ಹುಬ್ಬಳ್ಳಿ: ನಗರದ ಕೆಲ ಪ್ರಮುಖ ರಸ್ತೆಗಳನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅಂದ-ಚೆಂದ ಮಾಡಲಾಗುತ್ತಿದೆ. ಆದರೆ ಗೋಕುಲ ರಸ್ತೆಯಲ್ಲಿ ಮಾಡಿರುವ ರಸ್ತೆ ವಿಭಜಕ ಸೇರಿದಂತೆ ಇನ್ನಿತರೆ ಕಾರ್ಯಗಳನ್ನು ನೋಡಿದರೆ ಇದೆಂತಹ ಸ್ಮಾರ್ಟ್ ಎನ್ನುವಂತಾಗಿದೆ. ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ, ಆಗಲೇ ವಾಹನದ ಚಕ್ರಕ್ಕೆ ಸಿಲುಕಿ ರಸ್ತೆ ವಿಭಜಕಕ್ಕೆ ಹಾಕಿದ ಕಾಂಕ್ರೀಟ್ ನೆಲಕ್ಕುರುಳಿದೆ.
ನಗರ ಪ್ರವೇಶಿಸುವ ಜನರ ಆಕರ್ಷಿಸುವಂತೆ ರಸ್ತೆಗಳನ್ನು ಸುಂದರಗೊಳಿಸುವುದು ಸ್ಮಾರ್ಟ್ ರಸ್ತೆಯ ಪರಿಕಲ್ಪನೆಯಾಗಿದೆ. ಹೀಗಾಗಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಿದ್ದು, ಈಗಾಗಲೇ ಗೋಕುಲ ರಸ್ತೆಯಲ್ಲಿ ಒಂದಿಷ್ಟು ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನೂ ಕೆಲ ಕಾಮಗಾರಿ ಬಾಕಿ ಇರುವಾಗಲೇ ವಾಹನಗಳ ಚಕ್ರಕ್ಕೆ ಸಿಲುಕಿ ರಸ್ತೆ ವಿಭಜಕದ ಕಾಂಕ್ರೀಟ್ ಬಿದ್ದು ಹೋಗಿದ್ದು, ಕಾಮಗಾರಿ ಗುಣಮಟ್ಟ ಜನರಲ್ಲಿ ಅಚ್ಚರಿ ಮೂಡಿಸಿದೆ. ಗುತ್ತಿಗೆದಾರ ಅದೆಂತಹ ಕಾಂಕ್ರೀಟ್ ಸುರಿದಿದ್ದಾನೆ, ಅಧಿಕಾರಿಗಳು ಅದ್ಯಾವ ರೀತಿ ಮೇಲ್ವಿಚಾರಣೆ ಮಾಡಿದ್ದಾರೆ ಎನ್ನುವ ಮಾತು ಜನರಿಂದ ಕೇಳಿಬರುತ್ತಿದೆ.
ಇದನ್ನೂ ಓದಿ:ಕಾಂಗ್ರೆಸ್ ತನ್ನ ಅಹಂಕಾರ ಮುಂದುವರೆಸಿದರೆ ಕರ್ನಾಟಕದಲ್ಲೂ ನೆಲೆ ಕಳೆದುಕೊಳ್ಳಬಹುದು :HDK
ವಿಮಾನ ನಿಲ್ದಾಣ-ಹೊಸೂರು ಜಂಕ್ಷನ್‌ವರೆಗೆ 5 ಕಿಮೀ ವ್ಯಾಪ್ತಿಯ ರಸ್ತೆಯನ್ನು ಸುಮಾರು 43 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಮಾಡಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಬೀದಿದೀಪ, ರಸ್ತೆ ಗುರುತುಗಳು, ಪಾದಚಾರಿ ಮಾರ್ಗ, ಜಂಕ್ಷನ್ ಅಭಿವೃದ್ಧಿ, ಚರಂಡಿ, ರಸ್ತೆ ವಿಭಜಕದಲ್ಲಿ ಗಿಡ ನೆಡುವುದು ಸೇರಿದಂತೆ ಹಲವು ಕಾರ್ಯಗಳನ್ನು ಕೈಗೊಂಡಿದ್ದು, 5 ವರ್ಷ ಗುತ್ತಿಗೆದಾರರ ನಿರ್ವಹಣೆಯಿದೆ. ವಿಪರ್ಯಾಸ ಅಂದರೆ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಅಲ್ಲಲ್ಲಿ ವಾಹನಗಳ ಚಕ್ರ ತಾಗಿ ರಸ್ತೆ ವಿಭಜಕ ಬಿದ್ದು ಹೋಗಿವೆ.
ಇದನ್ನೂ ಓದಿ:ಉಪಚುನಾವಣೆ ಕಾರಣ ದಾಳಿ ಮಾಡಿದ್ದಾರೆ, ಸಿಬಿಐ ದಾಳಿ ರಾಜಕೀಯ ಪ್ರೇರಿತ: ಲಕ್ಷ್ಮೀ ಹೆಬ್ಬಾಳಕರ್
ಹೊಸೂರು ವೃತ್ತ ಹಾಗೂ ವಿಕಾಸ ನಗರ ವೃತ್ತದಲ್ಲಿ ಕಾಂಕ್ರೀಟ್ ಬಿದ್ದು ಹೋಗಿವೆ. ಯೂ ಟರ್ನ್ ತೆಗೆದುಕೊಳ್ಳುವ ಪ್ರತಿಯೊಂದು ಜಂಕ್ಷನ್‌ನಲ್ಲಿ ರಸ್ತೆ ವಿಭಜಕ ಕಾಂಕ್ರೀಟ್ ಕಿತ್ತು ಹೋಗಿವೆ. ಇನ್ನೂ ಕೆಲವೆಡೆ ಬಿರುಕು ಬಿಟ್ಟಿದೆ. ವಿವಿಧೆಡೆ ರಸ್ತೆ ವಿಭಜಕ ಕಾಮಗಾರಿಯೂ ಅಷ್ಟೊಂದು ಅಚ್ಚುಕಟ್ಟಾಗಿ ಆಗಿಲ್ಲ ಎನ್ನುವ ಆರೋಪಗಳು ಇವೆ. ರಸ್ತೆ ವಿಭಜಕ ಮಾಡಲು ಹಾಕಿರುವ ಕಾಂಕ್ರೀಟ್ ಗೋಡೆ ಅಲ್ಲಲ್ಲಿ ರಸ್ತೆ ಕಡೆ ವಾಲಿಕೊಂಡಿರುವುದು ವಾಹನಗಳಿಗೆ ತಾಕಿ ಬೀಳಲು ಕಾರಣವಾಗುತ್ತಿದೆ. ಇನ್ನೂ ಹಾಕಿರುವ ಕಾಂಕ್ರೀಟ್ ಅರ್ಧ ಸಿಸಿ ರಸ್ತೆ ಇನ್ನರ್ಧ ಮಣ್ಣಿನ ಮೇಲೆ ಇರುವುದರಿಂದ ಗಟ್ಟಿಯಾಗಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತದೆ.
ಈಡೇರದ ಯೋಜನೆ ಮೂಲ ಉದ್ದೇಶ; ಎಲ್ಲಿದೆ ಸ್ಮಾರ್ಟ್?
ರಸ್ತೆ ವಿಭಜಕ ಆಗಿರುವ ಕಡೆಗಳಲ್ಲಿ ಹಾಕಿರುವ ವಿದ್ಯುತ್ ಕೇಬಲ್, ಅಳವಡಿಸಿರುವ ವಿದ್ಯುತ್ ಬಾಕ್ಸ್‌ಗಳನ್ನು ನೋಡಿದರೆ ಸ್ಮಾರ್ಟ್ ಎನ್ನುವ ಪದಕ್ಕೆ ಅಗೌರವ ತೋರಿದಂತಿದೆ. ಅಲ್ಲಲ್ಲಿ ತುಂಡಾಗಿರುವ ಕೇಬಲ್‌ಗಳನ್ನೇ ಜೋಡಿಸಿ ಬೇಕಾಬಿಟ್ಟಿ ಬಿಸಾಡಿದಂತಿದೆ. ಇಂತಹ ಅವ್ಯವಸ್ಥೆಗಳಿಂದ ಕೋಟ್ಯಂತರ ರೂ. ಖರ್ಚು ಮಾಡಿ ಅಭಿವೃದ್ಧಿ ಮಾಡುತ್ತಿರುವ ಕಾರ್ಯ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತಾಗುತ್ತಿದೆ. ರಸ್ತೆ ಮಧ್ಯದ ಜಾಹೀರಾತು ಫಲಕಗಳನ್ನು ನೋಡಿದರೆ ಹಿಂದಿನ ರಸ್ತೆ ವಿಭಜಕವೇ ನೆನಪಾಗುತ್ತಿದೆ. ಕಾಂಕ್ರೀಟ್ ಸುರಿಯುವುದಕ್ಕೆ ನೀಡುವ ಒತ್ತು ಇನ್ನಿತರೆ ಕಾರ್ಯಗಳಿಗೆ ನೀಡದಿರುವುದು ಮೂಲ ಉದ್ದೇಶ ಈಡೇರದಂತಾಗಿದೆ.