Advertisement

ಗೋಕುಲ ಸಯಾನ್‌ ವತಿಯಿಂದ ಆದಿ ಶಂಕರಾಚಾರ್ಯರ ಜಯಂತ್ಯುತ್ಸವ

05:04 PM May 04, 2017 | Team Udayavani |

ಮುಂಬಯಿ: ಗೋಕುಲ ಸಯಾನ್‌ ಇದರ ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ ಗೋಕುಲ ವತಿಯಿಂದ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಜಯಂತ್ಯುತ್ಸವವು ಬಿಎಸ್‌ಕೆಬಿ ಅಸೋಸಿಯೇಶನ್‌ ಮತ್ತು ಶ್ರೀ  ಸುಬ್ರಹ್ಮಣ್ಯ ಸೇವಾ ಸಂಘದ ಸಹಭಾಗಿತ್ವದಲ್ಲಿ ನೆರೂಲ್‌ನ ಆಶ್ರಯ ಸಭಾಗೃಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಎ. 30 ರಂದು ನಡೆಯಿತು.

Advertisement

ಬಾಲಾಲಯ ಶ್ರೀ ಕೃಷ್ಣ ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ  ಬೆಳಗ್ಗೆ ನಿತ್ಯಪೂಜೆಯ ಅನಂತರ   ಶ್ರೀ ಶಂಕರ ಭಗವತ್ಪಾದರ ಭಾವಚಿತ್ರವನ್ನು  ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು.  ಉಡುಪಿಯಿಂದ  ಆಗಮಿಸಿದ ಬ್ರಹ್ಮಶ್ರೀ ವಾಗೀಶ ಶಾಸ್ತ್ರಿಯವರ ಪೌರೋಹಿತ್ವದಲ್ಲಿ  ಪುಣ್ಯಾಹ ವಾಚನ, ಪಂಚಗವ್ಯ,  ಗಣಹೋಮ, ವಾಗೀಶ್ವರಿ ಸರಸ್ವತಿ  ಹವನ,  ರುದ್ರಾಭಿಷೇಕ, ಶಂಕರಾಚಾರ್ಯರ  ಪೂಜೆ ಮತ್ತು ನಾಮಾರ್ಚನೆ ಮುಂತಾದ ಧಾರ್ಮಿಕ ಕೈಂಕರ್ಯಗಳು   ವೇದಮೂರ್ತಿ ಪ್ರತಾಪ್‌ ರಾವ್‌ ಹಾಗೂ  ನಾಗೇಶ್‌ ರಾವ್‌  ಅವರ ಸಹಯೋಗದಿಂದ ನೆರವೇರಿತು.

ಧಾರ್ಮಿಕ ಪೂಜಾ ಕೈಂಕರ್ಯಗಳಲ್ಲಿ ಅಮಿತ್‌  ಜನಾರ್ದನ್‌  ರಾವ್‌  ಮತ್ತು   ಅಮಿತಾ ರಾವ್‌,  ಸದಾಶಿವ ರಾವ್‌ ಮತ್ತು  ಮಮತಾ ರಾವ್‌, ಎಸ್‌.  ಸಿ. ರಾವ್‌ ಮತ್ತು  ಜ್ಞಾನಸುಂದರಿ ರಾವ್‌ ಹಾಗೂ ಯುಆರ್‌ ರಾವ್‌  ಮತ್ತು  ಇಂದ್ರಾಣಿ ರಾವ್‌  ದಂಪತಿಗಳು ಪಾಲ್ಗೊಂಡಿದ್ದರು. ಗೋಕುಲ ಕಲಾವೃಂದ ಭಜನಾ ಮಂಡಳಿಯಿಂದ ಆದಿ ಶಂಕರಾಚಾರ್ಯ ವಿರಚಿತ ಸ್ತೋತ್ರಗಳ ಪಠನ ಹಾಗೂ ಭಜನೆ  ಜರಗಿತು.  

ಹವನದ ಪೂರ್ಣಾಹುತಿಯಾದ ಅನಂತರ ನಡೆದ ಅಷ್ಟಾವಧಾನ ಸೇವೆಯಲ್ಲಿ  ಪುರೋಹಿತ ವರ್ಗದವರಿಂದ ವೇದ ಘೋಷ, ಇಂದ್ರಾಣಿ ರಾವ್‌ ಅವರಿಂದ  ಸಂಗೀತ,  ಪ್ರಿಯಾಂಜಲಿ ರಾವ್‌ ಅವರಿಂದ ನೃತ್ಯ ಸೇವೆಯ ಅನಂತರ ಸರ್ವವಾದ್ಯ ಸೇವೆಗಳು ಜರಗಿದವು. ಬ್ರಹ್ಮಶ್ರೀ ವಾಗೀಶ್‌ ಶಾಸ್ತ್ರಿಯವರು ಶ್ರೀ ಶಂಕರರ ಆಧ್ಯಾತ್ಮ ತತ್ವಗಳ ಬಗ್ಗೆ ಉಪನ್ಯಾಸ ನೀಡಿದರು.  ತೀರ್ಥ ಪ್ರಸಾದ ವಿತರಣೆ ಹಾಗೂ ಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಕಾರ್ಯಕ್ರಮದಲ್ಲಿ  ಸಮಾಜ ಬಾಂಧವರು, ತುಳು-ಕನ್ನಡಿಗರು  ಹಾಗೂ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next