Advertisement

ಮನು, ಚಿಂಕಿ, ರಾಹಿ ತಂಡಕ್ಕೆ ಚಿನ್ನದ ತುರಾಯಿ

10:24 PM Mar 25, 2021 | Team Udayavani |

ಹೊಸದಿಲ್ಲಿ: ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತ ಗುರುವಾರ ಮತ್ತೂಂದು ಚಿನ್ನದ ಸಾಧನೆಯೊಂದಿಗೆ ಸಂಭ್ರಮಿಸಿತು. ಬುಧವಾರದ ಸಾಧಕಿಯರಾದ ಚಿಂಕಿ ಯಾದವ್‌, ಮನು ಭಾಕರ್‌, ರಾಹಿ ಸರ್ನೊಬತ್‌ ‌ ಸೇರಿಕೊಂಡು 25 ಮೀ. ಪಿಸ್ತೂಲ್‌ ತಂಡ ಸ್ಪರ್ಧೆಯಲ್ಲಿ ಬಂಗಾರಕ್ಕೆ ಗುರಿ ಇರಿಸಿದರು. ಇದಕ್ಕೂ ಮೊದಲು ವನಿತೆಯರ 50 ಮೀ. ರೈಫ‌ಲ್‌ 3 ಪೊಸಿಶನ್‌ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ರಜತ ಪದಕ ಒಲಿದಿತ್ತು.

Advertisement

25 ಮೀ. ಪಿಸ್ತೂಲ್‌ ಸ್ಪರ್ಧೆಯ ಫೈನಲ್‌ ಹಣಾಹಣಿಯಲ್ಲಿ ಭಾರತ 17-7 ಅಂತರದಿಂದ ಪೋಲೆಂಡ್‌ ವಿರುದ್ಧ ಮೇಲುಗೈ ಸಾಧಿಸಿತು. ಚಿಂಕಿ, ರಾಹಿ ಮತ್ತು ಮನು ಅವರು ಒಂದು ದಿನದ ಹಿಂದಷ್ಟೇ 25 ಮೀ. ವೈಯಕ್ತಿಕ ಪಿಸ್ತೂಲ್‌ ಸ್ಪರ್ಧೆಯ 3 ಪದಕಗಳನ್ನು ಭಾರತಕ್ಕೆ ತಂದುಕೊಟ್ಟಿದ್ದರು.

ಕೈತಪ್ಪಿದ ಚಿನ್ನ :  

50 ಮೀ. ರೈಫ‌ಲ್‌ 3 ಪೊಸಿಶನ್‌ನಲ್ಲಿ ಅಂಜುಮ್‌ ಮೌದ್ಗಿಲ್‌, ಶ್ರೇಯಾ ಸಕ್ಸೇನಾ ಮತ್ತು ಗಾಯತ್ರಿ ನಿತ್ಯಾನಂದಮ್‌ ಅವರನ್ನೊಳಗೊಂಡ ವನಿತಾ ತಂಡ ಫೈನಲ್‌ನಲ್ಲಿ ಪೋಲೆಂಡ್‌ಗೆ 43-47 ಅಂತರದಿಂದ ಶರಣಾಗಿ ಚಿನ್ನವನ್ನು ತಪ್ಪಿ ಸಿಕೊಂಡಿತು. ಇಂಡೋನೇಶ್ಯ ಕಂಚಿನ ಪದಕ ಜಯಿಸಿತು.

ಇದರೊಂದಿಗೆ ಭಾರತ ತನ್ನ ಒಟ್ಟು ಪದಕಗಳ ಸಂಖ್ಯೆಯನ್ನು 21ಕ್ಕೆ ಏರಿಸಿಕೊಂಡು ಅಗ್ರಸ್ಥಾನವನ್ನು ಗಟ್ಟಿಗೊಳಿಸಿತು. ಇದರಲ್ಲಿ 10 ಚಿನ್ನ, 6 ಬೆಳ್ಳಿ ಮತ್ತು 5 ಕಂಚು ಸೇರಿವೆ.

Advertisement

ಹಂಗೇರಿ ತಂಡದಲ್ಲಿ ಕಿರಿಕಿರಿ :

ಹಂಗೇರಿ ಶೂಟಿಂಗ್‌ ತಂಡದಲ್ಲಿ ಉದ್ಭವಿಸಿದ ಒಳ ಜಗಳದಿಂದ ವಿಶ್ವಕಪ್‌ ಫೈನಲ್‌ ಸ್ಪರ್ಧೆ ಮುಂದೂಡಲ್ಪಟ್ಟ ವಿದ್ಯಮಾನ ಗುರುವಾರ ಸಂಭವಿಸಿದೆ. ಭಾರತ-ಹಂಗೇರಿ ತಂಡಗಳು ಪುರುಷರ 50 ಮೀ. ರೈಫ‌ಲ್‌ 3 ಪೊಸಿಶನ್‌ ಫೈನಲ್‌ನಲ್ಲಿ ಸೆಣಸಬೇಕಿತ್ತು. ಆದರೆ ಹಂಗೇರಿ ತಂಡದ ಶೂಟರ್‌ ಪೀಟರ್‌ ಸಿಡಿ ವಿಚಾರದಲ್ಲಿ ಭಿನ್ನಾಭಿಪ್ರಾಯ ತಲೆದೋರಿದ ಕಾರಣ ಸ್ಪರ್ಧೆಯನ್ನು ಮುಂದೂಡಲಾಯಿತು.

ತಾವು ಪೀಟರ್‌ ಸಿಡಿ ಜತೆಗೂಡಿ ಸ್ಪರ್ಧಿಸುವುದಿಲ್ಲ ಎಂದು ಹಂಗೇರಿ ತಂಡದ ಉಳಿದಿಬ್ಬರು ಸದಸ್ಯರಾದ ಇಸ್ತವಾನ್‌ ಪೆನಿ ಮತ್ತು ಝವಾನ್‌ ಪೆಕ್ಲರ್‌ ಹಠಹಿಡಿದ ಪರಿಣಾಮ ಸ್ಪರ್ಧೆಯನ್ನು ತಡೆಯಿಡಿಯಲಾಯಿತು. ಸಮಸ್ಯೆ ಬಗೆಹರಿಯದ ಕಾರಣ ಹಂಗೇರಿಯನ್ನು ಹೊರಕ್ಕಿರಿಸಿ ಒಂದು ದಿನ ವಿಳಂಬವಾಗಿ ಫೈನಲ್‌ ನಡೆಸಲು ಸಂಘಟಕರು ನಿರ್ಧರಿಸಿದರು. ಫೈನಲ್‌ ಶುಕ್ರವಾರ ನಡೆಯಲಿದ್ದು, ಭಾರತ ಮತ್ತು ತೃತೀಯ ಸ್ಥಾನಿ ಅಮೆರಿಕ ಸೆಣಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next