ಹಾಗೆ ನೋಡಿದರೆ ಅನುಷಾ ಧಾರಾವಾಹಿನಾ, ಸಿನಿಮಾ ಎಂದು ಗೊಂದಲದಲ್ಲಿದ್ದ ಹುಡುಗಿ. ಏಕೆಂದರೆ, ಅತ್ತ ಕಡೆ ಸಿನಿಮಾ ಹಾಗೂ ಧಾರಾವಾಹಿ ಎರಡೂ ಆಫರ್ ಜೊತೆ ಜೊತೆಯಾಗಿ ಬಂದಿತ್ತಂತೆ. ಹಾಗಾಗಿ ಯಾವುದನ್ನು ಆಯ್ಕೆ ಮಾಡಿದರೆ ಸೂಕ್ತ ಎಂದು ಗೊಂದಲದಲ್ಲಿದ್ದ ಅನುಷಾ ಮೊದಲು ಆಯ್ಕೆ ಮಾಡಿದ್ದು ಸಿನಿಮಾವನ್ನು. ಸಿನಿಮಾ ಎಂದರೆ ಸಹಜವಾಗಿಯೇ ಆಸಕ್ತಿ ಹೆಚ್ಚು. ಸಿನಿಮಾದಲ್ಲಿ ಒಮ್ಮೆ ಕ್ಲಿಕ್ ಆದರೆ ಕೆರಿಯರ್ ಚೆನ್ನಾಗಿರುತ್ತದೆ ಎಂದು ನಂಬುವವರೇ ಹೆಚ್ಚು. ಅಂತಹ ನಂಬಿಕೆ ಅನುಷಾಗೂ ಇತ್ತು. ಹಾಗಾಗಿಯೇ ಸಿನಿಮಾಕ್ಕೆ ಮೊದಲು ಗ್ರೀನ್‌ಸಿಗ್ನಲ್ ಕೊಟ್ಟ ಅನುಷಾ, ಬಣ್ಣ ಹಚ್ಚಿದ್ದು ಮಾತ್ರ ಧಾರಾವಾಹಿಯಿಂದಲೇ. ಏನಿದು ಕನ್‌ಫ್ಯೂಶನ್ ಎಂದು ನೀವು ಭಾವಿಸಬಹುದು. ಹೌದು, ಅನುಷಾ ಮೊದಲು ಒಪ್ಪಿಕೊಂಡಿದ್ದು ಸಿನಿಮಾವನ್ನೇ. ಆದರೆ, ಚಿತ್ರೀಕರಣ ಆರಂಭವಾಗಿದ್ದು “ಗೋಕುಲದಲ್ಲಿ ಸೀತೆ’ ಧಾರಾವಾಹಿಯದ್ದು. ಹೀಗೆ “ಸೀತೆ’ಯೊಂದಿಗೆ ಬಣ್ಣದ ಪಯಣ ಆರಂಭಿಸಿದವರು ಅನುಷಾ.
Advertisement
ಒಂದೇ ಒಂದು ಎಕ್ಸ್‌ಪೆಶನ್‌ಗೆ ಸಿನಿಮಾ ಸಿಕ್ತುಅವಕಾಶಗಳು ಹೇಗೆ, ಯಾವಾಗ ಬರುತ್ತದೆಂಬುದನ್ನು ಹೇಳ್ಳೋದು ಕಷ್ಟ. ಯಾವುದೋ ಕ್ಷೇತ್ರದವರು ಇವತ್ತು ಸಿನಿಮಾ ರಂಗದಲ್ಲಿ ಸ್ಟಾರ್ ಆಗಿದ್ದಾರೆ. ಅದು ಅವರಿಗೆ ಸಿಕ್ಕ ಅವಕಾಶದ ಫಲ. ಅನುಷಾಗೂ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ಅಚಾನಕ್ ಆಗಿ. ಅದು ಇವರು ನಟಿಸಿದ ಕಿರುಚಿತ್ರವೊಂದರ ಎಕ್ಸ್‌ಪ್ರೆಶನ್ ಮೂಲಕ. ಹೌದು, ಅನುಷಾ ಮೂಲತಃ ತುಮಕೂರಿನ ಹುಡುಗಿ. ಇಂಜಿನಿಯರಿಂಗ್ ಓದಿರುವ ಅನುಷಾಗೆ ಸಿನಿಮಾದ ಆಸಕ್ತಿ ಚಿಕ್ಕಂದಿನಿಂದಲೇ ಇತ್ತು. ಕಾಲೇಜು ದಿನಗಳಲ್ಲೇ ಸಾಕಷ್ಟು ಶೋಗಳನ್ನು ನೀಡುತ್ತಿದ್ದ ಅನುಷಾಗೆ ಆ ಶೋನಲ್ಲೇ ಅದೃಷ್ಟ ಅಡಗಿದೆ ಎಂದು ಗೊತ್ತಿರಲಿಲ್ಲ. ಹೀಗೆ ಕಾಲೇಜಿನಲ್ಲಿ ಇವರ ಪರ್‌ಫಾರ್ಮೆನ್ಸ್ ನೋಡಿ ಕಿರುಚಿತ್ರವೊಂದಕ್ಕೆ ಅವಕಾಶ ಸಿಗುತ್ತದೆ. ಹೀಗೆ ಎರಡೂರು ಕಿರುಚಿತ್ರಗಳಲ್ಲಿ ನಟಿಸಿದ ಅನುಷಾಗೆ ಕೊನೆಗೆ ಸಿನಿಮಾ ಅವಕಾಶ ಸಿಕ್ಕಿದ್ದು ಕೂಡಾ ಆ ಕಿರುಚಿತ್ರದಿಂದಲೇ. ಯೂಟ್ಯೂಬ್‌ಗ ಅಪ್‌ಲೋಡ್ ಮಾಡಿದ್ದ ಕಿರುಚಿತ್ರದಲ್ಲಿನ ಇವರ ಎಕ್ಸ್‌ಪ್ರೆಶನ್‌ವೊಂದನ್ನು ನೋಡಿದ “ಸೋಡಾಬುಡ್ಡಿ’ ಚಿತ್ರದ ಸಹಾಯಕ ನಿರ್ದೇಶಕರೊಬ್ಬರು ಆ ಚಿತ್ರಕ್ಕೆ ಇವರನ್ನು ರೆಫರ್ ಮಾಡುತ್ತಾರೆ. ನಿರ್ದೇಶಕ ಮೋಹಿತ್‌ಗೂ ಅನುಷಾ ನಟನೆ ಇಷ್ಟವಾಗಿ ಓಕೆ ಆಗುತ್ತಾರೆ. ಹಾಗೆ ಸಿನಿಮಾದಿಂದಲೂ ಅನುಷಾಗೆ ಅವಕಾಶ ಸಿಗುತ್ತದೆ.
Related Articles
Advertisement
ಸೀತೆ ಕೊಟ್ಟ ಬ್ರೇಕ್ಸಿನಿಮಾ ಹಿಟ್ ಆದರಷ್ಟೇ ಆ ಚಿತ್ರದ ಕಲಾವಿದರಿಗೆ ಬೇಡಿಕೆ. ಜನ ಗುರುತು ಹಿಡಿಯಬೇಕಾದರೆ ಸಿನಿಮಾ ಗೆಲ್ಲಬೇಕು. ಆದರೆ ಧಾರಾವಾಹಿಯಲ್ಲಿ ಹಾಗಿಲ್ಲ. ಸಂಜೆ ಮೇಲೆ ಮನೆಮಂದಿಯೆಲ್ಲಾ ಕುಳಿತು ಧಾರಾವಾಹಿ ನೋಡುತ್ತಾರೆ. ಹುಡುಗಿಯ ನಟನೆ ಇಷ್ಟವಾದರೆ ಆಕೆಗೆ ಅಭಿಮಾನಿಯಾಗುತ್ತಾರೆ. ಸಿಕ್ಕಲ್ಲೆಲ್ಲಾ ಗುರುತಿಸಿ ಮಾತನಾಡುತ್ತಾರೆ. ಅನುಷಾಗೆ ಇಂತಹ ಒಂದು ಅವಕಾಶ ಸಿಕ್ಕಿದ್ದು, “ಗೋಕುಲದಲ್ಲಿ ಸೀತೆ’ ಧಾರಾವಾಹಿಯಲ್ಲಿ. ಧಾರಾವಾಹಿಯ ಆಡಿಷನ್‌ನಲ್ಲಿ ಪಾಸಾಗಿ ತೆರೆಮೇಲೆ ಬಂದ ದಿನದಿಂದಲೇ ಅನುಷಾ ನಟನೆಯನ್ನು ಜನ ಇಷ್ಟಪಟ್ಟಿದ್ದರು. ಹಳ್ಳಿ ಹುಡುಗಿ ಪಾವನಿಯಾಗಿ, ಶ್ರೀಮಂತ ಕುಟುಂಬದ ಸೊಸೆಯಾಗುವ ಅವರ ಪಾತ್ರ ಜನರಿಗೆ ಇಷ್ಟವಾಗಿತ್ತು. ಅದಕ್ಕೆ ಸರಿಯಾಗಿ ಅನುಷಾ ಕೂಡಾ ಆ ಪಾತ್ರಕ್ಕೆ ಹೊಂದಿಕೊಂಡಿದ್ದರು. ಹಾಗೆ ನೋಡಿದರೆ ಅನುಷಾ ರಿಯಲ್ ಕ್ಯಾರೆಕ್ಟರ್‌ಗೂ ಪಾತ್ರಕ್ಕೂ ಸಂಬಂಧವಿಲ್ಲ. ಏಕೆಂದರೆ ಅನುಷಾ ಪಕ್ಕಾ ಸಿಟಿ ಹುಡುಗಿ. ಬೆಂಗಳೂರಿನಲ್ಲಿ ಬೆಳೆದ ಅನುಷಾಗೆ ಹಳ್ಳಿಯ ಕಲ್ಪನೆ ಅಷ್ಟೊಂದಿಲ್ಲ. ಹೀಗಿರುವಾಗ ಕೆರಿಯರ್‌ನ ಮೊದಲ ಪಾತ್ರವೇ ಹಳ್ಳಿ ಪಾತ್ರ. ಆದರೆ, ಅನುಷಾ ಮಾತ್ರ ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದರಿಂದ ಪಾತ್ರಕ್ಕೆ ಒಗ್ಗಿಕೊಳ್ಳಲು ಹೆಚ್ಚು ಕಷ್ಟವಾಗಲಿಲ್ಲವಂತೆ. ಆ ಧಾರಾವಾಹಿ ಮೂಲಕ ಅನುಷಾಗೆ ಬ್ರೇಕ್ ಸಿಕ್ಕಿದ್ದು ಸುಳ್ಳಲ್ಲ. ಹೋದಲ್ಲೆಲ್ಲಾ ಜನ ಗುರುತು ಹಿಡಿದು ಮಾತನಾಡಿಸುವ ಮೂಲಕ ಅನುಷಾಗೆ ಮೊದಲ ಧಾರಾವಾಹಿಯಲ್ಲೇ ಬ್ರೇಕ್ ಸಿಕ್ಕ ಖುಷಿ ಇದೆ. “ಗೋಕುಲದಲ್ಲಿ ಸೀತೆ’ ಧಾರಾವಾಹಿಯಲ್ಲಿ ನಟಿಸಿದ್ದು ಅನುಷಾಗೆ ಎಲ್ಲಾ ವಿಷಯದಲ್ಲೂ ಪ್ಲಸ್ ಆಯಿತಂತೆ. ಸಂಪೂರ್ಣ ಹೊಸಬರ ತಂಡವಾದ “ಸೋಡಾಬುಡ್ಡಿ’ಯಲ್ಲಿ ಪರಿಚಿತ ಮುಖವಾಗಿ ಇದ್ದವರು ಅನುಷಾ. ಅವರ ಧಾರಾವಾಹಿ ನೋಡಿ ಇಷ್ಟಪಟ್ಟವರು ಸಿನಿಮಾ ನೋಡಿ ಕೂಡಾ ಖುಷಿಯಾಗಿದ್ದಾರಂತೆ. ಈಗಾಗಲೇ ಅನುಷಾಗೆ ಎರಡು ಸಿನಿಮಾಗಳಿಂದ ಆಫರ್ ಬಂದಿದೆ. ಆದರೆ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇರುವ ಸಿನಿಮಾಗಳಿಗಾಗಿ ಎದುರು ನೋಡುತ್ತಿದ್ದಾರೆ. “ನನಗೆ ಯಾವ ಥರಾದ ಪಾತ್ರವಾದರು ಓಕೆ. ಯಾವುದೋ ಒಂದೇ ಶೇಡ್‌ನ ಪಾತ್ರಗಳಲ್ಲಿ ಗುರುತಿಸಿಕೊಳ್ಳುವ ಆಸೆ ನನಗಿಲ್ಲ. ನಟನೆಗೆ ಅವಕಾಶವಿದ್ದು, ಜನರಿಗೆ ಹತ್ತಿರವಾಗುವಂತಹ ಪಾತ್ರಗಳಲ್ಲಿ ನಟಿಸಬೇಕೆಂಬುದು ನನ್ನ ಆಸೆ’ ಎನ್ನುವ ಅನುಷಾ ಈಗ ಅಂತಹ ಪಾತ್ರಗಳ ತಲಾಶ್‌ನಲ್ಲಿದ್ದಾರೆ. ಅಂದಹಾಗೆ, ಅನುಷಾ ತಂಗಿ ಕೂಡಾ ನಟಿ. ಮಹೇಶ್ ಬಾಬು ನಿರ್ದೇಶಿಸುತ್ತಿರುವ “ಕ್ರೇಜಿಬಾಯ್’ ಸಿನಿಮಾದಲ್ಲಿ ಅನುಷಾ ತಂಗಿ ನಟಿಸುತ್ತಿದ್ದಾರೆ. “ನಮ್ಮಲ್ಲಿ ಸ್ಪರ್ಧೆಯಿಲ್ಲ. ಇಬ್ಬರಲ್ಲಿ ಯಾರಿಗೆ ಒಳ್ಳೆಯ ಅವಕಾಶ ಸಿಕ್ಕರು ಖುಷಿಯೇ’ ಎನ್ನುತ್ತಾರೆ. ಬರಹ: ರವಿಪ್ರಕಾಶ್ ರೈ; ಚಿತ್ರಗಳು: ಮನು ಮತ್ತು ಸಂಗ್ರಹ