Advertisement

ಗೋಕರ್ಣ: 12ರಂದು ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ-ಸ್ವಾಮೀಜಿ

05:22 PM Sep 06, 2024 | Team Udayavani |

■ ಉದಯವಾಣಿ ಸಮಾಚಾರ 
ಗೋಕರ್ಣ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ 8 ಜನ ಮೃತಪಟ್ಟಿದ್ದು, ಮೂವರು ಇದುವರೆಗೂ ಪತ್ತೆಯಾಗಿಲ್ಲ. ಈ ಎಲ್ಲ ಘಟನೆಗಳಿಗೆ ಕಾರಣವಾಗಿರುವ ಎನ್‌ಎಚ್‌ಎಐ ಮತ್ತು ಐಆರ್‌ಬಿ ಕಂಪನಿ ಅಧಿಕಾರಿಗಳನ್ನು ಕೂಡಲೇ ಬಂಧಿಸಿ ಎಂದು ಒತ್ತಾಯಿಸಿ ಸೆ.12 ರಂದು ಬೆಳಗ್ಗೆ 10:30 ಕ್ಕೆ ಶರವಾತಿ ವೃತ್ತದಿಂದ ಪಾದಯಾತ್ರೆ ನಡೆಸಿ ಹೊನ್ನಾವರದ ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ನಾರಾಯಣಗುರು ಶಕ್ತಿಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ತಿಳಿಸಿದ್ದಾರೆ.

Advertisement

ಜು.16 ರಂದು ಶಿರೂರಿನಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು 8 ಜನ ಮೃತಪಟ್ಟಿದ್ದರು. ಗುಡ್ಡ ಗಂಗಾವಳಿ ನದಿಗೆ ಬಿದ್ದ ಪರಿಣಾಮವಾಗಿ ಇನ್ನೊಂದು ದಡದ ಉಳುವರೆಯ 6 ಮನೆಗಳನ್ನು ಸಂಪೂರ್ಣ ನಾಶಮಾಡಿ 30ಕ್ಕೂ ಅಧಿಕ ಮನೆಗಳು ಭಾಗಶಃ ಹಾನಿಗೊಂಡಿದ್ದವು. ಅಲ್ಲಿಯ ಕೃಷಿ ಭೂಮಿಯಲ್ಲಿ ಕಲ್ಲುಮಣ್ಣುಗಳು ಬಿದ್ದು ಭತ್ತದ ಸಸಿಗಳನ್ನು ನಾಶಪಡಿಸಿತ್ತು. ಇದೆಲ್ಲದಕ್ಕೂ ಚತುಷ್ಪಥ ಕಾಮಗಾರಿ ಕೈಗೊಂಡಿರುವ ಐಆರ್‌ಬಿ ಕಂಪನಿಯವರು ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿದ್ದರಿಂದಲೇ ಈ ಸ್ಥಿತಿ ಬಂದಿದೆ.

ಮೃತರ ಕುಟುಂಬಕ್ಕೆ 5 ಲಕ್ಷದಂತೆ ಹಣ ನೀಡಿ ಸರಕಾರ ಕೈತೊಳೆದುಕೊಂಡಿತು. ಇನ್ನು 6 ಮನೆಗಳು ಸಂಪೂರ್ಣ ನಾಶವಾಗಿದ್ದು, ಅವರಿಗೆ 1.20 ಲಕ್ಷ ನೀಡಿ ಈಗ ಅಧಿಕಾರಿಗಳು ಮತ್ತು  ಜನಪ್ರತಿನಿಧಿಗಳು ಮೌನವಾಗಿದ್ದಾರೆ. ಈ ದುರ್ಘ‌ಟನೆ ನಡೆದ ನಂತರ ಪ್ರಣವಾನಂದ ಸ್ವಾಮೀಜಿಯವರು ಘಟನಾ ಸ್ಥಳಕ್ಕೆ ಮತ್ತು ಮೃತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು.

ನೊಂದ ಸಂತ್ರಸ್ತ ಕುಟುಂಬದವರು ಬೆಂಗಳೂರು ಸೇರಿದಂತೆ ದೆಹಲಿಗೂ ಕರೆದುಕೊಂಡು ಹೋಗಿ ಅಲ್ಲಿಯ ಸಂಸದರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅಲ್ಲಿಯೂ ಕೂಡ ಸರಿಯಾದ ಸ್ಪಂದನೆ ಸಿಗದಿದ್ದರಿಂದ ಕೆಲದಿನಗಳ ಹಿಂದೆ ಕಾರವಾರ ಡಿಸಿ ಕಚೇರಿ ಎದುರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದರು. ಈಗ ಮತ್ತೆ ಪಾದಯಾತ್ರೆ ಹಾಗೂ ಕಚೇರಿ ಮುತ್ತಿಗೆ ಹಾಕಲು ಪ್ರಣವಾನಂದ ಸ್ವಾಮೀಜಿ ಮುಂದಾಗಿದ್ದು, ಈ ಹೋರಾಟದಲ್ಲಿ ಸಂತ್ರಸ್ತ ಕುಟುಂಬದವರು ಮತ್ತು ವಿವಿಧ ಸಂಘ ಸಂಸ್ಥೆಗಳು ಆಗಮಿಸುವಂತೆ ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next