Advertisement

ಮಿಶ್ರಬೆಳೆಯ ಸಾಧಕ ನಿಡ್ಡೋಡಿಯ ಈ ಕೃಷಿಕ

10:07 AM Dec 25, 2019 | mahesh |

ಹೆಸರು: ರಾಮ ಸುವರ್ಣ ನಿಡ್ಡೋಡಿ
ಏನೇನು ಕೃಷಿ: ಭತ್ತ, ಅಡಿಕೆ, ತೆಂಗು ವಯಸ್ಸು: 58
ಕೃಷಿ ಪ್ರದೇಶ: 10ಎಕ್ರೆ

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಮೂಡುಬಿದಿರೆ: ನಿಡ್ಡೋಡಿ ಕಾನ ಮನೆಯ ಕೃಷಿಕರಾದ ರಾಮ ಸುವರ್ಣ ಅವರು ಭತ್ತ, ಅಡಿಕೆ, ತೆಂಗು, ಶುಂಠಿಗೂ ಸೈ; ತರಾವರಿ ತರಕಾರಿ, ಕಬ್ಬು, ಬಾಳೆ, ಧಾನ್ಯದ ಬೆಳೆಗಳಿಗೂ ಸೈ. ಕಾಫಿಯನ್ನೂ ಬೆಳೆದಿದ್ದಾರೆ. ಇವರು ಮಿಶ್ರಬೆಳೆಯ ಸರದಾರ ಎಂದೇ ಹೇಳಬಹುದು.

ಭೂ ಮಸೂದೆ ಕಾಯ್ದೆಯಿಂದ 1972ರಲ್ಲಿ ತಂದೆಯವರಿಗೆ ಲಭಿಸಿದ ಗೇಣಿಯ ಭೂಮಿಯನ್ನು ಶ್ರಮ ಜೀವನದಿಂದ ಪಾಲಿಸಿ, ಅಕ್ಷರಶಃ ಚಿನ್ನದ ಬೆಳೆ ತೆಗೆದು ಸಾರ್ಥಕ ಬದುಕನ್ನು ನಡೆಸುತ್ತಿರುವವರು ರಾಮ ಸುವರ್ಣರು. ಶಿವಪೂಜಾರಿ-ಈರಮ್ಮ ದಂಪತಿಯ ಪುತ್ರ ರಾಮ ಸುವರ್ಣ ಏಳನೇ ತರಗತಿಯವರೆಗೆ ಓದಿ ಬಳಿಕ ತಂದೆಯೊಂದಿಗೆ ನೇಗಿಲ ಯೋಗಿಯಾದರು. ಸುಮಾರು ಹತ್ತು ಎಕ್ರೆ ಕೃಷಿ ಭೂಮಿಯಲ್ಲಿ ಮೊದಲು 6 ಎಕ್ರೆಯಲ್ಲಿ ಭತ್ತ ಬೆಳೆಯತೊಡಗಿದರು. ಇಂದು ಈ ಭತ್ತದ ಕೃಷಿಯನ್ನು 4 ಎಕ್ರೆಗೆ ಸೀಮಿತಗೊಳಿಸಿದ್ದಾರೆ. ವಾರ್ಷಿಕ ಎರಡು ಬೆಳೆ ಬೆಳೆಯುತ್ತಿದ್ದು, ಭತ್ತದಲ್ಲಿ ಎಂಓ4, ಮಡಿ ಜಯ ತಳಿಗಳನ್ನು ಬೆಳೆಸುತ್ತಿರುವ ರಾಮ ಸುವರ್ಣರ ಮನೆಯಂಗಳದಲ್ಲೇ ಪುಟ್ಟ ಅಕ್ಕಿ ಮಿಲ್‌ ಕೂಡ ಇದೆ. ಮನೆಯಂಗಳದ ಬದಿಯಲ್ಲೇ ಭತ್ತ ಬೇಯಿಸಿ, ಅಂಗಳದಲ್ಲೇ ಒಣಗಿಸಿ, ಅಲ್ಲೇ ಮಿಲ್ಲಿಂಗ್‌ ಮಾಡಿಕೊಡುವ ಕಾರ್ಯವನ್ನು ಬಾಡಿಗೆ ನೆಲೆಯಲ್ಲಿ ನಡೆಸುತ್ತಿದ್ದಾರೆ. ತಮಗೆ ಕಂಬಳದಲ್ಲಿ ಲಭಿಸಿದ ಕೆಲವು ಚಿನ್ನದ ಪದಕಗಳನ್ನು ಮಚ್ಚಾರು ಬ್ರಹ್ಮ ಬೈದರ್ಕಳ ಗರಡಿಗೆ ದಾನಮಾಡಿದ್ದಾರೆ ಸುವರ್ಣರು.

ಕೃಷಿಯಲ್ಲೂ ಸಂತೃಪ್ತ ಜೀವನ
ಎರಡು ಬೋರ್‌ವೆಲ್‌ಗ‌ಳಿವೆ, 2 ತೆರೆದ ದೊಡ್ಡ ಬಾವಿಗಳಿವೆ. 5 ಅಶ್ವಶಕ್ತಿಯ ಎರಡು, 3 ಅಶ್ವಶಕ್ತಿಯ ಎರಡು ಹಾಗೂ 2 ಅಶ್ವಶಕ್ತಿಯ ಒಂದು ಪಂಪ್‌ಸೆಟ್‌ ಇವೆ. ಬೇಸಗೆಯಲ್ಲಿ ನೀರಿನ ಕೊರತೆಯನ್ನು ಬೋರ್‌ವೆಲ್‌ಗ‌ಳಿಂದ ಸರಿದೂಗಿಸಲಾಗುತ್ತಿದೆ. 2 ಕೋಣ, 4 ಹಸುಗಳಿವೆ. ಅವುಗಳಿಂದ ಉತ್ಪತ್ತಿಯಾಗುವ ಗೊಬ್ಬರ ಸಾಲದು. ಹಾಗಾಗಿ ಕನಿಷ್ಠ 15 ಲೋಡ್‌ ಹಟ್ಟಿಗೊಬ್ಬರವನ್ನು ಖರೀದಿಸುವ ಸುವರ್ಣರು ಹೆಚ್ಚಿನ ಕೃಷಿ ಸಾವಯವ. ಎಲ್ಲೋ ಒಂದಿಷ್ಟು ರಾಸಾಯನಿಕ ಗೊಬ್ಬರವನ್ನು ಬಳಸುತ್ತಾರೆ. ರಾಮ ಸುವರ್ಣರು 3,500 ಅಡಿಕೆ ಗಿಡ ಗ ಳನ್ನು ಬೆಳೆ ಸಿ ದ್ದಾರೆ. ನಿತ್ಯ 4 ಮಂದಿ ಕೂಲಿಯಾಳುಗಳಿದ್ದರೆ ಭತ್ತದ ಬೆಳೆಯ ನಾಟಿ, ಕಟಾವು ವೇಳೆ ಅಗತ್ಯಕ್ಕೆ ತಕ್ಕಂತೆ ಕೂಲಿಗಳನ್ನು ಹೊಂದಿಸಿಕೊಳ್ಳುತ್ತಿದ್ದಾರೆ. ಗಂಟೆಗಳ ಲೆಕ್ಕ ನೋಡದೆ ದುಡಿಯುವ ರಾಮ ಸುವರ್ಣರೊಂದಿಗೆ ಅವರ ಪತ್ನಿ ಅಂಬಾ, ಪುತ್ರರಾದ ನಿತಿನ್‌ ಮತ್ತು ಭಾಸ್ಕರ ಮತ್ತು ಇಬ್ಬರು ಸೊಸೆಯಂದಿರೂ ಕೈ ಜೋಡಿಸುತ್ತಿರುವುದರಿಂದ ಕೃಷಿಯಲ್ಲೂ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಭತ್ತದ ಕೃಷಿಗೆ ಉಳುಮೆಗೆ ತಮ್ಮದೇ ಟಿಲ್ಲರ್‌ ಬಳಸುತ್ತಾರೆ. ನಾಟಿ ಮತ್ತು ಕಟಾವು ಮಾಡಲು ಯಂತ್ರ ಬಳಸುವುದಿಲ್ಲ.

Advertisement

ಕಂಬಳದಲ್ಲಿ ಚಿನ್ನ
ರಾಮ ಸುವರ್ಣರ ಕೋಣಗಳು ಕಂಬಳದಲ್ಲಿ ಪಾಲ್ಗೊಳುತ್ತವೆ. ಅವರ ಕೋಣಗಳು ನೇಗಿಲು ಹಿರಿಯ ವಿಭಾಗದಲ್ಲಿ ಸ್ಪರ್ಧಿಸುತ್ತ ಮೂಡುಬಿದಿರೆ, ಮೂಲ್ಕಿ, ಕಟಪಾಡಿ, ನಂದಿಕೂರು, ಉಪ್ಪಿನಂಗಡಿ, ಐಕಳ ಮೊದಲಾದ ಕಂಬಳಗಳಲ್ಲಿ ಏಳೆಂಟು ಬಾರಿ ಚಿನ್ನದ ಪದಕಗಳನ್ನು ಗಳಿಸಿವೆ. ಹಗ್ಗದಲ್ಲೂ ಕೋಣಗಳನ್ನು ಓಡಿಸಿದ್ದಾರೆ.

ಪ್ರಶಸ್ತಿಗಳ ಸರದಾರ
ರಾಮ ಸುವರ್ಣರು 2003-04ರಲ್ಲಿ ಹೆಕ್ಟೇರ್‌ಗೆ 94.356 ಕೆಜಿ ಭತ್ತ ಬೆಳೆದು ಕೃಷಿ ಇಲಾಖೆ ಯಿಂದ ಜಿಲ್ಲಾ ಮಟ್ಟದಲ್ಲಿ ಪ್ರಥಮ ಪ್ರಶಸ್ತಿ ಗಳಿ ಸಿ ದ್ದಾರೆ. ಮುಂದೆ, 2007-08ರಲ್ಲಿ ಹೆಕ್ಟೇರ್‌ಗೆ 90.20 ಕೆಜಿ ಭತ್ತ ಬೆಳೆದು ಜಿಲ್ಲಾ ಮಟ್ಟದಲ್ಲಿ ಪ್ರಥಮ, 2011-12ರಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ, 2014-15ರಲ್ಲಿ ಹೆಕ್ಟೇರ್‌ಗೆ 95.07 ಕೆಜಿ ಭತ್ತ ಬೆಳೆದು ಜಿಲ್ಲಾ ಮಟ್ಟದಲ್ಲಿ ಪ್ರಥಮ ಪ್ರಶಸ್ತಿ ಪಡೆದಿ ರುವ ರಾಮ ಸುವರ್ಣರು ಕಳೆದ ಸಾಲಿನಲ್ಲಿ ತಾ| ಮಟ್ಟದಲ್ಲಿ ಬಹುಮಾನ ಗಳಿಸುವ ನಿರೀಕ್ಷೆ ಯಲ್ಲಿ ದ್ದಾರೆ. 2019ರಲ್ಲಿ ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯಿಂದ ವಿವೇಕ ಕಾಯಕ ರತ್ನ ಪ್ರಶಸ್ತಿ, 2014ರಲ್ಲಿ ನಿಡ್ಡೋಡಿ ಜಾರಂದಾಯ ಬಂಟ ಸೇವಾ ಸಮಿತಿಯವರಿಂದ ಸಮ್ಮಾನವನ್ನು ರಾಮ ಸುವರ್ಣರು ಸ್ವೀಕರಿಸಿದ್ದಾರೆ.
ಮೊಬೈಲ್‌ ಸಂಖ್ಯೆ: 7760232169

ದುಡಿಯಬಲ್ಲವರಿಗಷ್ಟೇ ಕೃಷಿ
ದುಡಿಯಲಾಗದವರಿಗೆ ಕೃಷಿ ಹೇಳಿಸಿದ್ದಲ್ಲ. ಜನ ಮಾಡಿ ಕೃಷಿ ಮಾಡುವುದರಿಂದ ಹೇಳಿಕೊಳ್ಳುವ ಲಾಭ ಬರಲು ಸಾಧ್ಯವಿಲ್ಲ, ನಷ್ಟವೇ ಆದೀತು. ಮನೆಮಂದಿಯೆಲ್ಲರೂ ಸೇರಿ ಕೃಷಿ ಕಾರ್ಯ ನಡೆಸಿದರೆ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಭತ್ತ ಒಂದೇ ಸಾಲದು ಎಲ್ಲ ಬಗೆಯ ಕೃಷಿಯನ್ನೂ ಮಾಡಿದರೆ ಮಾತ್ರ ಒಂದು ಹದದಲ್ಲಿ ಗೆಲುವು ಸಾಧಿಸಬಹುದು. ಇದರೊಂದಿಗೆ ಮಾರುಕಟ್ಟೆಯ ಏರಿಳಿತವನ್ನುತಿಳಿದುಕೊಳ್ಳುವ, ಅದಕ್ಕೆ ತಕ್ಕಂತೆ ನಮ್ಮ ಉತ್ಪನ್ನಗಳನ್ನು ಮಾರುವ ಜಾಣ್ಮೆಯನ್ನೂ ನಾವು ರೂಢಿಸಿಕೊಳ್ಳಬೇಕಾಗಿದೆ. ನಮ್ಮ ಯುವಕರು ಕ್ರಿಕೆಟ್‌ ಮತ್ತಿತರ ಆಟೋಟ ಆಡಲಿ; ಆದರೆ ಅದಕ್ಕೆ ವಿನಿಯೋಗಿಸುವ ಶಕ್ತಿಯನ್ನು ನಮ್ಮ ಭೂಮಿಯನ್ನು ಹಸನುಗೊಳಿಸಲು ಬಳಸಿದರೆ ನಮ್ಮ ಎಷ್ಟೋ ಕೃಷಿ ಭೂಮಿ ಹಡಿಲು ಬೀಳದಂತೆ ಮಾಡಬಹುದು. ಹೊರಗಡೆ ಹೋದ ಯುವಕರು ಸಹವಾಸ ದೋಷದಿಂದ ಆರಾಮ ಜೀವನಕ್ಕೆ ಒಲವು ತೋರುತ್ತಾರೆಯೇ ಹೊರತು ಶ್ರಮ ಜೀವನದಿಂದ ಬದುಕಲು ಮನಸ್ಸು ಮಾಡುವುದಿಲ್ಲವಲ್ಲ ಎಂಬುದೇ ಚಿಂತೆ.
– ರಾಮ ಸುವರ್ಣ, ಕೃಷಿಕ

ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next