Advertisement

ಗೋಕರ್ಣದಲ್ಲಿ ಅವೈಜ್ಞಾನಿಕ ಏಕಮುಖ ಸಂಚಾರ-ಆಕ್ಷೇಪ

07:45 PM Feb 18, 2021 | Team Udayavani |

ಹೊನ್ನಾವರ: ಜಗತ್ತಿನ ಏಕೈಕ ಮಹಾಬಲೇಶ್ವರನ ಆತ್ಮಲಿಂಗ ಹಾಗೂ ಗಣಪತಿಯ ಹತ್ತಿರ ಹೋಗಿ ಮುಟ್ಟಿ ಪೂಜಿಸುವ ಅವಕಾಶವಿರುವ ಕ್ಷೇತ್ರವೆಂದರೆ ಗೋಕರ್ಣ ಮಾತ್ರ. ಆದರೆ ಇಲ್ಲಿ ದೇವಾಲಯ ತಲುಪುವುದೇ ದುಸ್ತರವಾಗಿದೆ.  ಕಾರಣ ಇಷ್ಟೇ ಇಲ್ಲಿನ ಅವೈಜ್ಞಾನಿಕ ಏಕಮುಖ ಸಂಚಾರ ವ್ಯವಸ್ಥೆ.

Advertisement

ಬಸ್‌ಸ್ಟಾಂಡ್‌ನಿಂದ ರಥಬೀದಿ ಅರ್ಧದವರೆಗೆ ಕಾರಿನಲ್ಲಿ ಸಾಗಬಹುದು. ಅಲ್ಲಿಂದ ನೇರ ದೇವಸ್ಥಾನ ಕಾಣುತ್ತದೆ. ದೇವಸ್ಥಾನ ದಾಟಿದ ಕೂಡಲೇ ಕಡಲ ತೀರದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇದೆ. ಆದರೆ ಇಲ್ಲಿನ ಪೊಲೀಸರು ರಥಬೀದಿಯಿಂದಲೇ ಕಾರುಗಳನ್ನು ಊರು ಸುತ್ತಿ ದೇವಸ್ಥಾನದ ಎದುರು ಕಡಲತೀರಕ್ಕೆ ಬರುವ ಮಾರ್ಗ ತೋರಿಸುತ್ತಾರೆ. ಈ ಮಾರ್ಗದಲ್ಲಿ ಏಕಮುಖ ಸಂಚಾರವಿಲ್ಲ, ಹಾಗಂತ ಇಲ್ಲಿನ ರಥಬೀದಿ ಅಷ್ಟು ಅಗಲವೂ ಇಲ್ಲ. ಎದುರು ವಾಹನಗಳು ಬರುತ್ತಲೇ ಇರುತ್ತವೆ. ಇವುಗಳಿಂದ ತಪ್ಪಿಸಿಕೊಂಡು ಮೀನುಪೇಟೆ ದಟ್ಟಣೆ ದಾಟಿ ಕಡಲತೀರಕ್ಕೆ ಬರಬೇಕು. ದೇವಸ್ಥಾನದಲ್ಲಿ ಪೂಜೆ ಮಾಡಿ ಮರಳಿ ಕಾರು ಹತ್ತಿದರೆ ಪುನಃ ಏಕಮುಖ ಸಂಚಾರ ರಸ್ತೆಯಲ್ಲಿ ಬಸ್‌ಸ್ಟಾÂಂಡ್‌ ಹಾದು ಊರು ಸುತ್ತಿಕೊಂಡೇ ಹೊರಗೆ ಬರಬೇಕು.

ದೇವಸ್ಥಾನ ಮತ್ತು ಕೋಟಿತೀರ್ಥ ಬಹಳ ದೂರವೇನಲ್ಲ. ವಯಸ್ಸಾದವರು, ಅಂಗವಿಕಲರು ದೇವಸ್ಥಾನಕ್ಕೆ ಬಂದರೆ ಊರಿನ ಮೂರು ಪ್ರದಕ್ಷಿಣೆ ಹಾಕಬೇಕಾಗುತ್ತದೆ. ಅಲ್ಲಿಂದ ಕೋಟಿತೀರ್ಥಕ್ಕೆ ಹೋಗಲು ಆರು ಪ್ರದಕ್ಷಿಣೆ ಹಾಕಬೇಕು. ಈ ರೀತಿ ಸಂಚಾರ ಸುಗಮಗೊಳಿಸುವ ಕಾರಣ ಹೇಳಿ ದಿಕ್ಕುತಪ್ಪಿಸುವ ಕೆಲಸ ನಿತ್ಯ ನಡೆದಿದೆ.

ಒಂದೆರಡು ಕಡೆ ಪ್ಲಾಸ್ಟಿಕ್‌ ಬೋರ್ಡ್‌ ತಗಲಿಸಿದ್ದಾರೆ. ಇಲ್ಲವಾದರೆ ಹೊರಟಲ್ಲಿಯೇ ಬಂದು ಸೇರುವ ಸ್ಥಿತಿ ಇದೆ. ರಥಬೀದಿಯಿಂದ ನೇರ ದೇವಸ್ಥಾನಕ್ಕೆ ಹೋಗಿ ಭಕ್ತರನ್ನು ಇಳಿಸಿ, ಕಡಲತೀರದಲ್ಲಿ ಕಾರು ನಿಲ್ಲಿಸುವ ವ್ಯವಸ್ಥೆ ಮಾಡಿದ್ದರೆ, ಅಗಲವಾದ ರಥಬೀದಿಯಲ್ಲಿ ವಾಹನಗಳು ನಿಲ್ಲಲು ಕೊಡದೆ ಹೋಗಿ ಬರುವಂತೆ ಮಾಡಿದ್ದರೆ ಸಮಸ್ಯೆ ನಿವಾರಣೆಯಾಗುತ್ತಿತ್ತು.

ಈ ಊರಲ್ಲಿ ರಿಕ್ಷಾ, ಬೈಕ್‌ಗಳಿಗೆ ಯಾವ ಸಂಚಾರ ನಿಯಮವೂ ಅನ್ವಯವಾದಂತಿಲ್ಲ. ಊರು ಸುತ್ತಿ ಮರಳುವಾಗ ಗೋಕರ್ಣದ ತ್ಯಾಜ್ಯದ ಸರೋವರ, ಮಂದವಾಗಿ ಹರಿಯುವ ಹಳ್ಳದಂತಹ ತ್ಯಾಜ್ಯ ಪ್ರವಾಹ, ಊರ ಗಲೀಜು, ಎಲ್ಲವನ್ನೂ ಅನುಭವಿಸುತ್ತಲೇ ಬರಬೇಕು. ನಿತ್ಯ ಐದು ಸಾವಿರಕ್ಕೂ ಹೆಚ್ಚು, ವಿಶೇಷ ಸಂದರ್ಭಗಳಲ್ಲಿ ಹತ್ತು ಸಾವಿರದಿಂದ ಲಕ್ಷ ಜನ ಸೇರುವ ಗೋಕರ್ಣ ಕ್ಷೇತ್ರಕ್ಕೆ ಮಾಸ್ಟರ್‌ ಪ್ಲಾನ್‌ ಇಲ್ಲ. ಪಂಚಾಯತದ ಆದಾಯ ಯಾತಕ್ಕೂ ಸಾಲುವುದಿಲ್ಲ. ಕೇಂದ್ರ, ರಾಜ್ಯ ಸರ್ಕಾರಗಳು ಕುಂಭಮೇಳದಂತಹ ಕಾರ್ಯಕ್ರಮಕ್ಕೆ ನೂರಾರು ಕೋಟಿ ರೂ. ನೀಡುತ್ತವೆ. ಗೋಕರ್ಣದ ಅಭಿವೃದ್ಧಿಗೆ ಹತ್ತು ಪೈಸೆ ಕೊಡುವುದಿಲ್ಲ.

Advertisement

ಕುಡಿಯುವ ನೀರು, ವ್ಯವಸ್ಥಿತ ರಸ್ತೆ, ದೀಪ, ಒಳಚರಂಡಿ, ಇಂತಹ ವ್ಯವಸ್ಥೆಯನ್ನು ಗೋಕರ್ಣಕ್ಕೆ ಸರ್ಕಾರಗಳು ಮಾಡಿಕೊಡಬೇಕು. ಕರ್ನಾಟಕದಲ್ಲಿ ಉತ್ತರ ಕನ್ನಡದ ಪುಣ್ಯಕ್ಷೇತ್ರಗಳು ಅನಾಥ. ಸಂಚಾರ ವ್ಯವಸ್ಥೆ ಸಹಿತ ಎಲ್ಲ ವ್ಯವಸ್ಥೆಯನ್ನು ಗೋಕರ್ಣದಲ್ಲಿ ವೈಜ್ಞಾನಿಕವಾಗಿ ರೂಪಿಸಬೇಕಾಗಿದೆ. ನೂರಾರು ಕೋಟಿ ಬೇಕು. ಹೇಳುವವರೂ ಇಲ್ಲ, ಕೇಳುವವರೂ ಇಲ್ಲದಂತಾಗಿದೆ. ಉತ್ತರ ಭಾರತದ ಧಾರ್ಮಿಕ ಕ್ಷೇತ್ರ ಉತ್ಸವಗಳಿಗೆ ಕೇಂದ್ರ ಮತ್ತು ಆಯಾ ರಾಜ್ಯ ಸರಕಾರಗಳು ಧಾರಾಳವಾಗಿ ಹಣ ನೀಡುತ್ತವೆ.

ಹೊಸದಾಗಿ ಗುಜರಾತ್‌ನ ಪಟೇಲ ಸ್ಮಾರಕ,ರಾಜಕೀಯ ಪ್ರಾಮುಖ್ಯತೆಯ ರಾಮ ಮಂದಿರಗಳಿಗೆ ಹಣದ ಹೊಳೆ ಹರಿದಿದೆ. ಪ್ರಧಾನಿಯವರ ಕ್ಷೇತ್ರ ವಾರಾಣಸಿಯಲ್ಲೂ ಕಾರಿಡಾರ್‌ ನಿರ್ಮಾಣ, ಗಂಗಾ ಸ್ವತ್ಛತೆ ಎಂದು ಹಣದ ಹೊಳೆ ಹರಿದಿದೆ. ಅಷ್ಟೇ ಮಹತ್ವದ ದಕ್ಷಿಣ ಕಾಶಿ ಗೊಕರ್ಣ ಕ್ಷೇತ್ರವನ್ನು ಸಂಪೂರ್ಣನಿರ್ಲಕ್ಷಿಸಲಾಗಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next