Advertisement
ಹೌದು. ರೀಯಲ್ ಎಸ್ಟೇಟ್ ಫಲವತ್ತಾದ ಭೂಮಿ ನುಂಗಿ ಹಾಕಿದ್ದು ಹಳೆಯ ಸುದ್ದಿ. ಅಭಿವೃದ್ಧಿ ಯೋಜನೆಗಳಾದ ವಿಮಾನ ನಿಲ್ದಾಣ, ಅಷ್ಟಪಥ ರಸ್ತೆಗಳು, ಸರ್ಕಾರಿ ಕಚೇರಿಗಳು, ಕ್ರೀಡಾಂಗಣಗಳ ನಿರ್ಮಾಣಕ್ಕೆ ಮಾತ್ರ ಫಲವತ್ತಾದ ಭೂಮಿ ಬಲಿಯಾಗುತ್ತದೆ ಎನ್ನುವ ಕೂಗು ಈವರೆಗೂ ಕೇಳಿ ಬಂದಿತ್ತು. ಆದರೆ ಇದೀಗ ದೇಶಿ ಭತ್ತದ ಅನ್ನ ಅದರಲ್ಲೂ ವರ್ಷಕ್ಕೆ ಕನಿಷ್ಠ ಎರಡು ಉತ್ತಮ ಬೆಳೆ ಬೆಳೆಯುವ ಧಾರವಾಡ ಜಿಲ್ಲೆಯಲ್ಲಿನ ಅರೆಮಲೆನಾಡು ಪ್ರದೇಶದ ಹಳ್ಳಿಗಳಲ್ಲಿನ ಫಲವತ್ತಾದ ಭೂಮಿಯನ್ನು ಹಾಡಹಗಲೇ ಕೊಳ್ಳೆ ಹೊಡೆಯಲಾಗುತ್ತಿದ್ದು, ಮೈನಿಂಗ್ ಮಾಫಿಯಾದಂತೆ ಮಣ್ಣು ಮಾಫಿಯಾ ಕೂಡ ಹೆಡೆ ಎತ್ತಿದೆ.
Related Articles
Advertisement
ಈ ಭೂಮಿಯಲ್ಲಿನ ಫಲವತ್ತಾದ ಮಣ್ಣನ್ನು ರಾತ್ರೋರಾತ್ರಿ ಇಟ್ಟಿಗೆ ಭಟ್ಟಿ ತಯಾರಿಸುವ ಉದ್ಯಮಿಗಳು ಕೊಳ್ಳೆ ಹೊಡೆದು ಲಕ್ಷ ಲಕ್ಷ ಮೆಟ್ರಿಕ್ ಟನ್‌ಗಳ ಲೆಕ್ಕದಲ್ಲಿ ಶೇಖರಿಸಿಕೊಳ್ಳುತ್ತಿದ್ದಾರೆ. ನಿಜಕ್ಕೂ ಈ ಭೂಮಿಗಳು ಪರಿಸರ ಸೂಕ್ಷ್ಮ ಸಂವೇದಿ(ಇಕೋ ಝೋನ್) ಪ್ರದೇಶಳಾಗಿದ್ದವು. ಗಿಡಮರ, ಹೂ-ಬಳ್ಳಿ, ಜಾನುವಾರುಗಳಿಗೆ ಹುಲ್ಲು, ನೀರು ಸಂಗ್ರಾಹಕಗಳಾಗಿ ಅಂತರ್ಜಲ ವೃದ್ಧಿಗೂ ಇವು ಸಹಕಾರಿಯಾಗಿವೆ. ಆದರೆ ಇಲ್ಲಿನ ಫಲವತ್ತಾದ ಮಣ್ಣನ್ನು ವಿಪರೀತ ಪ್ರಮಾಣದಲ್ಲಿ ಕೊಳ್ಳೆ ಹೊಡೆಯಲಾಗುತ್ತಿದ್ದು,ವರ್ಷದಿಂದ ವರ್ಷಕ್ಕೆ ಗೋಮಾಳಗಳು ಗೊರಚು ಮಣ್ಣಿನ ಪಡಾ ಜಾಗಗಳಾಗುತ್ತಿವೆ.
ಕೆರೆಯ ಮಣ್ಣಿಗೂ ಗುನ್ನ: ಇನ್ನು ಸರ್ಕಾರಿ ಲೆಕ್ಕದಲ್ಲೂ ಮೂಗು ತೂರಿಸುವ ರೌಡಿ ಶೀಟರ್‌ಗಳು ತಮ್ಮ ಇಟ್ಟಿಗೆ ಉದ್ಯಮ ನಡೆಸುವುದಕ್ಕಾಗಿ ಕೆಲ ಅಧಿಕಾರಿಗಳು, ಗ್ರಾಪಂನ ಸ್ಥಳೀಯ ಪುಡಿ ರಾಜಕಾರಣಿಗಳ ಪಟಾಲಂಗೆ ಪಾರ್ಟಿ ಕೊಟ್ಟು ಕೆರೆಗಳಿಂದ ಹೂಳೆತ್ತುವ ಫಲವತ್ತಾದ ಮಣ್ಣನ್ನೆ ಹೊತ್ತುಕೊಂಡು ಹೋಗುತ್ತಿದ್ದಾರೆ.
ಸಾಮಾನ್ಯವಾಗಿ ರೈತ ಸಮುದಾಯ ಕೆರೆಯಲ್ಲಿನ ಫಲವತ್ತಾದ ಮಣ್ಣನ್ನು ಮರಳಿ ಭೂಮಿಗೆ ಹಾಕಿ ಉತ್ತಮ ಬೆಳೆ ಬೆಳೆಯವುದಕ್ಕೆ ತಯಾರಿ ಮಾಡಿಕೊಳ್ಳುವುದು ರೂಢಿಯಲ್ಲಿದೆ. ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಈ ಕೆರೆ ಮಣ್ಣಿಗೆ ವಿಶಿಷ್ಟ ಸ್ಥಾನವಿದ್ದು, ಗೊಬ್ಬರಕ್ಕೆ ಸರಿಸಮವಾದ ಭೂ ಪೋಷಕಾಂಶಗಳನ್ನು ಈ ಮಣ್ಣು ಹೊಂದಿರುತ್ತದೆ. ಆದರೆ ಇದರಿಂದ ಇಟ್ಟಿಗೆ ಸುಡುವ ಕೆಲಸ ಮಾಡುತ್ತಿರುವುದು ಮಾತ್ರ ಕೃಷಿಗೆ ಮಾರಕವಾಗುತ್ತಿದೆ ಎನ್ನುತ್ತಿದ್ದಾರೆ ಕೃಷಿ ತಜ್ಞರು.
ಅರಣ್ಯ ಭೂಮಿಯೂ ಸ್ವಾಹಃ: ಇನ್ನು ಮಣ್ಣು ನುಂಗುವವರಿಗೆ ಅರಣ್ಯ ಭೂಮಿಯೂ ಹೊರತಾಗಿಲ್ಲ. ರಾಜಕೀಯ ಬಲ ಬಳಸಿಕೊಂಡು ಅಧಿಕಾರ ವರ್ಗವನ್ನು ಒಳಗೆ ಹಾಕಿಕೊಂಡು ಆಯ ಕಟ್ಟಿನ ಅರಣ್ಯ ಭೂಮಿಯಲ್ಲಿನ ಫಲವತ್ತಾದ ಮಣ್ಣು ಮತ್ತು ಉತ್ತಮ ಗುಣಮಟ್ಟದ ಕಲ್ಲುಗಳನ್ನು ಕೂಡ ಈ ಮಣ್ಣು ಮಾಫಿಯಾ ಕೊಳ್ಳೆ ಹೊಡೆಯುತ್ತಿದೆ.
ಸರ್ಕಾರ ಮಾಡಬೇಕಾಗಿದ್ದೇನು?ಮರಳು ಮಾಫಿಯಾ, ಮೈನಿಂಗ್ ಮಾಫಿಯಾ, ಕಲ್ಲು ಗಣಿಗಾರಿಕೆ ಮಾಫಿಯಾ, ಟಿಂಬರ್ ಮಾಫಿಯಾಗಳ ಕಾಲ ಮುಗಿದು ಹೋಗಿದ್ದು ಇದೀಗ ಮಣ್ಣು ಮಾಫಿಯಾ ನಿಧಾನಕ್ಕೆ ತಲೆ ಎತ್ತುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಇಟ್ಟಿಗೆ ಭಟ್ಟಿಗಳ ಉದ್ಯಮಕ್ಕೆ ಭಾರಿ ಬಲ ಬಂದಿದೆ. ಇಟ್ಟಿಗೆ ಮಾರಾಟ ವರ್ಷದಿಂದ ವರ್ಷಕ್ಕೆ ಹತ್ತಾರು ಪಟ್ಟು ಹೆಚ್ಚಾಗುತ್ತಿದ್ದು, ಫಲವತ್ತಾದ ಮಣ್ಣು, ಹಳೆ ಕಾಲದ ಹುಣಸೆ ಮರಗಳು ಕಣ್ಣು ಮುಚ್ಚಿ ಕಣ್ಣು ತೆಗೆಯುವುದರಲ್ಲಿ ಮಾಯವಾಗುತ್ತಿವೆ. ಕೂಡಲೇ ಈ ಮಾಫಿಯಾಕ್ಕೆ ಸರ್ಕಾರ ಕಡಿವಾಣ ಹಾಕಿ, ಫಲವತ್ತಾದ ಮಣ್ಣಿನ ರಕ್ಷಣೆಗೆ ಅಗತ್ಯವಾದ ಕಾನೂನು ರೂಪಿಸಬೇಕಿದೆ. ಒಂದು ಟಿಪ್ಪರ್ ಮಣ್ಣಿಗೆ 550 ರೂ.ನಂತೆ ಮಣ್ಣನ್ನು ಕೊಂಡು ಸಂಗ್ರಹಿಸಿ ಇಡುತ್ತೇವೆ. ಮುಂದಿನ ವರ್ಷ ಮಣ್ಣು ಸಿಕ್ಕದೇ ಹೋಗಬಹುದು. ಅಥವಾ ಸರ್ಕಾರ ಕಠಿಣ ಕಾನೂನು ತರಬಹುದು. ಅದಕ್ಕೆ ಈಗಲೇ ಸಂಗ್ರಹಿಸುತ್ತಿದ್ದೇವೆ.
ಪ್ರದೀಪ್ ಲೆಗೋಡೆ, ಇಟ್ಟಿಗೆ ವ್ಯಾಪಾರಿ,ಕಲಘಟಗಿ ಹೊಲದಲ್ಲಿನ ಮಣ್ಣು ಮನೆ ಸಂತಿ ಮತ್ತು ದಿನಸಿ ಖರ್ಚಿಗೆ ಮಾರಾಟ ಮಾಡಿದ್ದೇವೆ. ಮಣ್ಣು ಮಾರಾಟದಿಂದ ಹೊಲಗಳಿಗೆ ಹಾನಿಯಾಗುತ್ತದೆ. ಆದರೆ ಸದ್ಯಕ್ಕೆ ಇದು ಅನಿವಾರ್ಯ.
ಲಕ್ಷ್ಮಣ ತಳವಾರ, ಮುಗದ-ಮಂಡಿಹಾಳ ರೈತ *ಡಾ.ಬಸವರಾಜ ಹೊಂಗಲ್