Advertisement

ಚಿನ್ನ ಖರೀದಿ ಉದ್ದೇಶದಲ್ಲಿ ನಮಗೆ ಸ್ಪಷ್ಟತೆ ಇದ್ದರೆ ಲಾಭ ಗ್ಯಾರಂಟಿ !

10:43 AM Aug 13, 2018 | udayavani editorial |

ಹೂಡಿಕೆ ದೃಷ್ಟಿಯಲ್ಲಿ ಚಿನ್ನವನ್ನು ಖರೀದಿಸುವುದಕ್ಕೂ ಸೌಂದರ್ಯಾಭರಣಗಳ ದೃಷ್ಟಿಯಲ್ಲಿ ಚಿನ್ನದ ಒಡವೆಗಳನ್ನು ಖರೀದಿಸುವುದಕ್ಕೂ ಸಂಬಂಧವೇ ಇರುವುದಿಲ್ಲ ಎಂಬುದನ್ನು ನಾವು ಮೊತ್ತ ಮೊದಲಾಗಿ ತಿಳಿದಿರಬೇಕಾಗುತ್ತದೆ. 

Advertisement

ಹೂಡಿಕೆ ದೃಷ್ಟಿಯಲ್ಲಿ ಚಿನ್ನವನ್ನು ನಾಣ್ಯ, ಬಿಸ್ಕತ್ತು, ಬಾರ್ ಗಳ ರೂಪದಲ್ಲಿ ಖರೀದಿಸುವುದು ಕೇವಲ ಲಾಭ ನಗದೀಕರಣದ ಉದ್ದೇಶಕ್ಕೆ. ಚಿನ್ನದ ಬೆಲೆ ಕಡಿಮೆಯಾಗುತ್ತಿದ್ದಂತೆಯೇ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಆದರೆ ನಿರಂತರವಾಗಿ ಚಿನ್ನ ಖರೀದಿಸುವುದು ಮುಂದೆ ಅದನ್ನು  ಲಾಭಕ್ಕಾಗಿ ಮಾರುವ ಉದ್ದೇಶದಿಂದ. ಇದೊಂದು ರೀತಿಯಲ್ಲಿ ನಮ್ಮದೇ ಆದ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ! ಈ ಬಗೆಯ ಚಿನ್ನದಲ್ಲಿ ನಷ್ಟವಾಗುವಂಥದ್ದೇನೂ ಇರುವುದಿಲ್ಲ. 

ಆದರೆ ಚಿನ್ನದ ಒಡವೆಗಳನ್ನು ಖರೀದಿಸುವುದು, ವಿಶೇಷವಾಗಿ ಮಹಿಳೆಯರು, ಸೌಂದರ್ಯ ವರ್ಧನೆ ಉದ್ದೇಶದಿಂದ ಎನ್ನುವುದು ಮುಖ್ಯ. ಆದುದರಿಂದ ಹೆಚ್ಚು  ಕುಸುರಿ ಕಲೆಯ ಒಡವೆಗಳಲ್ಲಿ ಮಜೂರಿ ವೆಚ್ಚ  ಗಮನಾರ್ಹವಾಗಿರುತ್ತದೆ. ಆದರೆ ಅತ್ಯಂತ ಕಡಿಮೆ ಕುಸುರಿಯ ಗಟ್ಟಿ ಚಿನ್ನದ ಆಭರಣಗಳಲ್ಲಿ  ಮಜೂರಿಯು ಅಲ್ಪ ಪ್ರಮಾಣದಲ್ಲಿರುತ್ತದೆ. ಈ ವ್ಯತ್ಯಾಸಗಳನ್ನು ಗಮನಿಸಿಕೊಂಡು, ನಮ್ಮ ಉದ್ದೇಶಕ್ಕೆ ಅನುಗುಣವಾದ ರೀತಿಯಲ್ಲಿ ಚಿನ್ನ ಖರೀದಿಸುವುದರಲ್ಲೇ ಜಾಣ್ಮೆ ಇದೆ. 

ಚಿನ್ನದ ಒಡವೆಗಳನ್ನು ಖರೀದಿಸುವಾಗ ಹೂಡಿಕೆದಾರರೂ ಗ್ರಾಹಕರೂ ಆಗಿ ನಾವು ತೋರಬೇಕಾದ ಎಚ್ಚರಿಕೆಯ ವಿಷಯಗಳು ಹಲವಾರು ಇರುತ್ತವೆ. ಅಂತೆಯೇ ಈ ನಿಟ್ಟಿನಲ್ಲಿ ಈ ಕೆಳಗಿನ ಅಂಶಗಳನ್ನು ಗಮನಿಸಬಹುದು : 

Advertisement

ಬಿಲ್ನಲ್ಲಿ ತೋರಿಸಬೇಕಾದ ವಿಷಯಗಳು ಯಾವುವು ಎಂಬುದನ್ನು ಗಮನದಲ್ಲಿಟ್ಟುಕೊಂಡರೆ ಅವು ಹೀಗಿರಬೇಕು : ಚಿನ್ನದ ಒಟ್ಟು ತೂಕ, ನಿವ್ವಳ ತೂಕ, ಚಿನ್ನದ ದರ, ತಯಾರಿ ಶುಲ್ಕ, ಹರಳಿನ ಮೌಲ್ಯ, ಜಿಎಸ್ಟಿ;   ಲೇಬರ್ ಚಾರ್ಜ್:  ಸಾಮಾನ್ಯವಾಗಿ ನಿವ್ವಳ ಚಿನ್ನದ ಮೇಲೆ, ಅಥವಾ ವೆಸ್ಟೇಜ್ ಮೇಲೆ ಮತ್ತು ಮೇಕಿಂಗ್ ಜಾರ್ಜ್ ಮೇಲೆ ನಿರ್ಧಾರವಾಗುತ್ತದೆ.

ಉದಾಹರಣೆಗೆ  ಚಿನ್ನ ಖರೀದಿ ಲೆಕ್ಕಾಚಾರವನ್ನು ಹೀಗೆ ಕಾಣಿಸಬಹುದು : 


ಚಿನ್ನಾಭರಣ ಖರೀದಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಗಳು ಇವು : 

* ಚಿನ್ನಾಭರಣವನ್ನು ಅಲಂಕಾರಕ್ಕೆ ಬಳಸಲಾಗುತ್ತದೆ ಮತ್ತು ಅಮೂಲ್ಯ ಸೊತ್ತಾಗಿ ಪರಿಗಣಿಸಲಾಗುತ್ತದೆ. 

* ನಮಗೆ ಬೇಕಿದ್ದಾಗ ನಾವದನ್ನು ನಗದೀಕರಿಸಬಹುದು.

* ಚಿನ್ನಾಭರಣವನ್ನು ಎಲ್ಲಿ ಖರೀದಿಸಲಾಗಿದೆಯೋ ಅಲ್ಲಿಯೇ ಅದನ್ನು ಮಾರಬೇಕು.ಆಗಲೇ ನಮಗೆ ಉತ್ತಮ ಬೆಲೆ ಸಿಗುತ್ತದೆ. 

ಸಾಮಾನ್ಯವಾಗಿ ಜನರು ತಾವು ಎಲ್ಲೋ ಖರಿದೀಸಿದ ಚಿನ್ನದ ಒಡವೆಗಳನ್ನು  ಬೇರೆ ಜ್ಯುವೆಲ್ಲರ್ಗೆ ಮಾರುವ ತಪ್ಪು ಮಾಡುತ್ತಾರೆ; ತಾವು ಚಿನ್ನ ಖರೀದಿಸಿದ ಜ್ಯುವೆಲ್ಲರ್ ರನ್ನು ಎದುರಿಸಲಾರೆವೆಂದು ಅವರು ಭಾವಿಸುತ್ತಾರೆ. 

ಚಿನ್ನಾಭರಣ ಮಾರುವಾಗ ನಾವು ಮೇಕಿಂಗ್/ಲೇಬರ್ ಚಾರ್ಜನ್ನು ಮಾತ್ರವೇ ಕಳೆದುಕೊಳ್ಳುತ್ತೆವೆ; ಚಿನ್ನದ ತೂಕದಲ್ಲಿ ಯಾವುದೇ ಕಡಿತ ಇರುವುದಿಲ್ಲ. ನಾವು ಚಿನ್ನಾಭರಣವನ್ನು ಬೇರೆ ಜ್ಯುವೆಲ್ಲರ್ ಗೆ ಮಾರಿದಾಗ ಅವರು ಅದರ ಪರಿಶುದ್ಧತೆಯನ್ನು ತಾಂತ್ರಿಕ ಕ್ರಮಗಳ ಮೂಲಕ ಖಾತರಿಸಿಪಡಿಸಿಕೊಳ್ಳುತ್ತಾರೆ. 

ಚಿನ್ನವನ್ನು ಸಾಣೆಗೆ ಹಿಡಿದು ಅದರ ಪರಿಶುದ್ಧತೆಯನ್ನು ತಿಳಿಯುವ ಕ್ರಮ ಗತಕಾಲದ್ದಾಗಿದ್ದು ಅದು ಎಷ್ಟು ಮಾತ್ರಕ್ಕೂ ನಂಬಿಕೆಗೆ ಅರ್ಹವಾಗಿರುವುದಿಲ್ಲ. 

ಚಿನ್ನಾಭರಣ ವಿನಿಮಯಕ್ಕೆ ಇರುವ ಅವಕಾಶಗಳು : 

* ಚಿನ್ನಾಭರಣವನ್ನು ಖರೀದಿಸಬಹುದು; ಮಾರಬಹುದು ಅಥವಾ ವಿನಿಮಯಿಸಬಹುದು ಎನ್ನುವುದು ಮುಖ್ಯ.

* ನಾವು ಹಳೆಯ ಚಿನ್ನಾಭರಣವನ್ನು ಹೊಸದಕ್ಕೆ  ವಿನಿಮಯಿಸುವಾಗ ನಮಗೆ ಚಿನ್ನದ ಮೌಲ್ಯ ಸಿಗಬೇಕು. ಚಿನ್ನಾಭರಣವನ್ನು ಕರಗಿಸಿ ಪುನರ್ ರೂಪಿಸಲಾದಾಗ ಅದರ ಲೇಬರ್ ಚಾರ್ಜ್ ಮತ್ತು ಹರಳಿನ ಮೌಲ್ಯವು ನಮಗೆ ನಷ್ಟವಾಗುತ್ತದೆ.

* ಹಳೇ ಚಿನ್ನಾಭರಣಗಳನ್ನು ಯಾವತ್ತೂ ತಾಂತ್ರಿಕ ಕ್ರಮ/ಪ್ರಕ್ರಿಯೆ ಮೂಲಕ ವಿಶ್ಲೇಷಿಸಲಾಗುತ್ತದೆ.

* ಇಂದಿನ ದಿನಗಳಲ್ಲಿ ಎಕ್ಸ್ ರೇ ಕ್ರಮವು ಹೆಚ್ಚು ಸ್ವೀಕೃತವಾಗಿದೆ. ಸಾಣೆಗೆ ಹಿಡಿಯುವ ಕ್ರಮವು ಸಾಂಪ್ರದಾಯಿಕ ಮತ್ತು ಸ್ವೀಕಾರಾರ್ಹವಲ್ಲ.

ಈ ಎಲ್ಲ ಅಂಶಗಳನ್ನು ದೃಷ್ಟಿಯಲ್ಲಿರಿಸಿಕೊಂಡು ನಾವು ಚಿನ್ನವನ್ನು ಯಾವ ಉದ್ದೇಶಕ್ಕೆ ಖರೀದಿಸುತ್ತೇವೆ ಎಂಬುದನ್ನು ಮೊದಲೇ ಖಚಿತಪಡಿಸಿಕೊಂಡರೆ ಅನಂತರದಲ್ಲಿ ಆಗುವ ಸಂಭವನೀಯ ನಷ್ಟವನ್ನು ನಾವು ತಪ್ಪಿಸಲು ಸಾಧ್ಯ. ಚಿನ್ನವನ್ನು ಹೂಡಿಕೆ ದೃಷ್ಟಿಯಿಂದ ಖರೀದಿಸುವಾಗ ಪಕ್ಕಾ ಹೂಡಿಕೆದಾರರಾಗಿ ನಾವು ವರ್ತಿಸಬೇಕಾಗುತ್ತದೆ. ಭಾವನೆಗಳಿಗೆ ಬಲಿ ಬಿದ್ದರೆ ಲಾಭ ಕಷ್ಟ, ನಷ್ಟ ಖಚಿತ !

Advertisement

Udayavani is now on Telegram. Click here to join our channel and stay updated with the latest news.

Next