ವರದಿ: ಬಸವರಾಜ ಭರಮಣ್ಣವರ
ಗೋಕಾಕ: ಅನಾರೋಗ್ಯ ಕಾರಣ ವೈದ್ಯರಾಗಿದ್ದ ತಂದೆಯನ್ನು ಕಳೆದುಕೊಂಡ ಮರುದಿನವೇ ತಂದೆಯ ಕ್ಲಿನಿಕ್‌ನಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಲ್ಲದೇ ಎರಡನೇ ದಿನವೇ ಕೋವಿಡ್ ಸೋಂಕಿತರ ಸೇವೆಗೆ ಹಾಜರಾಗುವ ಮೂಲಕ ವೃತ್ತಿಪರತೆ ಮೆರೆದಿದ್ದಾರೆ ಡಾ|ಸಂದೀಪ ದಂಡಿನ.
ಹೌದು. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ವಾಸಕೋಶ ತಜ್ಞರಾದ ಡಾ| ಸಂದೀಪ ದಂಡಿನ ಅವರು ತಂದೆ ಸಾವಿನ ಎರಡನೇ ದಿನವೇ ಕೋವಿಡ್ ಸೋಂಕಿತರ ಸೇವೆಗೆ ಮುಂದಾಗಿದ್ದಾರೆ. ಡಾ|ಸಂದೀಪ ಅವರ ತಂದೆ ಡಾ|ಲಕ್ಷ್ಮಣ ದಂಡಿನ ಅವರು ಗೋಕಾಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಲವು ವರ್ಷಗಳ ಹಿಂದೆ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಅಸು ನೀಗಿದರು. ತಂದೆ ಅಂತ್ಯಸಂಸ್ಕಾರ ನೆರವೇರಿಸಿದ ಮರುದಿನವೇ ತಂದೆಯ ಕ್ಲಿನಿಕ್‌ನಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಿದ್ದು, ಎರಡನೇ ದಿನವೇ ಕೋವಿಡ್ ಸೋಂಕಿತರ ಚಿಕಿತ್ಸೆ ನೀಡಲು ಕರ್ತವ್ಯಕ್ಕೆ ಹಾಜರಾಗುವ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿ ತೋರಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಅವರಿಗೆ ತಮ್ಮ ಅವಶ್ಯಕತೆ ಹೆಚ್ಚಿದೆ ಎಂದು ರೋಗಿಗಳ ಆರೈಕೆಗೆ ಮುಂದಾಗಿದ್ದಾರೆ ಡಾ|ಸಂದೀಪ. ಇವರ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.