ನವದೆಹಲಿ: ಕೋವಿಡ್ 19 ಮಹಾಮಾರಿ ನಡುವೆಯೇ ಫ್ಯೂಚರ್ ವಹಿವಾಟಿನಲ್ಲಿ ಹಳದಿ ಲೋಹ ಮತ್ತು ಬೆಳ್ಳಿ ದರ ಮತ್ತಷ್ಟು ಏರಿಕೆಯಾಗಿದ್ದು, ಮಲ್ಟಿ ಕಮೋಡಿಟಿ ಎಕ್ಸ್ ಚೇಂಜ್ (ಎಂಸಿಎಕ್ಸ್) ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 50,707ಕ್ಕೆ ತಲುಪಿದ್ದು, ಒಂದು ಕೆಜಿ ಬೆಳ್ಳಿ ದರ 62,400 ರೂಪಾಯಿಗೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಮಲ್ಟಿ ಕಮೋಡಿಟಿ ಎಕ್ಸ್ ಚೇಂಜ್ ನ ಪ್ರಕಾರ, ಆಗಸ್ಟ್ ತಿಂಗಳ ಚಿನ್ನದ ವಹಿವಾಟಿನ ಒಪ್ಪಂದದಂತೆ ಹತ್ತು ಗ್ರಾಂಗೆ ಶೇ.0.97ರಷ್ಟು ಏರಿಕೆಯಾಗಿದ್ದು ಬೆಲೆ 50,565ಕ್ಕೆ ನಿಗದಿಯಾಗಿದೆ. ಅದೇ ರೀತಿ ಸೆಪ್ಟೆಂಬರ್ ತಿಂಗಳ ಪ್ಯೂಚರ್ ಬೆಳ್ಳಿ ಕೆಜಿಗೆ ಶೇ.1.14ರಷ್ಟು ಏರಿಕೆಯಾಗುವ ಮೂಲಕ 61,809 ರೂಪಾಯಿಗೆ ತಲುಪಲಿದೆ ಎಂದು ವಿವರಿಸಿದೆ.
ಅಮೆರಿಕ, ಚೀನಾ ನಡುವಿನ ಉದ್ವಿಗ್ನ ಸ್ಥಿತಿಯಿಂದಾಗಿ ಕಳೆದ ಒಂಬತ್ತು ವರ್ಷಗಳಲ್ಲಿಯೇ ಇದೇ ಮೊದಲ ಬಾರಿಗೆ ಚಿನ್ನ ಮತ್ತು ಬೆಳ್ಳಿ ದರ ದುಪ್ಪಟ್ಟು ಏರಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಬುಧವಾರ ದೆಹಲಿಯಲ್ಲಿ ಹತ್ತು ಗ್ರಾಂನ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 50,920ಕ್ಕೆ ಏರಿಕೆಯಾಗಿತ್ತು. ಉದ್ಯಾನನಗರಿ ಬೆಂಗಳೂರಿನಲ್ಲಿ 50,720 ರೂಪಾಯಿಗೆ, ಚೆನ್ನೈನಲ್ಲಿ 51,380 ರೂಪಾಯಿಗೆ ಏರಿತ್ತು. ಒಂದು ಕೆಜಿ ಬೆಳ್ಳಿ ದರ 60,400 ರೂಪಾಯಿಗೆ ಏರಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಔನ್ಸ್ (28.3 ಗ್ರಾಂ) ಸ್ಟಾಟ್ ಚಿನ್ನದ ಬೆಲೆ ಶೇ 0.1ರಷ್ಟು ಏರಿಕೆಯಾಗಿ 1,87,421 ಡಾಲರ್ ಗೆ ತಲುಪಿದೆ.