Advertisement

ಗೋಕರ್ಣ “ಅಮೃತಾನ್ನ’

10:10 PM Oct 18, 2019 | Lakshmi GovindaRaju |

ಗೋಕರ್ಣ ದೇಗುಲದ ಅನ್ನಸಂತರ್ಪಣೆ, ಕರಾವಳಿ ಮತ್ತು ಮಲೆನಾಡಿನ ರುಚಿಯ ಸಮಾಗಮ ಅಂತಲೇ ಹೇಳಬಹುದು…

Advertisement

ಗೋಕರ್ಣದ ಮಹಾಬಲೇಶ್ವರನ ದೇವಾಲಯ ಅತಿಪುರಾತನ ಕಾಲದ್ದು. ಪ್ರಾಣಲಿಂಗ ಅಥವಾ ಆತ್ಮಲಿಂಗ ಎಂದು ಕರೆಯಲ್ಪಡುವ ಇಲ್ಲಿನ ಶಿವಲಿಂಗದ ದರ್ಶನ, ಕಾಶಿ ವಿಶ್ವನಾಥನ ದರ್ಶನಕ್ಕೆ ಸಮ ಎಂಬ ನಂಬಿಕೆಯೂ ಇದೆ. ಏಳು ಮುಕ್ತಿ ಕ್ಷೇತ್ರಗಳಲ್ಲಿ ಒಂದಾದ ಗೋಕರ್ಣದಲ್ಲಿ, ಸಮುದ್ರ ತೀರ ಇನ್ನೊಂದು ಸೆಳೆತ. ಗೋಕರ್ಣ ದೇಗುಲದ ಅನ್ನಸಂತರ್ಪಣೆ, ಕರಾವಳಿ ಮತ್ತು ಮಲೆನಾಡಿನ ರುಚಿಯ ಸಮಾಗಮ ಅಂತಲೇ ಹೇಳಬಹುದು. ವಿದೇಶಿ ಯಾತ್ರಿಕರಿಗೂ ಇಲ್ಲಿನ ಭೋಜನದ ರುಚಿ ಇಷ್ಟವಾಗಿದೆ.

ಇದು ಅಮೃತಾನ್ನ…: ಗೋಕರ್ಣದ ಪ್ರಸಾದ ಭೋಜನಕ್ಕೆ “ಅಮೃತಾನ್ನ’ ಎಂದೇ ಹೆಸರು. ನಿತ್ಯ 5 ಸಾವಿರ ಮಂದಿಗೆ ಇಲ್ಲಿ ಅನ್ನಸಂತರ್ಪಣೆ ನಡೆಯುತ್ತದೆ. ಗೋಕರ್ಣದ ಆಡಳಿತವನ್ನು ರಾಘವೇಶ್ವರ ಶ್ರೀಗಳು ವಹಿಸಿಕೊಂಡ ಮೇಲೆ ಇಲ್ಲಿ ಎಲ್ಲವೂ ಅಚ್ಚುಕಟ್ಟು. ಬಾಡಿಗೆ ಪಾತ್ರೆ ಪಡೆದು ಆರಂಭಿಸಲಾದ ಈ ಯೋಜನೆ, ಈಗ ಕಡಲತೀರದ ವಿಶಾಲ ತಾತ್ಪೂರ್ತಿಕ ಕಟ್ಟಡದಲ್ಲಿ ನಡೆಯುತ್ತಿದೆ. ಕಳೆದ 11 ವರ್ಷಗಳಲ್ಲಿ ಎಂದೂ, ಯಾವುದಕ್ಕೂ ಕೊರತೆಯಾಗಿಲ್ಲ. ಇದುವರೆಗೆ ಇಲ್ಲಿ 51,76,620ಕ್ಕೂ ಹೆಚ್ಚು ಯಾತ್ರಿಕರು ಪ್ರಸಾದ ಭೋಜನ ಸ್ವೀಕರಿಸಿದ ಅಧಿಕೃತ ದಾಖಲೆ ಇದೆ.

ಭಕ್ಷ್ಯ ಸಮಾಚಾರ
– ಅನ್ನ, ತರಕಾರಿ ಸಾಂಬಾರು, ಸಾರು, ಮಜ್ಜಿಗೆ ಮತ್ತು ಎರಡೂ ಹೊತ್ತು ಪಾಯಸ.
– ವಿಶೇಷ ಪೂಜೆ ಇದ್ದವರಿಗೆ ಉಪಾಹಾರ ವ್ಯವಸ್ಥೆ.
– ಶ್ರಾವಣ ಸೋಮವಾರಗಳಲ್ಲೂ ಲಘು ಉಪಾಹಾರ ಇರುತ್ತದೆ.
– ಕರಾವಳಿ- ಮಲೆನಾಡು ಶೈಲಿಯ ಹಿತವಾದ ಭೋಜನ.

ಬೃಹತ್‌ ಶೀತಲೀಕರಣ ಘಟಕ: 25 ಸಾವಿರ ಭಕ್ತರಿಗೆ ಅಡುಗೆಮಾಡಿ ಬಡಿಸುವಷ್ಟು ಪಾತ್ರೆಗಳನ್ನು ದಾನಿಗಳು ನೀಡಿದ್ದಾರೆ. ಸೆಲ್ಕೋ ಸೋಲಾರ್‌ನ 10- 10 ಅಡಿಯ ಶೀತಲೀಕರಣ ಘಟಕದಲ್ಲಿ ಕಾಯಿಕಡಿ, ತರಕಾರಿಗಳನ್ನು ಕಾಯ್ದಿಡಲಾಗುತ್ತದೆ. ಅಡುಗೆಗೆ ಮತ್ತು ಕುಡಿಯಲು ಶುದ್ಧೀಕರಿಸಿದ ನೀರನ್ನೇ ಬಳಸಲಾಗುತ್ತದೆ.

Advertisement

ಬಡಿಸುವ ಮೊದಲು ಪರೀಕ್ಷೆ: ಇಲ್ಲಿ ಅಡುಗೆ ಸಿದ್ಧವಾದ ಕೂಡಲೇ ನೇರವಾಗಿ ಅದನ್ನು ಭಕ್ತರಿಗೆ ಬಡಿಸುವುದಿಲ್ಲ. ದೇವಸ್ಥಾನದ ಆಡಳಿತಾಧಿಕಾರಿ ಜಿ.ಕೆ. ಹೆಗಡೆ ಅವರ ವ್ಯವಸ್ಥಿತ ನಿರ್ವಹಣೆ ಇಲ್ಲಿದ್ದು, ಬಡಿಸುವುದಕ್ಕೂ ಮೊದಲೇ ಇವರು ಪರೀಕ್ಷಿಸುತ್ತಾರೆ. ಇಲ್ಲವೇ ಭೋಜನಶಾಲೆಯ ಒಬ್ಬರು ಸಿಬ್ಬಂದಿ ಆಹಾರ ಸೇವಿಸುತ್ತಾರೆ.

ಸಾಮರಸ್ಯ ಭೋಜನ: “ಗೋಕರ್ಣಕ್ಕೆ ಬಂದವರು ಯಾರೂ ಹಸಿದು ಹೋಗಬಾರದು’ ಎಂಬುದು ಶ್ರೀಗಳ ಅಪೇಕ್ಷೆ. ಆದ್ದರಿಂದ ಅವರ ಆಶೀರ್ವಾದ ಹಾಗೂ ಮಹಾಬಲೇಶ್ವರನ ಕೃಪೆಯಿಂದ ನಿರಾತಂಕವಾಗಿ, ಅಮೃತಾನ್ನ ಸೇವೆ ನಡೆಯುತ್ತಿದೆ’ ಎನ್ನುತ್ತಾರೆ, ಇಲ್ಲಿನ ಬಾಣಸಿಗರು. ಗೋಕರ್ಣದ ಪರಂಪರೆಯಂತೆ ಪರಶಿವನ ಆತ್ಮಲಿಂಗವನ್ನು ಯಾರು ಬೇಕಾದರೂ ಸ್ಪರ್ಶಿಸಿ, ಅಭಿಷೇಕ ಮಾಡಿ ಪೂಜಿಸಬಹುದು. ಅದರಂತೆ, ಇಲ್ಲಿನ ಅನ್ನ ಸಂತರ್ಪಣೆಯಲ್ಲೂ ಅಂಥದ್ದೇ ಸಾಮರಸ್ಯವಿದೆ. ಯಾವುದೇ ಪಂಕ್ತಿಬೇಧವಿಲ್ಲ.

ಸಂಖ್ಯಾ ಸೋಜಿಗ
5000- ಭಕ್ತರಿಗೆ ನಿತ್ಯ ಅನ್ನಸಂತರ್ಪಣೆ
10- ಅಡಿಯ ಶೀತಲೀಕರಣ ಘಟಕ
16- ಬಾಣಸಿಗರಿಂದ ಅಡುಗೆ ತಯಾರಿ
30- ಸಿಬ್ಬಂದಿಯಿಂದ ಸ್ವತ್ಛತೆಗೆ ಸಹಕಾರ
51,76,620- ಇಲ್ಲಿಯ ತನಕ ಭೋಜನ ಸ್ವೀಕರಿಸಿದ ಭಕ್ತರ ಸಂಖ್ಯೆ

* ಜೀಯು ಭಟ್‌

Advertisement

Udayavani is now on Telegram. Click here to join our channel and stay updated with the latest news.

Next