Advertisement

ಶ್ರೀಕೃಷ್ಣಮಠದ ಪಲ್ಲಕಿಗೆ ಕಾಶ್ಮೀರದ ಚಿನ್ನ

09:48 PM Jan 16, 2022 | Team Udayavani |

ಉಡುಪಿ: ಉಡುಪಿ ಶ್ರೀಕೃಷ್ಣನ ಉತ್ಸವ ಮೂರ್ತಿ ಹೊತ್ತೂಯ್ಯುವ ಚಿನ್ನದ ಪಲ್ಲಕಿಯ ಚಿನ್ನ ಕಾಶ್ಮೀರದ್ದು. ಇದು ಕಾಶ್ಮೀರದಿಂದ ಬಂದದ್ದು 1880ರಲ್ಲಿ. ಇದಕ್ಕೂ ಹಿಂದಿನ ಇತಿಹಾಸ ತಿಳಿಯುವುದಿಲ್ಲ. ಇದು ಮೂಲದಲ್ಲಿ ಸುವರ್ಣದ ಅಲಂಕಾರದಿಂದ ಕೂಡಿದ ಮನುಷ್ಯರನ್ನು ಹೊರುವ ಗಜದಂತದ ಪಲ್ಲಕಿ. ಅನಂತರ ಸುವರ್ಣ
ಬೇರೆಯಾಗಿ ದೇವರನ್ನು ಹೊತ್ತೂಯ್ಯುವ ಪಲ್ಲಕಿಯಾಯಿತು. ಸುವರ್ಣ ಬೇರೆ ಯಾದ ಬಳಿಕ ಕೇವಲ ಗಜದಂತದ ಪಲ್ಲಕಿ ಸ್ವಾಮಿಗಳನ್ನು ಪರ್ಯಾಯ ಮೆರವಣಿಗೆಯಲ್ಲಿ ಕರೆದೊಯ್ಯುವ ಪಲ್ಲಕಿಯಾಯಿತು. 19ನೆಯ ಶತಮಾನದಲ್ಲಿ ಆಗಿ ಹೋದ ಅದ್ಭುತ ವ್ಯಕ್ತಿ ಜಮಖಂಡಿ ವಾದಿರಾಜ ಆಚಾರ್ಯರೇ (27-7-1842ರಿಂದ 5-9-1896) ಇದಕ್ಕೆ ಕಾರಣಕರ್ತರು. ಇವರು ಮೂಲತಃ ಬಿಜಾಪುರ ಜಿಲ್ಲೆಯ ಜಮಖಂಡಿಯವರು. ಅವರ ಹುಟ್ಟಿಗೆ ಉಡುಪಿ, ಸೋಂದಾ ಕ್ಷೇತ್ರದ ಅನುಗ್ರಹವಿದ್ದ ಕಾರಣ ಇವೆರಡೂ ಕ್ಷೇತ್ರಗಳಿಗೆ ವಿಶೇಷ ಸೇವೆ ಸಲ್ಲಿಸಿದ್ದರು.

Advertisement

ಶ್ರೀಕೃಷ್ಣಾಪುರ ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ (1808-1881) ಶಿಷ್ಯರು ವಾದಿರಾಜ ಆಚಾರ್ಯರು. ಆಚಾರ್ಯರು 1879, 1880, 1884ರಲ್ಲಿ ಮೂರು ಸಲ ಬದರಿಯಾತ್ರೆ ಮಾಡಿದ್ದರು. ಇದೇ ಸಂದರ್ಭದಲ್ಲಿ ಕಾಶ್ಮೀರಕ್ಕೆ ತೆರಳಿ ಅಲ್ಲಿನ ವಿದ್ವಾಂಸರೊಂದಿಗೆ ಗೋಷ್ಠಿಯಲ್ಲಿ ಜಯಪತಾಕೆ ಗಳಿಸಿದರು. ಅವರ ವಿದ್ವತ್‌ಗೆ ಮೆಚ್ಚಿದ ಕಾಶ್ಮೀರದ ರಾಜ ಸುವರ್ಣಾಲಂಕೃತ ಗಜದಂತದ ಪಲ್ಲಕಿಯನ್ನು ಜಯಪತಾಕೆಯೊಂದಿಗೆ ಸಮರ್ಪಿಸಿದ. ಪಲ್ಲಕಿಯನ್ನು ಆಗ ತಿರುಪತಿಯ ಶ್ರೀನಿವಾಸನ ದರ್ಶನಕ್ಕೆ ತೆರಳಿದ ವಿದ್ಯಾಗುರು ಶ್ರೀ ವಿದ್ಯಾಧೀಶ ತೀರ್ಥರಿಗೆ ಸಮರ್ಪಿಸಿದರು. ಇದು ನಡೆದದ್ದು 1881ರಲ್ಲಿ. ಇದರ ಬಗೆಗೆ ಸಂಸ್ಕೃತ, ಆಂಗ್ಲ ಭಾಷೆಯಲ್ಲಿ ದಾಖಲೆಗಳಿವೆ.

ಶ್ರೀ ವಿದ್ಯಾಧೀಶ ತೀರ್ಥರು ಹಿಂದಿರುಗಿ ಬರುವಾಗ ಬೆಂಗಳೂರಿನಲ್ಲಿ ನಿರ್ಯಾಣ ಹೊಂದಿದರು. ಪಲ್ಲಕಿ ಅವರ ಶಿಷ್ಯ ಶ್ರೀ ವಿದ್ಯಾಪೂರ್ಣತೀರ್ಥರಿಗೆ ಬಂತು. ಶ್ರೀಪಾದರು ಪಲ್ಲಕಿಯಲ್ಲಿದ್ದ ಚಿನ್ನ ಮತ್ತು ತಮ್ಮ ಮಠದ ಚಿನ್ನವನ್ನೂ ಸೇರಿಸಿ ಶ್ರೀಕೃಷ್ಣನಿಗೆ ಸುವರ್ಣ ಪಲ್ಲಕ್ಕಿ ಮಾಡಿ ಸಮರ್ಪಿಸಿದರು.

ಶ್ರೀವಿದ್ಯಾಪೂರ್ಣತೀರ್ಥರು (1881ರಿಂದ 1935ರವರೆಗೆ ಅಧಿಪತಿಗಳಾಗಿದ್ದರು) ತಮ್ಮ ಎರಡನೆಯ ಪರ್ಯಾಯದಿಂದ (1910-12) ಮೂರನೆಯ ಪರ್ಯಾಯದ (1926-28) ಅವಧಿಯಲ್ಲಿ ಚಿನ್ನದ ಪಲ್ಲಕಿಯನ್ನು ಶ್ರೀಕೃಷ್ಣನಿಗೆ ಸಮರ್ಪಿಸಿದರು.

ವಾದಿರಾಜ ಆಚಾರ್ಯರು ದಾಸರೂ, ವಿದ್ವಾಂಸರೂ, ಆಂಗ್ಲ ಭಾಷೆ ಬಲ್ಲವರೂ ಆಗಿದ್ದರು. ಮಾನವಾತೀತ ಶಕ್ತಿಯನ್ನು ಅನೇಕ ಬಾರಿ ತೋರಿಸಿದ್ದರು. ಅನೇಕ ವಿಶೇಷಗಳಿದ್ದರೂ ಮಧುಕರಿ ವೃತ್ತಿಯನ್ನು (ಭಿಕ್ಷೆಯಿಂದ ಆಹಾರ ಸ್ವೀಕಾರ) ಬಿಟ್ಟಿರಲಿಲ್ಲ.

Advertisement

ಆಕರ್ಷಕ ಕುಸುರಿ ಕಲೆ
ಚಿನ್ನವನ್ನು ಬೇರ್ಪಡಿಸಿದ ಅನಂತರ ಗಜದಂತದ ಪಲ್ಲಕ್ಕಿಯಲ್ಲಿ ಶ್ರೀಕೃಷ್ಣಾಪುರ ಮಠಾಧೀಶರು ಪರ್ಯಾಯ ಮೆರವಣಿಗೆಯಲ್ಲಿ ಕುಳಿತುಕೊಂಡು ಬರುತ್ತಿದ್ದರು. ಇದು 2006ರವರೆಗೂ ನಡೆದುಬಂತು. ಶಿಥಿಲಾವಸ್ಥೆಗೆ ಬಂದ ಕಾರಣ ಅದನ್ನು ಬಿಟ್ಟು ಬೇರೆ ಪಲ್ಲಕಿಯನ್ನು ಮಾಡಿಸಲಾಯಿತು. ಪಲ್ಲಕಿ ಯಲ್ಲಿ ಗಜದಂತದಲ್ಲಿ ಮಾಡಿದ ಕುಸುರಿಕಲೆಗಳು ಆಕರ್ಷಕ ವಾಗಿವೆ. ಇದನ್ನು ಕೋಣೆಯಿಂದ ಹೊರತರಲು ಹತ್ತು ಕಟ್ಟು ಮಸ್ತಾದ ವ್ಯಕ್ತಿಗಳು ಬೇಕು.

 

Advertisement

Udayavani is now on Telegram. Click here to join our channel and stay updated with the latest news.

Next