Advertisement

250 ವರ್ಷ ಹಿಂದಿನ ಶಿಖರಕ್ಕೆ ಮತ್ತೆ ಸ್ವರ್ಣಲೇಪನ

10:39 AM Jun 08, 2019 | Team Udayavani |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಈಗಾಗಲೇ ಇದ್ದ ಶಿಖರಗಳಲ್ಲಿ ಇರುವ ಶಾಸನಗಳು ಅವು ಎಷ್ಟು ಶತಮಾನ ಹಿಂದಿನವಾಗಿರಬಹುದು ಎಂಬ ಕುತೂಹಲವನ್ನು ಹುಟ್ಟಿಸುತ್ತವೆ. ಅಲ್ಲಿರುವ ಅಕ್ಷರಗಳು ಮೋಡಿಯಾಗಿರುವುದು ಮತ್ತು ಜೀರ್ಣಾವಸ್ಥೆಯಲ್ಲಿರುವುದರಿಂದ ಸ್ಪಷ್ಟವಾಗಿ ಅರಿಯಲು ಸಾಧ್ಯವಾಗುತ್ತಿಲ್ಲ.

Advertisement

ಮೂರು ಮುಗಳಿಗಳಲ್ಲಿ ಎರಡರಲ್ಲಿ ಬರಹಗಳು ಕಾಣುತ್ತವೆ. ಒಂದರಲ್ಲಿ ಶಿಖರದ ತಳಭಾಗ ದಲ್ಲಿ ಕಂಡರೆ, ಇನ್ನೊಂದರಲ್ಲಿ ಶಿಖರದ ಮಧ್ಯಭಾಗ ದಲ್ಲಿವೆ. ಒಂದರಲ್ಲಿ “ಶ್ರೀವಾದಿರಾಜ ಮಠದ…’ ಮತ್ತು ಇನ್ನೊಂದರಲ್ಲಿ “ಈಶ್ವರ ಸಂವತ್ಸರದ ಪುಷ್ಯಶುದ್ಧ ತೃತೀಯ ಸ್ವಾದಿ ಸ್ವಾಮಿಗಳ ಪೂಜಾ ಕಾಲದಲ್ಲಿ… ಸೇವೆ’ ಎಂದು ಓದಲು ಬರುತ್ತದೆ.

ಇನ್ನೊಂದು ಮೂಲದ ಪ್ರಕಾರ ಶ್ರೀ ವಾದಿರಾಜ ಸ್ವಾಮಿಗಳ ಶಿಷ್ಯ ಶ್ರೀ ವೇದವೇದ್ಯತೀರ್ಥರ ಕಾಲದಲ್ಲಿ ಹುಲ್ಲಿನ ಮಾಡು ಇದ್ದದ್ದನ್ನು ಜೀರ್ಣೋದ್ಧಾರಗೊಳಿಸಿದರು ಎಂದು ತಿಳಿದು ಬರುತ್ತದೆ. ಈಗ ಸಿಗುವ ಒಂದು ಶಿಖರದಲ್ಲಿ “ವಿಶ್ವನಿಧಿ’ ಎಂಬ ಶಬ್ದ ಅಸ್ಪಷ್ಟವಾಗಿ ಗೋಚರಿಸುತ್ತದೆ. ಈಗ ಸ್ವರ್ಣಗೋಪುರ ಸಮರ್ಪಣೆ ಸಂದರ್ಭ ಇದನ್ನು ನೋಡಿದ ರಾಮಮೂರ್ತಿ ಆಚಾರ್ಯರು ಸುಮಾರು 250 ವರ್ಷಗಳ ಹಿಂದಿನದ್ದಿರಬಹುದು ಎಂದು ಅಂದಾಜಿಸಿದ್ದಾರೆ. “ಶ್ರೀವಿಶ್ವನಿಧಿತೀರ್ಥರು ಸೋದೆ ಮಠದ ಪರಂಪರೆಯಲ್ಲಿ 262 ವರ್ಷಗಳ ಹಿಂದೆ ಇದ್ದರು. ಇವರ ವೃಂದಾವನ ಉಂಡಾರು ದೇವಸ್ಥಾನದ ಸಮೀಪವಿದೆ’ ಎಂದು ಶ್ರೀವಾದಿರಾಜ ಸ್ವಾಮಿಗಳ ಬಗೆಗೆ ಸಂಶೋಧನೆ ನಡೆಸಿರುವ ಬಳ್ಳಾರಿ ವೀರಶೈವ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ| ಜಿ.ಕೆ. ನಿಪ್ಪಾಣಿ ಹೇಳುತ್ತಾರೆ. ರಾಮಮೂರ್ತಿ ಮತ್ತು ಡಾ| ನಿಪ್ಪಾಣಿಯವರ ಹೇಳಿಕೆಗಳು ತಾಳೆಯಾಗುವುದರಿಂದ ಶಿಖರ ಸುಮಾರು 250 ವರ್ಷಗಳ ಹಿಂದಿನದ್ದು ಎನ್ನಬಹುದು.

ಶಿಖರ ನಿರ್ಮಾಣ, ತಾಮ್ರದ ತಗಡು ಹೊದೆಸಿರುವುದು, ಹುಲ್ಲಿನ ಮಾಡು ತೆಗೆದು ಜೀರ್ಣೋದ್ಧಾರಗೊಳಿಸಿರುವುದೆಲ್ಲ ಏಕಕಾಲದಲ್ಲಿ ಆಗಿದೆ ಎಂದೂ ಹೇಳುವಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next