Advertisement

ಊದಲು ಬೆಳೆದು ಉದ್ದಾರವಾದರು !

05:48 PM Mar 26, 2018 | |

ಕಳೆದ ಹತ್ತು ವರ್ಷಗಳ ಹಿಂದೆ ಯಾರಿಗೂ ಬೇಡವಾಗಿದ್ದ ಒಣಭೂಮಿಯದು. ಮಳೆಯನ್ನು ನಂಬಿ ಬೆಳೆದ ಬೆಳೆಗಳು ಕೈಕೊಡುತ್ತಿದ್ದದ್ದೇ ಹೆಚ್ಚು. ಕಬ್ಬು, ತರಕಾರಿ, ಪುಷ್ಪಕೃಷಿ ಹೀಗೆ ಬೇರೆ ಬೇರೆ ಬೆಳೆಗಳ ಪ್ರಯೋಗವನ್ನು ಮಾಡಿ ನೋಡಿದರೂ ಈ ಭೂಮಿಗೆ ಯಾವುದೂ ಸರಿಹೊಂದಲಿಲ್ಲ. ಅಷ್ಟರಲ್ಲಿ ರಾಜನಾರಾಯಣ ಬೆಳಗಾಂವಕರ್‌ ಅವರಿಗೆ ಗೆಳೆಯರೊಬ್ಬರು ಊದಲು ಬೆಳೆಯುವ ಬಗ್ಗೆ ಸಲಹೆ ನೀಡಿದರು. ಒಲ್ಲದ ಮನಸ್ಸಿನಿಂದ ಅದೂ ಗೆಳೆಯನ ಒತ್ತಾಯಕ್ಕೆ, ಬೆಳಗಾಂನ ಬೆಳೆಗಾರರೋರ್ವರಿಂದ ಬಿತ್ತನೆಗೆ ಬೇಕಾದ ಊದಲನ್ನು ಕೆ.ಜಿ.ಗೆ ರೂ. 100ರಂತೆ ಖರೀದಿಸಿ ಬೆಳಗಾಂವಕರ್‌ ತಂದರು. ಜೂನ್‌ ಆರಂಭದಲ್ಲಿ ಎರಡು ಎಕರೆ ಭೂಮಿಯನ್ನು ಉಳುಮೆ ಮಾಡಿ ಅದಕ್ಕೆ ಕೊಟ್ಟಿಗೆಯಲ್ಲಿದ್ದ ಗೊಬ್ಬರವನ್ನೆಲ್ಲಾ ಸುರಿದು ಒಂದು ವಾರಗಳ ಕಾಲ ಹಾಗೇ ಬಿಟ್ಟರು. ನಂತರ ಆ ಜಮೀನಿನಲ್ಲಿ ಎರಡು ಕೆ.ಜಿ. ಊದಲನ್ನು ಬಿತ್ತಿದರು. ಒಂದು ವಾರ ಕಳೆಯುತ್ತಿದ್ದಂತೆಯೇ ಗದ್ದೆ ತುಂಬಾ ಊದಲು ಚಿಗುರಿ ನಿಂತಿತು. ಇಪ್ಪತ್ತು ದಿನಗಳಾಗುತ್ತಿದ್ದಂತೆ ಎಡೆಯೊಡೆಸಿದರು.

Advertisement

 ಆ ನಂತರದ ಕತೆ ಕೇಳಿ; ಗೆಳೆಯ ಒತ್ತಾಯಕ್ಕೆಂದು ಬಿತ್ತನೆ ಮಾಡಿದ ನಂತರ ಎರಡು ಮೂರು ಮಳೆಯಾಗಿದೆ. ನಂತರ ನೀರು ಹಾಯಿಸುವ ಕೆಲಸಕ್ಕೆ ಇವರು ಹೋಗಲಿಲ್ಲ. ಮೂರು ತಿಂಗಳಲ್ಲಿ ಚೆನ್ನಾಗಿ ತೆನೆ ಬಂದು ಐದನೆ ತಿಂಗಳು ಕಟಾವಿಗೆ ಸಿದ್ಧಗೊಂಡಿತು. ಎರಡು ಎಕರೆಯಲ್ಲಿ ದೊರೆತ ಸುಮಾರು ಎಂಟು ಕ್ವಿಂಟಾಲ್‌ ಊದಲಿನಲ್ಲಿ ಒಂದು ಕ್ವಿಂಟಾಲನ್ನು ಮನೆ ಬಳಕೆಗೆ ಇರಿಸಿಕೊಂಡು ಉಳಿದದ್ದನ್ನು ಬೆಳಗಾಂ ಮಾರುಕಟ್ಟೆಯಲ್ಲಿ ಮಾರಿದರು. ಕ್ವಿಂಟಾಲ್‌ಗೆ ರೂ. 2500ರ‌ಂತೆ ದೊರೆಯಿತು. ಕ್ರಮೇಣ  ಇತರರಿಂದ ಮಾಹಿತಿ ಪಡೆದು ಊದಲಿನಿಂದ ತಿಂಡಿ, ದೋಸೆ ತಯಾರಿಸಿದರು. 

    ಈಗ, ಎರಡು ಎಕರೆ ಜಮೀನಿನಲ್ಲಿ ಊದಲು ನಳನಳಿಸುತ್ತದೆ. ಈ ಬೆಳೆಯಿಂದಲೇ ಬೆಳಗಾಂವಕರ ಸುಂದರ ಬದುಕನ್ನು ಕಂಡುಕೊಂಡಿದ್ದಾರೆ. ಬೆಳೆಯುವ ಜೊತೆಗೆ ಬಳಸುವ ಕುರಿತು ಇವರು ತರಬೇತಿ, ಮಾಹಿತಿಯನ್ನು ನೀಡುತ್ತಾರೆ. ಒಣಭೂಮಿಯಲ್ಲಿ ಕಡಿಮೆ ಖರ್ಚಿನಲ್ಲಿ, ಕಡಿಮೆ ನೀರಾವರಿಯಲ್ಲಿ ಬೆಳೆಯಬಹುದಾದ ಬೆಳೆ ಇದು ಎನ್ನುವುದು ಇವರ ಅನುಭವದ ಮಾತು. ವರ್ಷದಿಂದ ವರ್ಷಕ್ಕೆ ಈ ಬೆಳೆಗೆ ಬೇಡಿಕೆ ಹೆಚ್ಚುತ್ತಿದೆ. ಪರಿಣಾಮವಾಗಿ ಬೆಳೆಗಾರರ ಸಂಖ್ಯೆಯೂ ಹೆಚ್ಚುತ್ತಿದ್ದು ಊದಲಿಗೆ ಸರ್ವಋತುಗಳಲ್ಲೂ ಬಹುಬೇಡಿಕೆಯಿದೆ.

  ಸಿರಿಧಾನ್ಯಗಳು ಒಣ ಭೂಮಿಗೆ ಸೂಕ್ತವಾದ ಬೆಳೆಗಳಾಗಿದ್ದು ನಿರ್ವಹಣೆ ವೆಚ್ಚವೂ ಕಡಿಮೆ. ಇದನ್ನು ಬಿತ್ತುವ, ಬೆಳೆಯುವ ಬಗ್ಗೆ ಹೆಚ್ಚಿನ ಮಾಹಿತಿಯೂ ಬೇಕಾಗಿಲ್ಲ. ಅದಕ್ಕಿಂತ ಮಿಗಿಲಾಗಿ ಕೂಲಿಯಾಳುಗಳ ಹೆಚ್ಚಿನ ಅಗತ್ಯವೂ ಇಲ್ಲಿಲ್ಲ. ಇತರರು ಬೆಳೆಯುವತ್ತ ಪ್ರಯತ್ನಿಸಬಹುದು.

 ಬೆಳೆಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ರಾತ್ರಿ ಗಂಟೆ 7ರಿಂದ 7.30ರ ಒಳಗೆ ಬೆಳೆಗಾರ ರಾಜನಾರಾಯಣರವರಿಗೆ ಕರೆ ಮಾಡಬಹುದು. ಅವರ ದೂರವಾಣಿ ಸಂಖ್ಯೆ : 9480629886.

Advertisement

 ಚಂದ್ರಹಾಸ ಚಾರ್ಮಾಡಿ

Advertisement

Udayavani is now on Telegram. Click here to join our channel and stay updated with the latest news.

Next