Advertisement

ಚಿನ್ನವನ್ನು ಮನೆಯಲ್ಲಿಟ್ಟು ಏನು ಮಾಡ್ತೀರಿ?

03:23 PM Jul 06, 2020 | mahesh |

ನಿಮ್ಮ ಮನೆಯಲ್ಲಿ ಚಿನ್ನವಿದೆ. ಸಂಭ್ರಮದ ಸಂದರ್ಭಗಳಲ್ಲಿ ಅವನ್ನು ಹಾಕಿಕೊಂಡು ಓಡಾಡುತ್ತೀರಿ. ಆದರೆ ಅದರಿಂದ ಲಾಭ? ಹೀಗೆ ಲಾಭ ಪಡೆದುಕೊಳ್ಳಲು 2015ರಲ್ಲೇ ಕೇಂದ್ರಸರ್ಕಾರ ಒಂದು ಯೋಜನೆ ಮಾಡಿದೆ. ಹೆಸರು ಗೋಲ್ಡ್‌ ಮಾನಿಟೈಸೇಶನ್‌ ಸ್ಕೀಮ್‌. ಅಂದರೆ ಚಿನ್ನದಿಂದ ಹಣಕಾಸಿನ ಲಾಭ ಪಡೆಯುವ ಯೋಜನೆ. ಇದರಿಂದ ಹಲವರಿಗೆ ಹಲವು ರೀತಿಯ ಲಾಭಗಳಿವೆ. ಇಲ್ಲಿದೆ ವಿವರ.

Advertisement

ಏನಿದು ಚಿನ್ನದಿಂದ ಹಣಗಳಿಸುವ ಯೋಜನೆ?
ಗೋಲ್ಡ್‌ ಮಾನಿಟೈಸೇಶನ್‌ ಸ್ಕೀಮ್‌ ಚುಟುಕಾಗಿ ಜಿಎಂಎಸ್‌ ಎಂದು ಕೇಂದ್ರದಿಂದ ಕರೆಸಿಕೊಳ್ಳಲ್ಪಟ್ಟಿದೆ. ಭಾರತೀಯರಿಗೆ ಚಿನ್ನದ ಮೇಲೆ ವ್ಯಾಮೋಹ ವಿಪರೀತ. ಆದ್ದರಿಂದ ಚಿನ್ನಕೊಂಡು ಮನೆಯಲ್ಲಿಟ್ಟಿರುತ್ತಾರೆ. ಇಂತಹ ಚಿನ್ನವನ್ನು ಸುಮ್ಮನೆ ಇಟ್ಟುಕೊಳ್ಳುವುದಕ್ಕಿಂತ ಅದನ್ನು ಜಿಎಂಎಸ್‌ ಯೋಜನೆಯಡಿ ಬ್ಯಾಂಕ್‌ಗಳಲ್ಲೋ, ಬ್ಯಾಂಕೇತರ ಸಂಸ್ಥೆಗಳಲ್ಲೋ (ಎನ್‌ಬಿಎಫ್ಸಿ) ¬ಒಂದು ಖಾತೆ ತೆರೆದು ಇಡಬೇಕು. ಬಾರ್‌, ನಾಣ್ಯ, ಆಭರಣಗಳನ್ನು ಹೀಗೆ ಇಡಲು ಅವಕಾಶವಿದೆ. ಕನಿಷ್ಠ 30 ಗ್ರಾಮ್‌, ಗರಿಷ್ಠ ಮಿತಿಯಿಲ್ಲ. ಕೇಂದ್ರಸರ್ಕಾರದ ಪರವಾಗಿ ಬ್ಯಾಂಕ್‌ಗಳು ಇಂತಹ ಚಿನ್ನವನ್ನು ತಮ್ಮ ಸುರಕ್ಷಿತ ಲಾಕರ್‌ಗಳಲ್ಲಿ ಇಟ್ಟುಕೊಳ್ಳುತ್ತವೆ. ಇದಕ್ಕೆ ವಾರ್ಷಿಕ
ಬಡ್ಡಿದರವನ್ನು ಕೇಂದ್ರ ನಿರ್ಧರಿಸುತ್ತದೆ.

ಲಾಭಗಳೇನು?
ಚಿನ್ನ ಚಲಾವಣೆಗೊಳ್ಳುತ್ತದೆ
ಮನೆಯಲ್ಲೋ, ಸಂಸ್ಥೆಗಳಲ್ಲೋ ಸುಮ್ಮನೆ ಇಟ್ಟಿರುವ ಚಿನ್ನ, ಜಿಎಂಎಸ್‌ ಯೋಜನೆಯಡಿ ಚಲಾವಣೆಗೊಳ್ಳಲು ಆರಂಭವಾಗುತ್ತದೆ. ಈ ಚಿನ್ನ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಲಾವಣೆಗೊಳ್ಳುವುದರಿಂದ ಆಭರಣಕಾರರಿಗೂ ಲಾಭವಿದೆ. ಅವರಿದನ್ನು ಸಾಲವಾಗಿ ಪಡೆದುಕೊಳ್ಳಲು ಸಾಧ್ಯ

ಬಡ್ಡಿ ಪಡೆಯಿರಿ
ಸುಮ್ಮನೆ ಬ್ಯಾಂಕ್‌ಗಳಲ್ಲೋ, ಮನೆಯಲ್ಲೋ ಇಟ್ಟುಕೊಂಡಿರುವ ಚಿನ್ನದಿಂದ ಯಾವುದೇ ಲಾಭವಿಲ್ಲ. ಅದನ್ನೇ ಜಿಎಂಎಸ್‌ನಲ್ಲಿ ಇಟ್ಟರೆ ಬಡ್ಡಿ ಸಿಗುತ್ತದೆ. ನೀವು ಎಷ್ಟು ಅವಧಿಗೆ ಠೇವಣಿ ಇಡುತ್ತೀರಿ ಅನ್ನುವುದರ ಮೇಲೆ ನಿಮಗೆ ಸಿಗುವ ಬಡ್ಡಿಯೂ ನಿರ್ಧಾರವಾಗುತ್ತದೆ.

ಸುರಕ್ಷೆ, ನೆಮ್ಮದಿ
ನೀವು ಚಿನ್ನವನ್ನು ಠೇವಣಿಯಿಟ್ಟರೆ, ಅದನ್ನು ಬ್ಯಾಂಕ್‌ಗಳು ತಮ್ಮ ಅತ್ಯಂತ ಸುರಕ್ಷಿತ ಲಾಕರ್‌ನಲ್ಲಿಡುತ್ತವೆ. ಮನೆಯಲ್ಲಿಟ್ಟುಕೊಂಡಿರುವಾಗ ಇರುವ ಕಳ್ಳತನವಾಗುವ ಭೀತಿ ಇಲ್ಲಿರುವುದಿಲ್ಲ. ಸುರಕ್ಷೆಗೋಸ್ಕರ ನೀವು ಬ್ಯಾಂಕ್‌ಗಳಲ್ಲಿ ಲಾಕರ್‌ ನಲ್ಲಿ ಇಟ್ಟರೆ ಅದಕ್ಕೆ ಹೆಚ್ಚುವರಿ ಹಣ ಪಾವತಿಸಬೇಕು. ಇಲ್ಲಿ ಅದು ಅಗತ್ಯವಿಲ್ಲ. ನಿಮ್ಮ ಚಿನ್ನಕ್ಕೆ ಲಾಭವೂ ಬರುತ್ತದೆ, ಸುರಕ್ಷಿತವಾಗಿ ಲಾಕರ್‌ಗಳಲ್ಲೂ ಇರುತ್ತದೆ!

Advertisement

ಸರ್ಕಾರಕ್ಕೇನು ಲಾಭ?
ಕೇಂದ್ರಸರ್ಕಾರಕ್ಕೆ ಇದರಿಂದ ಹಲವು ಲಾಭಗಳಿವೆ. ಭಾರತ ವಿಪರೀತ ಚಿನ್ನ ಬಳಸುವ, ಚಿನ್ನದ ದೊಡ್ಡ ಮಾರುಕಟ್ಟೆ ಹೊಂದಿರುವ ದೇಶ. ಆದ್ದರಿಂದ ಚಿನ್ನವನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದು ಅನಿವಾರ್ಯ. ಭವಿಷ್ಯದಲ್ಲಿ ಈ ರೀತಿಯ ಆಮದನ್ನು ಹಂತಹಂತವಾಗಿ ಕಡಿಮೆ
ಮಾಡಬಹುದು. ದೇಶದೊಳಗೆ ಇರುವ ಚಿನ್ನದ ಬಳಕೆ ಹೆಚ್ಚಿಸಬಹುದು. ಇದರಿಂದ ವಿದೇಶಿ ಅವಲಂಬನೆ ಕಡಿಮೆಯಾಗುತ್ತದೆ. ಆಮದು ವೆಚ್ಚವೂ ತಗ್ಗುತ್ತದೆ. ಸರ್ಕಾರ ಸ್ವತಃ ಚಿನ್ನವನ್ನು ಸಾಲ ಪಡೆಯುವ ಖರ್ಚೂ ಇಲ್ಲವಾಗುತ್ತದೆ.

ತೆರಿಗೆ ವಿನಾಯ್ತಿ
ಯಾವುದೇ ಹೂಡಿಕೆ ಮಾಡುವಾಗ, ಠೇವಗಳನ್ನು ಇಡುವಾಗ, ವಿಮೆಗಳನ್ನು ಖರೀದಿಸುವಾಗ ಆದಾಯ ತೆರಿಗೆ ಉಳಿತಾಯವಾಗುತ್ತದೆಯಾ ಎಂದು ಗಮನಿಸುವುದು ಮಾಮೂಲಿ. ಹಲವರು ತೆರಿಗೆ ಉಳಿಸಲೆಂದೇ ಹೂಡಿಕೆ ಮಾಡುತ್ತಾರೆ. ಇದನ್ನು ಸರ್ಕಾರವೂ ಪರೋಕ್ಷವಾಗಿ ಪ್ರೋತ್ಸಾಹಿಸುತ್ತದೆ. ಕೇಂದ್ರದ ಜಿಎಂಎಸ್‌ ಯೋಜನೆಯಡಿ ಚಿನ್ನವನ್ನು ಠೇವಯಿಟ್ಟರೆ, ತೆರಿಗೆ ವಿನಾಯ್ತಿಗಳು ಸಿಗುತ್ತವೆ. ನೀವು ಹೀಗೆ ಇಡಲ್ಪಟ್ಟ ಠೇವಣಿಗಳಿಂದ ಬಂದ
ಆದಾಯಕ್ಕೆ ಬಂಡವಾಳ ಲಾಭ ತೆರಿಗೆ (ಕ್ಯಾಪಿಟಲ್‌ ಗೇನ್ಸ್‌ ಟ್ಯಾಕ್ಸ್‌) ಇರುವುದಿಲ್ಲ. ಬಂಡವಾಳ ಲಾಭ ತೆರಿಗೆಯನ್ನು ಸಂಪತ್ತು ಮತ್ತು ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿರುವುದು ಇದಕ್ಕೆ ಕಾರಣ. ಒಂದು ವೇಳೆ ಕಾಲಕ್ರಮದಲ್ಲಿ ನಿಮ್ಮ ಚಿನ್ನದ ಮೌಲ್ಯ ಹೆಚ್ಚಿದರೂ ಕೂಡ, ಬಂಡವಾಳ ಲಾಭ ತೆರಿಗೆಯನ್ನು ಹೇರುವುದಿಲ್ಲ ಎನ್ನುವುದನ್ನು ಮರೆಯಬಾರದು. ಹಾಗಾಗಿ ಈ ಹೂಡಿಕೆಯಿಂದ ಬಂದ ಲಾಭಕ್ಕೆ ತೆರಿಗೆ ಹೇರಲಾಗುತ್ತದೆ ಎಂಬ ಭೀತಿಯ ಅಗತ್ಯವಿಲ್ಲ.

ಹೇಗಾದರೂ ಇಡಿ, ಯಾವ ರೂಪದಲ್ಲಾದರೂ ಪಡೆಯಿರಿ
ಜಿಎಂಎಸ್‌ನಲ್ಲಿ ಇಡಲ್ಪಟ್ಟಿರುವ ಚಿನ್ನದ ಠೇವಣಿಗಳಿಗೆ ಹಲವು ಸೌಕರ್ಯಗಳಿವೆ. ನೀವು ಚಿನ್ನದ ಬಾರ್‌ಗಳು, ನಾಣ್ಯಗಳು, ಆಭರಣಗಳ ರೂಪದಲ್ಲಾದರೂ ಠೇವಣಿ ಇಡಬಹುದು. ಅವಧಿ ಮುಗಿದ ನಂತರ ಅದನ್ನು ಹಿಂಪಡೆಯುವಾಗ ಯಥಾರೂಪದಲ್ಲೇ ತೆಗೆದುಕೊಳ್ಳಬಹುದು ಅಥವಾ ಹಣದ ರೂಪದಲ್ಲೂ ಪಡೆದುಕೊಳ್ಳಬಹುದು. ಆದರೆ ಇಡುವಾಗಲೇ ಯಾವರೀತಿಯಲ್ಲಿ ಹಿಂಪಡೆಯಲು ಬಯಸುತ್ತೀರಿ ಎನ್ನುವುದನ್ನು ಖಚಿತಪಡಿಸಿರಬೇಕು.

Advertisement

Udayavani is now on Telegram. Click here to join our channel and stay updated with the latest news.

Next