ಬೀಳಗಿ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 96ಕ್ಕಿಂತ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ ಐದು ಗ್ರಾಂ ಬಂಗಾರದ ಪದಕ ನೀಡುವುದಾಗಿ ಸೊನ್ನ ಗ್ರಾಮದ ಸರಕಾರಿ ಪ್ರೌಢಶಾಲೆಯ ಶಾಲಾ ಸುಧಾರಣಾ ಸಮಿತಿ ಘೋಷಣೆ ಮಾಡಿದೆ.
ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳನ್ನು ಬೀಳ್ಕೊಡುವ ಸಮಾರಂಭದಲ್ಲಿ ಶಾಲಾ ಸುಧಾರಣಾ ಸಮಿತಿ ತಿಳಿಸಿದೆ. ಇಲ್ಲಿನ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಯೋರ್ವ ಕಳೆದ ಸಾಲಿನ ಕನ್ನಡ ಮಾಧ್ಯಮ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 96 ಅಂಕ ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನಗಳಿಸುವುದರೊಂದಿಗೆ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದುಕೊಟ್ಟಿದ್ದ. ಈ ಬಾರಿಯೂ ಇಲ್ಲಿನ ಶಾಲೆಯ ವಿದ್ಯಾರ್ಥಿಗಳೇ ತಾಲೂಕಿಗೆ ಪ್ರಥಮ ಬರಬೇಕು ಎನ್ನುವುದು ಶಾಲೆಯ ಎಸ್‌ಡಿಎಂಸಿಯವರ ಹಂಬಲ.
ಹಾಗಾಗಿ, ಕಳೆದ ಬಾರಿಯ ಶೇ. 96 ಅಂಕಗಳ ದಾಖಲೆ ಮುರಿಯುವ ವಿದ್ಯಾರ್ಥಿ ಕೊರಳಿಗೆ ಬಂಗಾರದ ಪದಕ ಬೀಳಲಿದೆ. ವಿದ್ಯಾರ್ಥಿಗಳಲ್ಲಿ ಪ್ರೋತ್ಸಾಹ ತುಂಬುವ ಈ ಕ್ರಮ ಸಾರ್ವಜನಿಕ ಮೆಚ್ಚುಗೆಗೆ ಕಾರಣವಾಗಿದೆ. ಪ್ರತಿ ವಿಷಯದಲ್ಲಿ ಶೇ. 90ಕ್ಕೂ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಪ್ರತಿ ವಿಷಯಕ್ಕೆ ಒಂದು ಸಾವಿರ ನಗದು ಬಹುಮಾನವನ್ನು ಕೂಡ ಎಸ್‌ಡಿಎಂಸಿ ಘೋಷಿಸಿದೆ. ಬಹುಮಾನಕ್ಕೆ ತಗಲುವ ಎಲ್ಲ ವೆಚ್ಚವನ್ನು ಎಸ್‌ಡಿಎಂಸಿಯವರೇ ಭರಿಸಲಿದ್ದಾರೆ. ಒಟ್ಟಿನಲ್ಲಿ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಳ್ಳಲಿ ಎನ್ನುವ ಆಶಯ.
ಎಸ್‌ಡಿಎಂಸಿಯವರು ಈ ರೀತಿ ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಿರುವ ಕ್ರಮವೂ ಕೂಡ ಒಂದು ಮಾದರಿ ಕೆಲಸವಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೆ ವೇಳೆ ಎಸ್‌ಡಿಎಂಸಿ ಸದಸ್ಯ ಶ್ರೀಶೈಲ ಮಲಕಗೊಂಡ ಶಾಲಾಭಿವೃದ್ಧಿಗೆ 10 ಸಾವಿರ ನೀಡುವುದಾಗಿ ಘೊಷಿಸಿರುವ ಕ್ರಮ ಶಾಲಾಭಿವೃದ್ಧಿಯ ಕಳಕಳಿಗೆ ಸಾಕ್ಷಿಯಾಗಿದೆ. ಎಸ್‌ಡಿಎಂಸಿ ಅಧ್ಯಕ್ಷ ಗೋವಿಂದಪ್ಪ ಉತ್ತೂರ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು. ವ್ಯರ್ಥ ಸಮಯ ಹಾಳು ಮಾಡದೆ ಓದಿನ ಮೂಲಕ ಸಮಯವನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಪ್ರತಿ ಸಲದಂತೆ ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತೆಗೆಯುವ ಭರವಸೆ ನಮಗಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ. ಕಾಲೇಜು ಮೆಟ್ಟಿಲೇರುವ ಉತ್ಸಾಹದಲ್ಲಿರುವ ವಿದ್ಯಾರ್ಥಿಗಳು, ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಕೈರೂನಬಿ ಜೈನಾಪುರ, ಉಪಾಧ್ಯಕ್ಷ ವಿಜಯ ಚಲವಾದಿ, ತಾಪಂ ಸದಸ್ಯ ಡೋಂಗ್ರಿಸಾಬ ಕುದರಿ, ಎಸ್‌ಡಿಎಂಸಿ ಸದಸ್ಯ ರುದ್ರಪ್ಪ ಕರಳ್ಳಿ, ಕುದರಿಮಠ, ಗುರುನಾಥ ಪೋಲೇಶಿ, ಮುಖ್ಯೋಪಾಧ್ಯಾಯ ವಿ.ಎಸ್.ಕುಂಬಾರ ಇತರರು ಇದ್ದರು.