ನವದೆಹಲಿ: ಈ ಕೋವಿಡ್ 19 ವೈರಸ್ ನ ಕಾಟ ಪ್ರಾರಂಭವಾದ ಮೇಲೆ ಬಹುದೊಡ್ಡ ಹೊಡೆತ ಬಿದ್ದಿರುವುದು ನಮ್ಮಲ್ಲಿರುವ ಬೀದಿ ವ್ಯಾಪಾರಿಗಳ ಮೇಲೆ.
ಅದರಲ್ಲೂ ವಿಕೆಂಡ್ ಗಳಲ್ಲಿ ಗ್ರಾಹಕರಿಂದ ತುಂಬಿರುತ್ತಿದ್ದ ಚಾಟ್ಸ್ ಸೆಂಟರ್ ಗಳು ಇಂದು ಬಿಕೋ ಎನ್ನುತ್ತಿವೆ.
ಇದೀಗ ಜನರು ಬೀದಿ ಬದಿ ಆಹಾರ ಪದಾರ್ಥಗಳನ್ನು ಬಿಡಿ ಹೊರಗಡೆ ಹೋಗಿ ಆಹಾರ ಸೇವಿಸುವುದಕ್ಕೇ ಹೆದರುವಂತಹ ಪರಿಸ್ಥಿತಿ ಎದುರಾಗಿದೆ.
ಆದರೆ ಈ ಚಾಟ್ಸ್ ಗಳು, ಗೋಲ್ ಗಪ್ಪ, ಗೋಬಿ, ಇವುಗಳ ಟೇಸ್ಟ್ ನಮ್ಮನ್ನು ಕಾಡದಿರುತ್ತದೆಯೇ ಹೇಳಿ!?
Related Articles
ಇದಕ್ಕೊಂದು ಸಾಲಿಡ್ ಉಪಾಯವನ್ನು ಯಾರೋ ಒಬ್ಬರು ಪುಣ್ಯಾತ್ಮರು ಕಂಡುಹಿಡಿದಿದ್ದಾರೆ. ಅದೇ ‘ಪಾನಿ ಪೂರಿ ಎಟಿಎಂ’, ಹೌದು, ಇದೀಗ ಟ್ವಿಟ್ಟರ್ ನಲ್ಲಿ ಈ ಹೊಸ ಅವಿಷ್ಕಾರದ್ದೇ ಮಾತು.
ಎಡಿಜಿಪಿ ಹರ್ದಿ ಸಿಂಗ್ ಎಂಬುವವರು ಈ ಸ್ಪೆಷಲ್ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ ನಂತರ ಇದನ್ನು ಕಂಡು ಟ್ಟಿಟ್ಟರ್ ಲೋಕ ದಂಗಾಗಿದೆ.
ಹೌದು, ನಾವೇನೂ ತಮಾಷೆ ಮಾಡುತ್ತಿಲ್ಲ. ಇದನ್ನು ಬೇಕಾದ್ರೆ ಆತ್ಮ ನಿರ್ಭರ ಭಾರತದ ಕೊಡುಗೆ ಅನ್ನಿ, ಅಂತೂ ನಮ್ಮ ದೇಶದಲ್ಲೊಬ್ಬರು ಪಾನಿ ಪೂರಿ ನೀಡುವ ಯಂತ್ರವೊಂದನ್ನು ಆವಿಷ್ಕರಿಸಿದ್ದಾರೆ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಈ ಹೊಸ ಯಂತ್ರದ ಕಾರ್ಯಶೈಲಿಯನ್ನು ವಿವರಿಸುತ್ತಾರೆ. ಅವರು ಹೇಳುವ ಪ್ರಕಾರ ಈ ಯಂತ್ರವು ಯಾವುದೇ ಮಾನವ ಸಂಪರ್ಕವಿಲ್ಲದೇ ನೇರವಾಗಿ ನಿಮಗೇ ಗೋಲ ಗಪ್ಪವನ್ನು ನೀಡುತ್ತದೆ. ಇದು ಜಸ್ಟ್ ಲೈಕ್ ಸಾಫ್ಟಿ ಮೆಷಿನ್ ಇದೆಯಲ್ಲಾ ಅದೇ ರೀತಿ ಅಂದುಕೊಳ್ಳಬಹುದು. ಆದ್ರೆ ಇಲ್ಲಿ ನೀವು ರೆಡಿಯಾದ ಗೋಲ್ ಗಪ್ಪವನ್ನು ನೀವೇ ನಿಮ್ಮ ಕೈಯಾರೆ ತೆಗೆದುಕೊಳ್ಳುವ ರೀತಿಯಲ್ಲಿ ಈ ಯಂತ್ರವನ್ನು ವಿನ್ಯಾಸ ಮಾಡಲಾಗಿದೆ.
ಫಾಸ್ಟ್ ಫುಡ್ ಹಾಗೂ ಚಾಟ್ಸ್ ವ್ಯಾಪಾರಿಗಳಿಗೆ ಮುಂಬರುವ ದಿನಗಳಲ್ಲಿ ವರದಾನವಾಗುವ ಎಲ್ಲಾ ಸಾಧ್ಯತೆಗಳನ್ನೂ ಈ ಯಂತ್ರವು ಹೊಂದಿದೆ. ಆದರೆ ಇದನ್ನು ನಮ್ಮ ವ್ಯಾಪಾರಿಗಳ ಕೈಗೆಟಕುವ ದರದಲ್ಲಿ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಕೌಶಲಾಭಿವೃದ್ಧಿ ಸಚಿವಾಲಯ ಅಥವಾ ಸಂಬಂಧಪಟ್ಟ ಇಲಾಖೆಗಳು ಗಮನಹರಿಸಬೇಕಾಗಿರುವುದು ಅಗತ್ಯವಾಗಿದೆ.
ಯಾಕೆಂದರೆ ನಮ್ಮಲ್ಲಿ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಆದರೆ ನಮ್ಮಲ್ಲಿ ತಯಾರಾಗುವ ಯಾವುದೇ ಹೊಸ ಆವಿಷ್ಕಾರಗಳಿಗೆ ಸರಕಾರದ ಕಡೆಯಿಂದ ಸೂಕ್ತ ಪ್ರೋತ್ಸಾಹ ಹಾಗೂ ಸಹಾಯದ ಕೊರತೆಯಿಂದ ಇಂತಹ ಆವಿಷ್ಕಾರಗಳು ಒಮ್ಮೆ ಪ್ರಚಾರಕ್ಕೆ ಬಂದು ಬಳಿಕ ಮರೆಗೆ ಸರಿದು ಬಿಡುತ್ತವೆ.