ಬದಲಾಯಿಸುವುದು ಸಾಮಾನ್ಯ. ಒಂದು ಬಾರಿ ಅಳವಡಿಸಿದಾಗ ಅವುಗಳು ಕನಿಷ್ಠ ಒಂದು ವರ್ಷದವರೆಗೆ ಬಾಳಿಕೆ ಬರಬೇಕು. ಆದರೆ, ಇತ್ತೀಚೆಗೆ ತರಿಸಲಾದ ಲೈನರ್‌ಗಳು ಅಳವಡಿಸಿದ ವಾರದಲ್ಲೇ ವಿಫಲವಾಗುತ್ತಿವೆ ಎನ್ನಲಾಗಿದೆ. ಕಂಪನಿ ಮೂಲಗಳ ಪ್ರಕಾರ ಆ.5ರಂದು 300 ಹೊಸ ಲೈನರ್ ಅಳವಡಿಸಿ ಪ್ರಾರಂಭಿಸಲಾಗಿತ್ತು.
ಆ.17ರ ನಂತರ ಆ ಹೊಸ ಲೈನರ್‌ಗಳು ವಿಫಲಗೊಂಡು ಕಳಚಿ ಬೀಳುತ್ತಿವೆ. ಪರಿಣಾಮ ಅದಿರು ಸಂಸ್ಕರಣೆ ಸ್ಥಗಿತಗೊಳ್ಳುತ್ತಿದೆ. ಹಳೆ ಲೈನರ್‌ಗಳ ಬಳಕೆ: ಲೈನರ್‌ಗಳ ವಿಫಲತೆಯಿಂದ ಮಿಲ್ ಡೆಯದಂತಾಗಿದೆ. ಸವೆದಿವೆ ಎಂದು ಬಿಸಾಡಿದ್ದ ಹಳೆಯ ಲೈನರ್‌ಗಳನ್ನೇ ಮರು ಜೋಡಿಸಿ ಅದಿರು ಸಂಸ್ಕರಣೆ ಪ್ರಯತ್ನ ನಡೆಸಲಾಗಿದೆ.
ಕಮಿಷನ್ ಆಸೆಗಾಗಿ ಕಳಪೆ ಮಟ್ಟದ ಲೈನರ್ ತರಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಸಾಗ್ ಆ್ಯಂಡ್ ಬಾಲ್ ಮಿಲ್‌ಗೆ ಒಂದು ಬಾರಿ ಎಲ್ಲ ವಿಭಾಗಗಳು ಸೇರಿದಂತೆ ಒಟ್ಟು 300ಕ್ಕೂ ಅಧಿಕ ಲೈನರ್‌ಗಳನ್ನು ಅಳವಡಿಸಲು ಅದರ ಖರೀದಿ,ಜೋಡಣೆ ವೆಚ್ಚ ಸೇರಿ 2 ಕೋಟಿಗೂ ಅಧಿಕ ವೆಚ್ಚ ತಗಲುತ್ತದೆ ಎನ್ನಲಾಗಿದೆ. ಕಳಪೆ ಮಟ್ಟದ ಸಲಕರಣೆ ಖರೀದಿಸಿ ಗಣಿ ಕಂಪನಿಗೆ ನಷ್ಟ ಉಂಟು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾರ್ಮಿಕರು ಆಗ್ರಹಿಸಿದ್ದಾರೆ.