Advertisement

Mangaluru ಲೈಂಗಿಕ ದೌರ್ಜನ್ಯ, ಚಿನ್ನಾಭರಣ ಪಡೆದು ವಂಚನೆ: ಆರೋಪಿಗೆ ಶಿಕ್ಷೆ

12:24 AM Aug 08, 2023 | Team Udayavani |

ಮಂಗಳೂರು: ಸ್ನೇಹದ ಹೆಸರಿನಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವುದು ಮಾತ್ರವಲ್ಲದೆ, ಆಕೆಯಿಂದ ಸುಮಾರು 30.05 ಪವನ್‌ ಚಿನ್ನಾಭರಣಗಳನ್ನು ಪಡೆದಿದ್ದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಎಫ್ಟಿಎಸ್‌ಸಿ-1) ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು 3 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

Advertisement

ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಜಪ್ಪಿನಮೊಗರು ಕಜೆಕಾರ್‌ ನಿವಾಸಿ ರೋಶನ್‌ ಡಿ’ಸೋಜಾ ಆಲಿಯಾಸ್‌ ರೋಶನ್‌ ಫೆರ್ನಾಂಡಿಸ್‌(31) ಶಿಕ್ಷೆಗೊಳಗಾದವನು.

ಪ್ರಕರಣದ ವಿವರ
ನಗರದ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ 2015ರ ನ.16ರಂದು ಬೆಳಗ್ಗೆ ಬಸ್‌ನಿಂದ ಇಳಿದು ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದು ಹಿಂಬಾಲಿಸಿದ್ದ ಆರೋಪಿ ರೋಶನ್‌ ಹಲವು ಬಾರಿ ಆಕೆಯ ಜತೆ ಮಾತನಾಡಲು ಯತ್ನಿಸಿದ್ದ. ಬಾಲಕಿ ಕ್ರೈಸ್ತ ಧರ್ಮದವನೆಂದು ತಿಳಿದುಕೊಂಡಿದ್ದ ಆರೋಪಿ ತಾನು ಎಂಜಿನಿಯರಿಂಗ್‌ ವ್ಯಾಸಂಗ ಮಾಡಿದ್ದು ತಾನು ಕೂಡ ಕ್ರೈಸ್ತ ಧರ್ಮದವನಾಗಿದ್ದು ಇನ್ಫೋಸಿಸ್‌ನಲ್ಲಿ ಉದ್ಯೋಗದಲ್ಲಿರುವುದಾಗಿ ಹೇಳಿದ್ದ. ಅಲ್ಲದೆ ಬಾಲಕಿಯ ಮನೆಯವರ ಪರಿಚಯವಿದೆ ಎಂದು ತಿಳಿಸಿದ್ದ. ಈ ರೀತಿ ನಂಬಿಕೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದ.

ಅನಂತರ ಬಾಲಕಿಯನ್ನು ಮಂಗಳೂರಿನ ಹೊಟೇಲ್‌, ಮಾಲ್‌ಗ‌ಳಿಗೆ ಕರೆದುಕೊಂಡು ಹೋಗಿದ್ದ. ಮನೆಯಲ್ಲಿ ತಿಳಿಸಿದರೆ ನಮ್ಮ ನಡುವಿನ ಸ್ನೇಹಕ್ಕೆ ತೊಂದರೆಯಾಗುತ್ತದೆ. ಮನೆಯವರು ಅಡ್ಡಿ ಮಾಡುತ್ತಾರೆ ಎಂದು ಹೇಳಿದ್ದ. ಒಂದು ದಿನ ಆರೋಪಿ ರೋಶನ್‌ ತನಗೆ ತುರ್ತಾಗಿ ಹಣದ ಆವಶ್ಯಕತೆ ಇದೆ ಎಂದು ಬಾಲಕಿಯನ್ನು ನಂಬಿಸಿದ್ದ. ಅದರಂತೆ 2015ರ ಡಿ.28ರಂದು ಆಕೆಯ ಮನೆಯ ಬಳಿ ಹೋಗಿ ಆಕೆಯ ಮೂಲಕ ಆಕೆ ಮತ್ತು ಆಕೆಯ ಮನೆಯವರಿಗೆ ಸಂಬಂಧಿಸಿದ ಒಟ್ಟು 86.07 ಗ್ರಾಂ ತೂಕದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದ. ಅನಂತರ ಮತ್ತೂಂದು ದಿನ ಆರೋಪಿ ರೋಶನ್‌ ತಾನು ಈ ಹಿಂದೆ ಪಡೆದುಕೊಂಡಿದ್ದ ಚಿನ್ನಾಭರಣ ಅಡವಿಟ್ಟಿದ್ದು ಅದರ ವಾಯಿದೆ ಮುಗಿಯುತ್ತಿದೆ. ಬಡ್ಡಿ ಕಟ್ಟದಿದ್ದರೆ ಅದನ್ನು ಮಾರಾಟ ಮಾಡುತ್ತಾರೆ. ಅದಕ್ಕೆ ಮತ್ತೆ ಚಿನ್ನಾಭರಣ ಬೇಕಾಗಿದೆ ಎಂದು ಬಾಲಕಿಯನ್ನು ನಂಬಿಸಿದ್ದ. 2016 ಮಾ.12ರಂದು ಬಾಲಕಿಯ ಅಜ್ಜಿಯ ಮನೆಯ ಬಳಿಗೆ ತೆರಳಿ ಬಾಲಕಿಯ ಮೂಲಕ 34.01 ಗ್ರಾಂ ಮೌಲ್ಯದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದ. 2016ರ ಮಾ.30ರಂದು ಬೆಳಗ್ಗೆ 11.30ಕ್ಕೆ ಕದ್ರಿಪಾರ್ಕ್‌ಗೆ ಕರೆದುಕೊಂಡು ಹೋಗಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಅಂದು ಬಾಲಕಿ ಮನೆಗೆ ತಲುಪುವಾಗ ತಡವಾಗಿದ್ದು ಆ ಬಗ್ಗೆ ಮನೆಯವರು ಪ್ರಶ್ನಿಸಿದ್ದರು. ಆಗ ಬಾಲಕಿ ನಡೆದಿರುವ ವಿಚಾರಗಳನ್ನು ತಿಳಿಸಿದ್ದಾಳೆ.

ಎಂಜಿನಿಯರ್‌ ಅಲ್ಲ, ಸಪ್ಲೈಯರ್
ಮನೆಯವರು ಆರೋಪಿಯ ಬಗ್ಗೆ ವಿಚಾರಿಸಿದಾಗ ಆತ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿರಲಿಲ್ಲ, ಬದಲಾಗಿ ಆತ ಕ್ಯಾಟರಿಂಗ್‌ವೊಂದರಲ್ಲಿ ಸಪ್ಲೈಯರ್ ಆಗಿದ್ದ ಎಂಬುದು ಗೊತ್ತಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್‌ಪೆಕ್ಟರ್‌ಗಳಾದ ಅಶೋಕ್‌ ಪಿ. ಮತ್ತು ಕೆ.ಆರ್‌.ಗೋಪಿಕೃಷ್ಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

Advertisement

ಆರೋಪಿಗೆ ಶಿಕ್ಷೆ
ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ಪೋಕ್ಸೋ ಕಾಯಿದೆಯ ಕಲಂ 8ರಂತೆ 3 ವರ್ಷ ಸಾದಾ ಸಜೆ, 5,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 3 ತಿಂಗಳು ಸಾದಾ ಸಜೆ, ಪೋಕ್ಸೋ ಕಾಯಿದೆಯ ಕಲಂ 12ರಂತೆ ಒಂದು ವರ್ಷ ಸಾದಾ ಸಜೆ, 2,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 1 ತಿಂಗಳ ಸಾದಾ ಸಜೆ, ಭಾರತೀಯ ದಂಡ ಸಂಹಿತೆಯ ಕಲಂ 420ರಂತೆ 3 ವರ್ಷ ಸಾದಾ ಸಜೆ, 5,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 1 ತಿಂಗಳು ಸಾದಾ ಸಜೆ ವಿಧಿಸಿ, ಸಂತ್ರಸ್ತ ಬಾಲಕಿಗೆ 50,000 ರೂ. ಪರಿಹಾರ ನೀಡುವಂತೆ ಸರಕಾರಕ್ಕೆ ಆದೇಶಿಸಿ ಸೋಮವಾರ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ಅವರು ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next