Advertisement

KGF ಗಣಿ ತ್ಯಾಜ್ಯದಿಂದ ಚಿನ್ನ

01:18 AM Jun 22, 2024 | Team Udayavani |

ಕೆಜಿಎಫ್ ಗಣಿ ತ್ಯಾಜ್ಯದಿಂದ ಚಿನ್ನವನ್ನು ಸಂಶೋಧಿಸುವ ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯ ಸರಕಾರ‌ವು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಆ ಮೂಲಕ 24 ವರ್ಷಗಳ ಹಿಂದೆ ಮುಚ್ಚಿದ್ದ ಚಿನ್ನದ ಗಣಿ ಪುನರಾರಂಭವಾಗಲಿದೆ. ಕೆಜಿಎಫ್ ಚಿನ್ನದ ಗಣಿ ಇತಿಹಾಸ, ಬೆಳವಣಿಗೆ, ಈಗಿನ ಸ್ಥಿತಿ ಕುರಿತ ಮತ್ತಿತರ ಮಾಹಿತಿ ಇಲ್ಲಿದೆ.

Advertisement

ಕರುನಾಡು “ಬಂಗಾರದ ಬೀಡು’ ಎಂಬ ಹಿರಿಮೆಗೆ ಕಾರಣವಾದ ಕೋಲಾರ್‌ ಗೋಲ್ಡ್‌ ಫೀಲ್ಡ್‌ (ಕೆಜಿಎಫ್) ನಲ್ಲಿ ಮತ್ತೆ “ಚಿನ್ನ’ ಹುಡುಕುವ ಕೆಲಸ ಶುರುವಾಗಲಿದೆ.

ಕೆಜಿಎಫ್ ಗಣಿ ತ್ಯಾಜ್ಯದಿಂದ ಗಣಿಗಾರಿಕೆಯನ್ನು ನಡೆಸಲು ಅನುಮತಿ ನೀಡುವಂತೆ ಕೇಂದ್ರ ಸರಕಾರ ಪ್ರಸ್ತಾವನೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರವು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಹಾಗಾಗಿ, ಕೆಜಿಎಫ್‌ ಗಣಿಗಾರಿಕೆಯಿಂದ ಹೊರ ತೆಗೆದು 13 ಕಡೆ ಬೆಟ್ಟದಂತೆ ರಾಶಿ ಹಾಕಿರುವ 3226.2 (32,262 ಮಿಲಿಯನ್‌) ಕೋಟಿ ಮೆಟ್ರಿಕ್‌ ಟನ್‌ ತ್ಯಾಜ್ಯ ಧೂಳಿನಿಂದ ಚಿನ್ನ ಸಂಶೋಧಿಸಲು ಕೇಂದ್ರ ಸರಕಾರಕ್ಕೆ ಅನುಮತಿ ದೊರೆತಿದೆ. ಇದರಿಂದ ಕೆಜಿಎಫ್‌ ಭಾಗದ ಗಣಿ ಧೂಳು ಇರುವ 2479 (1003.4 ಹೆಕ್ಟೇರ್‌) ಎಕ್ರೆ ಪ್ರದೇಶದಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸಲು ರಾಜ್ಯ ಸರಕಾರ ಒಪ್ಪಿಗೆ ನೀಡಿದಂತಾಗಿದೆ. ಈ ಅನುಮತಿಯ ಜೊತೆಗೆ ರಾಜ್ಯ ಸರಕಾರಕ್ಕೆ ಬರಬೇಕಾಗಿದ್ದ 75.24 ಕೋಟಿ ರೂ. ಪಾವತಿಸುವಂತೆ ಬಿಜಿಎಂಎಲ್‌ ಆಡಳಿತ ಮಂಡಳಿಗೆ ಸೂಚಿಸಲು ಕೋರಿದೆ.

ಕೆಜಿಎಫ್ ಚಿನ್ನದ ಗಣಿ ಇತಿಹಾಸ
ಕೆಜಿಎಫ್‌ ನೆಲದಲ್ಲಿ 1880ರಿಂದಲೂ ಚಿನ್ನದ ಗಣಿಗಾರಿಕೆ ನಡೆಯುತ್ತಿತ್ತು ಎನ್ನುವುದನ್ನು 1804 ಏಷ್ಯಾಟಿಕ್‌ ಜರ್ನಲ್‌ ಬ್ರಿಟಿಷ್‌ ದಂಡ ನಾಯಕ ಜಾನ್‌ ವಾರೆನ್‌ ಲೇಖನ ಪ್ರಕಟಿಸಿದ್ದರು. ಹಳ್ಳಗಳನ್ನು ತೆಗೆದು ಅದಿರನ್ನು ಸಂಸ್ಕರಿಸಿ ಚಿನ್ನ ಶೋಧಿಸುವ ಕಾರ್ಯ ಸ್ಥಳೀಯವಾಗಿ ನಡೆಯುತ್ತಿತ್ತು. 1880ರಲ್ಲಿ ಚಿನ್ನದ ಗಣಿ ಕಾರ್ಯದಲ್ಲಿ ತಜ್ಞರಾಗಿದ್ದ ಜಾನ್‌ ಟೇಲರ್‌ ತಮ್ಮದೇ ಹೆಸರಿನಲ್ಲಿ ಜಾನ್‌ ಟೇಲರ್‌ ಆ್ಯಂಡ್‌ ಸನ್ಸ್‌ ಹೆಸರಿನ ಕಂಪೆನಿ ಆರಂಭಿಸಿ, ಚಿನ್ನವನ್ನು ಸಂಶೋಧಿಸಲು ಆರಂಭಿಸಿದ್ದರು. 1886ರಲ್ಲಿ ಅಂದಿನ ಮೈಸೂರು ಸಂಸ್ಥಾನಕ್ಕೆ ಇದೇ ಕಂಪೆನಿ 33,368 ರೂ. ರಾಯಧನವನ್ನು ನೀಡಿತ್ತು.

ಚಿನ್ನದ ಗಣಿ ರಾಷ್ಟ್ರೀಕರಣ
ಗಣಿಗಳ ರಾಷ್ಟ್ರೀಕರಣದ ಭಾಗವಾಗಿ ಜಾನ್‌ ಟೇಲರ್‌ ಆ್ಯಂಡ್‌ ಸನ್ಸ್‌ ಸಂಸ್ಥೆಯು ಒಪ್ಪಂದ ಮಾಡಿಕೊಂಡು, 1956ರ ನವೆಂಬರ್‌ 29ರಂದು 1.64 ಕೋಟಿ ರೂಪಾಯಿಗಳ ಕಂಪೆನಿಯ ಹೊಣೆಗಾರಿಕೆಯನ್ನು ಮೈಸೂರು ಸರಕಾರಕ್ಕೆ ಒಪ್ಪಿಸಿತು. ಆಗಿನ ಸಿಎಂ ಎಸ್‌.ನಿಜಲಿಂಗಪ್ಪ ಸರಕಾರವು ಚಿನ್ನದ ಗಣಿ ನಿರ್ವಹಣೆ ಜವಾಬ್ದಾರಿ ಪಡೆದುಕೊಂಡಿತು. ಚಿನ್ನದ ಗಣಿಯಲ್ಲಿ ಆಗ 13 ಸಾವಿರ ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು!

Advertisement

ಚಿನ್ನದ ಗಣಿಗಳ ಉಚ್ಛ್ರಾಯ ಸ್ಥಿತಿ
1881ರಿಂದ 1900ರವರೆಗೆ ಚಿನ್ನ ಉತ್ಪಾದನೆಯ ಮಹತ್ವದ ಅವಧಿಯಾಗಿದೆ. ಆಗ ಪ್ರತೀ ಟನ್‌ ಮಣ್ಣಿನಲ್ಲಿ 47.5 ಗ್ರಾಂ ಚಿನ್ನ ಉತ್ಪಾದನೆಯಾಗುತ್ತಿತ್ತು. ಈ ಅವಧಿಯಲ್ಲಿ ಗಣಿಯಲ್ಲಿ 22,500 ಮಂದಿ ಕೆಲಸ ಮಾಡುತ್ತಿದ್ದರು. ಚಿನ್ನದ ಗಣಿಗಳು ಆಳಕ್ಕೆ ಇಳಿಯುತ್ತಿದ್ದಷ್ಟು ಗಣಿಗಾರಿಕೆ ಕಷ್ಟವಾಗಿತ್ತು. ಆಗ 1902ರಲ್ಲಿ ಶಿವನಸಮುದ್ರದಲ್ಲಿ ಜಲವಿದ್ಯುತ್‌ ಘಟಕವನ್ನು ಸ್ಥಾಪಿಸಿ, ಗಣಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿಸಿದ ಹತ್ತೇ ವರ್ಷದಲ್ಲಿ ಟನ್‌ಗೆ 28.05 ಗ್ರಾಂನಂತೆ 1.70 ಲಕ್ಷ ಕೆ.ಜಿ. ಚಿನ್ನ ಉತ್ಪಾದಿಸಿ ದಾಖಲೆ ನಿರ್ಮಿಸಲಾಗಿತ್ತು.

1972ರಲ್ಲಿ ಸಾರ್ವಜನಿಕ ಉದ್ದಿಮೆ
ಚಿನ್ನದ ಗಣಿಯನ್ನು 1972ರಲ್ಲಿ ಸಾರ್ವಜನಿಕ ಉದ್ದಿಮೆ ಎಂದು ಘೋಷಿಸಿ, ಭಾರತ ಸರಕಾರ ತನ್ನ ವಶಕ್ಕೆ ಪಡೆದುಕೊಂಡಿತು. “ಭಾರತ್‌ ಗೋಲ್ಡ್‌ ಮೈನ್ಸ್‌ ಲಿ.’ ಎಂದು ನಾಮಕರಣ ಮಾಡಲಾ ಯಿತು. ಆಗ ಪ್ರತೀ ಟನ್‌ಗೆ 5.35 ಗ್ರಾಂ ಚಿನ್ನ ಸಂಶೋಧಿಸಲಾಗುತ್ತಿತ್ತು. ನಷ್ಟವನ್ನು ಸರಿದೂಗಿಸಲು ನೂರಾರು ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಲಾಗುತ್ತಿತ್ತು.

ಚಿನ್ನ ಕೊರತೆ: 2001ರಲ್ಲಿ ಮುಚ್ಚಿದ ಗಣಿ!
ಚಿನ್ನದ ಅಂಶ ಪ್ರತೀ ಟನ್‌ಗೆ 3.18 ಗ್ರಾಂಗಳಿಗೆ ಕುಸಿದಿತ್ತು. ವೆಚ್ಚವೇ ಹೆಚ್ಚಾದ್ದರಿಂದ ಬಿಜಿಎಂಎಲ್‌ ರೋಗಗ್ರಸ್ಥ ಕೈಗಾರಿಕೆ ಎಂದು ಗುರುತಿಸಲಾಯಿತು. 2001 ಎಪ್ರಿಲ್‌ 1ರಿಂದ ಚಿನ್ನದ ಗಣಿಗಳನ್ನು ಮುಚ್ಚಲಾಯಿತು. ಇದಕ್ಕೆ ಪ್ರಮುಖ ಕಾರಣ 10 ಗ್ರಾಂ ಚಿನ್ನ ಉತ್ಪಾದಿಸಲು 20 ಸಾವಿರ ರೂ. ವೆಚ್ಚವಾಗುತ್ತಿತ್ತು. ಆಗ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನ ಕೇವಲ 6 ಸಾವಿರ ರೂ. ಇತ್ತು!

ಆದಾಯ ಸೃಷ್ಟಿ ಅವಕಾಶ ಕೈಚೆಲ್ಲಿದ ರಾಜ್ಯ ಸರಕಾರ‌
ಕೆಜಿಎಫ್‌ ಗಣಿ ತ್ಯಾಜ್ಯದಿಂದ ಚಿನ್ನ ಸಂಶೋಧಿಸುವ ಕೈಗಾರಿಕೆಗಳನ್ನು ಸ್ಥಾಪಿಸಲು ಕನಿಷ್ಠ 200 ರಿಂದ 500 ಮಂದಿ ಉದ್ಯೋಗಸ್ಥರಷ್ಟೇ ಆವಶ್ಯಕತೆ ಇದೆ. ಇಂಥದ್ದೊಂದು ಕೈಗಾರಿಕೆ ಆರಂಭವಾದ 5 ವರ್ಷಗಳಲ್ಲಿ ಕೆಜಿಎಫ್‌ನ 13 ಜಾಗದಲ್ಲಿರುವ ಗಣಿ ತ್ಯಾಜ್ಯವನ್ನು ಸಂಸ್ಕರಿಸಬಹುದು. 1 ಟನ್‌ ಗಣಿ ತ್ಯಾಜ್ಯದಿಂದ 1 ಗ್ರಾಂ ನಂತೆ ಚಿನ್ನ ಉತ್ಪಾದಿಸಿದರೂ 5 ವರ್ಷಗಳಲ್ಲಿ 25 ಸಾವಿರ ಕೆ.ಜಿ.ಯಿಂದ 32 ಸಾವಿರ ಕೆ.ಜಿ.ಯವರೆವಿಗೂ ಚಿನ್ನ ಉತ್ಪಾದಿಸಬಹುದು. ಇದರಿಂದ ಕನಿಷ್ಠ 25 ಸಾವಿರ ಕೋಟಿ ರೂಪಾಯಿಗಳ ಆದಾಯ ಗಳಿಸಬಹುದು. ಆದರೆ, ಈ ಅವಕಾಶವನ್ನು ರಾಜ್ಯ ಸರಕಾರ‌ ಕೈಚೆಲ್ಲಿದೆ ಎನ್ನುತ್ತಿದ್ದಾರೆ ಕಾರ್ಮಿಕರು.

ರಾಜ್ಯ ಸರಕಾರ‌ವೇ ಜವಾಬ್ದಾರಿ ಹೊರಲಿ
ಚಿನ್ನದ ಗಣಿಗಳನ್ನು ಪೂರ್ಣ ಪ್ರಮಾಣದಲ್ಲಿ ಪುನರಾರಂಭಿಸುವ ಜವಾಬ್ದಾರಿಯನ್ನು ರಾಜ್ಯ ಸರಕಾರ‌ವೇ ಹೊತ್ತುಕೊಳ್ಳಬೇಕು. ಇಂದರಿಂದ ರಾಜ್ಯಕ್ಕೆ ಆದಾಯವೂ ದೊರೆಯಲಿದೆ. ಕಾರ್ಮಿಕ ವರ್ಗಕ್ಕೆ ಶಾಶ್ವತ ಉದ್ಯೋಗವೂ ಲಭ್ಯವಾಗುತ್ತದೆ.
ಜಯಕುಮಾರ್‌, ಅಧ್ಯಕ್ಷರು, ಬಿಜಿಎಂಎಲ್‌ ಕಾರ್ಮಿಕರು, ಸೂಪರ್‌ವೈಸರ್‌ಗಳು, ಅಧಿಕಾರಿಗಳ ಕೈಗಾರಿಕ ಸಹಕಾರ ಸಂಘ ನಿ. ಕೆಜಿಎಫ್‌.

ನೌಕರರ ಬಾಕಿ ಹಣ ಪಾವತಿಸಿ
ಟೈಲಿಂಗ್‌ ಡಂಪ್ಸ್‌ಗಳಲ್ಲಿ ಗಣಿ ಚಟು ವಟಿಕೆಗಳನ್ನು ಮಾಡುವುದಕ್ಕೆ ಯಾವುದೇ ಆಕ್ಷೇಪಣೆ ಇಲ್ಲ. ಆದರೆ ಈ ಚಟುವಟಿಕೆ ಗಳನ್ನು ಪ್ರಾರಂಭಿಸುವ ಮುನ್ನ ಈ ಹಿಂದೆ ಗಣಿಯಲ್ಲಿ ಕೆಲಸ ಮಾಡಿರುವ ನೌಕರರ ಬಾಕಿ ಹಣವನ್ನು ಪಾವತಿಸಬೇಕು.
ರೂಪಕಲಾ ಶಶಿಧರ್‌, ಶಾಸಕಿ, ಕೆಜಿಎಫ್‌ ಕ್ಷೇತ್ರ

ಚಿನ್ನ ಮರುಶೋಧನೆ ಪ್ರಕ್ರಿಯೆ ಹೇಗೆ?
ತ್ಯಾಜ್ಯದಿಂದ ಚಿನ್ನ ಸಂಸ್ಕರಿಸುವ ತಂತ್ರಜ್ಞಾನ ತಿಳಿದಿರುವ ನೂರಾರು ಕಾರ್ಮಿಕರು ಕೆಜಿಎಫ್‌ನಲ್ಲಿದ್ದಾರೆ. ಗಣಿ ತ್ಯಾಜ್ಯವನ್ನು ನೀರಿನಲ್ಲಿ ಬೆರೆಸಿ ಕೊಳವೆಯೊಂದರಲ್ಲಿ ಹಾಯಿಸಿ ವಿವಿಧ ಹಂತಗಳಲ್ಲಿ ಶೋಧಿಸಿ ಚಿನ್ನವನ್ನು ಸಂಸ್ಕರಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಕಾರ್ಬನ್‌ ಲೀಚಿಂಗ್‌ ಪ್ರೋಸೆಸ್‌ (ಸಿಎಲ್‌ಪಿ) ಎಂದು ಕರೆಯಲಾಗುತ್ತದೆ.

ಮತ್ತೆ ರಾಜ್ಯದ ಪಾಲಾದ ಕೆಜಿಎಫ್
2015ರಲ್ಲಿ ಎಂಎಂಡಿಆರ್‌ ಕಾಯ್ದೆಯಿಂದ ಚಿನ್ನದ ಗಣಿಗಳ ವಾರಸತ್ವವು ರಾಜ್ಯ ಸರಕಾರದ ಪಾಲಾಯಿತು. ಗಣಿ ತ್ಯಾಜ್ಯದಲ್ಲಿ ಚಿನ್ನ ಹೊರ ತೆಗೆಯಲು ಅನುಮತಿ ನೀಡುವಂತೆ ಕೇಂದ್ರ ಮಾಡಿದ್ದ ಮನವಿಯನ್ನು ಅಂದಿನ ಸರಕಾರ‌ ತಿರಸ್ಕರಿಸಿತ್ತು.

ಕೆ.ಎಸ್‌.ಗಣೇಶ್‌, ಕೋಲಾರ

Advertisement

Udayavani is now on Telegram. Click here to join our channel and stay updated with the latest news.

Next