ವಾಡಿ: ನಗರದ ಗಾಜಿಪುರ ಚಕ್ರಕಟ್ಟಾ ಬಡಾವಣೆಯ ಚಿನ್ನದ ವ್ಯಾಪಾರಿ ಮಂಜುನಾಥ ತೆಗನೂರ ಎಂಬಾತನನ್ನು ಸೈಜುಗಲ್ಲು ಎತ್ತಿ ಹಾಕಿ ಭೀಕರವಾಗಿ ಕೊಂದು ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ವಾಡಿ ಠಾಣೆ ಪೊಲೀಸರು ಬಂದಿದ್ದಾರೆ.
ಚಿತ್ತಾಪುರ ಪಟ್ಟಣದ ಖಾಸಗಿ ಗೂಡ್ಸ್ ವಾಹನ ಚಾಲಕ ಮಹ್ಮದ್ ಸಾಬ ಲಾಲ್‌ಸಾಬ (52), ಈತನ ಸಂಬಂಧಿ ರಹೆಮಾನ ಶೇಖ ರುಕ್ಮೋದ್ದಿನ್ ಶೇಖ (44) ಕೊಲೆ ಆರೋಪಿಗಳಾಗಿದ್ದಾರೆ.
ಮೃತ ಮಂಜುನಾಥ ಬಳಿ ಕೊಲೆಯ ಪ್ರಮುಖ ಆರೋಪಿ ಮಹ್ಮದ್ ಸಾಬ ಲಾಲ್‌ಸಾಬ ಎನ್ನುವಾತ ಕೆಲ ವರ್ಷಗಳ ಹಿಂದೆ 12 ಲಕ್ಷ ರೂ. ಸಾಲ ಪಡೆದಿದ್ದ. ಇನ್ನೋರ್ವ ಆರೋಪಿ ರಹೆಮಾನ್ ಶೇಖ ಕೂಡ ಒಂದು ಲಕ್ಷ ಸಾಲ ಪಡೆದಿದ್ದ. ಪಡೆದ ಹಣ ಮತ್ತು ಬಡ್ಡಿಯನ್ನು ಮರಳಿಸುವಂತೆ ಮಂಜುನಾಥ ಪದೇ ಪದೇ ಕಿರುಕುಳ ಕೊಡುತ್ತಿದ್ದನಲ್ಲದೆ, ಹೊಲ ಮಾರಿಯಾದರೂ ಹಣ ಒದಗಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.
ಹೊಲ ಮಾರಲು ಹೆಂಡತಿ ಬಿಡುತ್ತಿರಲಿಲ್ಲ. ಇತ್ತ ಸಾಲಕ್ಕಾಗಿ ಮಂಜುನಾಥನ ಕಿರುಕುಳ ನಿಲ್ಲುತ್ತಿರಲಿಲ್ಲ. ಮಾನಸಿಕವಾಗಿ ರೋಸಿ ಹೋಗಿ ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದೆವು. ತದನಂತರ ಮಂಜುನಾಥನನ್ನು ಕೊಲ್ಲಲು ನಿರ್ಧರಿಸಿದ್ದೇವು. ವಾರದ ಹಿಂದೆ ಕೊಲೆಗೆ ಪ್ರಯತ್ನಿಸಿ ವಿಫಲರಾದೇವು. ಕೊನೆಗೆ ಜ.10 ರಂದು ಸಾಲದ ಹಣ ಹಿಂತಿರುಗಿಸುವುದಾಗಿ ನಂಬಿಸಿ ಆತನನ್ನು ಚಿತ್ತಾಪುರಕ್ಕೆ ಕರೆತಂದೇವು. ಹೊಲ ಖರೀದಿಸಿದ ವ್ಯಕ್ತಿ ಯಾದಗಿರಿಯಲ್ಲಿದ್ದಾನೆ ಅಲ್ಲಿಗೆ ಹೋಗೋಣ ಎಂದು ನಂಬಿಸಿ ಸುತ್ತಾಡಿಸಿದೇವು.
ಕೊಲೆಗೆ ಸೂಕ್ತವಾದ ಸ್ಥಳ ಸಿಗದಕ್ಕೆ ಮರಳಿ ಚಿತ್ತಾಪುರಕ್ಕೆ ಕರೆದುಕೊಂಡು ಬಂದು, ಚಿತ್ತಾಪುರ ಮಾರ್ಗದ ಯರಗಲ್ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಇರಿದು ಮಂಜುನಾಥನನ್ನು ಕೊಲೆ ಮಾಡಿದೆವು. ವ್ಯಕ್ತಿಯ ಗುರುತು ಸಿಗಬಾರದು ಎಂಬ ಕಾರಣಕ್ಕೆ ಮುಖದ ಮೇಲೆ ಕಲ್ಲು ಹಾಕಿದ್ದೇವು ಎಂದು ವಿಚಾರಣೆ ವೇಳೆ ಬಂಧಿತ ಆರೋಪಿಗಳಾದ ಮಹ್ಮದ್ ಸಾಬ ಲಾಲ್‌ಸಾಬ ಹಾಗೂ ರಹೆಮಾನ್ ಶೇಖ ಹೇಳಿದ್ದಾರೆ ಎಂದು ಪಿಎಸ್‌ಐ ವಿಜಯಕುಮಾರ ಭಾವಗಿ ತಿಳಿಸಿದ್ದಾರೆ.
ಕೊಲೆಗೈದು ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆಹಚ್ಚಲು ಜಿಲ್ಲಾ ಪೊಲೀಸ್ ಇಲಾಖೆ, ಎಸ್‌ಪಿ ಇಶಾ ಪಂತ್ ಅವರ ಸೂಚನೆಯಂತೆ ಮತ್ತು ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ ಹಾಗೂ ಶಹಾಬಾದ ಡಿವೈಎಸ್‌ಪಿ ಉಮೇಶ ಚಿಕ್ಕಮಠ ಅವರ ಮಾರ್ಗದರ್ಶನದಲ್ಲಿ ಚಿತ್ತಾಪುರ ಸಿಪಿಐ ಕೃಷ್ಣಪ್ಪ ಕಲ್ಲೇದೇವರು ಹಾಗೂ ವಾಡಿ ಠಾಣೆ ಪಿಎಸ್‌ಐ ವಿಜಯಕುಮಾರ ಭಾವಗಿ ಅವರ ನೇತೃತ್ವದ ಎರಡು ವಿಶೇಷ ತನಿಖಾ ತಂಡಗಳನ್ನು ರಚಿಸಿತ್ತು. ಪ್ರೋಭೇಷನರಿ ಪಿಎಸ್‌ಐ ದಿನೇಶ, ಸಿಬ್ಬಂದಿಗಳಾದ ಲಕ್ಷ್ಮಣ, ದತ್ತಾತ್ರೇಯ, ರವಿ, ಮೇಲಗಿರಿ, ಶ್ರೀಮಂತ, ಮಧುಕರ ತಂಡದಲ್ಲಿದ್ದರು.