ಯಳಂದೂರು: ಪ್ರತಿನಿತ್ಯ ಮಕ್ಕಳು ಶಾಲೆಗೆ ಬೈಕ್, ಕಾರು, ಸೈಕಲ್, ಬಸ್, ರೈಲುಗಳ ಮೂಲಕ ಹೋಗುವುದನ್ನು ಕೇಳಿದ್ದೀವಿ, ನೋಡಿದ್ದೀವಿ. ಆದರೆ ಕುದುರೆ ಮೂಲಕ ಹೋಗುವುದನ್ನು ನೋಡಿದ್ದೀರ, ಕೇಳಿದ್ದೀರ?
ಇಂಥದ್ದೊಂದು ವಿದ್ಯಮಾನ ತಾಲೂಕಿನ ಕಂದಹಳ್ಳಿಯಲ್ಲಿ ನಿತ್ಯ ನಡೆಯುತ್ತಿದೆ. ಕುದುರೆ ನಾಗೇಂದ್ರ ಎಂದೇ ಪ್ರಸಿದ್ಧಿಯಾದ ನಾಗೇಂದ್ರ ಅವರು ತಮ್ಮ ಮಕ್ಕಳಾದ ಸನ್ನಿಧಿ, ಸುದೀಪ್ ಅವರನ್ನು ಪ್ರತಿನಿತ್ಯ ಕುದುರೆ ಮೇಲೆ ಶಾಲೆಗೆ ಕರೆದುಕೊಂಡು ಹೋಗುತ್ತಾರೆ. ಆ ಸಮಯದಲ್ಲಿ ಶಾಲೆ ಬಿಟ್ಟಮಕ್ಕಳು ಇಲ್ಲವೇ ಶಾಲೆಗೆ ಹೋಗದೆ ಹಠ ಮಾಡುವ ಮಕ್ಕಳನ್ನು ಮನವೊಲಿಸಿ ಕುದುರೆ ಮೂಲಕ ಕರೆದುಕೊಂಡು ಹೋಗಿ ಮತ್ತೆ ಶಾಲೆ ಮೆಟ್ಟಿಲು ಹತ್ತುವಂತೆ ಮಾಡುತ್ತಿದ್ದಾರೆ.
ಪ್ರಾಣಿ ಪ್ರೀತಿಯಿಂದ ಕುದುರೆ ಸಾಕಿರುವ ನಾಗೇಂದ್ರ ಅವರು, ಶಾಲೆಗೆ ಹೋಗಲ್ಲ ಎನ್ನುವ ಮಕ್ಕಳನ್ನು ಪ್ರೀತಿಯಿಂದ ಕುದುರೆ ಮೇಲೆ ಕರೆದೊಯ್ಯುವ ಕೆಲಸಕ್ಕೆ ಗ್ರಾಮಸ್ಥರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ನಾಗೇಂದ್ರ ಅವರು ನಿತ್ಯವೂ ಸಮೀಪದ ಕಾರಾಪುರ ವಿರಕ್ತ ಮಠದ ನಿರಂಜನ ವಿದ್ಯಾಸಂಸ್ಥೆಗೆ ತನ್ನ ಮಕ್ಕಳು, ಸಂಬಂಧಿಕರ ಮಕ್ಕಳನ್ನು ಕುದುರೆ ಮೂಲಕವೇ ಕರೆದೊಯ್ಯುತ್ತಾರೆ. ಈ ವೇಳೆ ಶಾಲೆಗೆ ಹೋಗದಂತಹ ಮಕ್ಕಳ ಬಗ್ಗೆ ಮಾಹಿತಿ ಸಿಕ್ಕರೆ, ಆ ಮಕ್ಕಳನ್ನೂ ಶಾಲೆಗೆ ಕರೆದುಕೊಂಡು ಹೋಗುತ್ತಾರೆ.
ಪ್ರಾಣಿಗಳು ಎಂದರೆ ಅಚ್ಚುಮೆಚ್ಚು: ನಾಗೇಂದ್ರ ಅವರಿಗೆ ಬಾಲ್ಯದಿಂದಲೂ ಪ್ರಾಣಿಗಳ ಮೇಲೆ ತುಂಬಾ ಆಸಕ್ತಿ. ವಿವಿಧ ಜಾತಿಯ ನಾಯಿ, ಬಾತುಕೋಳಿ, ಪಾರಿವಾಳ, ಗಿಳಿ, ಮೊಲದ ಮರಿ, ಕೋಳಿ ಸೇರಿ ಪ್ರಾಣಿಗಳನ್ನು ಪೋಷಿಸುತ್ತಿದ್ದಾರೆ. ಅದಕ್ಕೆಂದೇ ಪ್ರತ್ಯೇಕವಾಗಿ ಕೊಠಡಿ ಸಹ ನಿರ್ಮಿಸಿದ್ದಾರೆ. ಏಳು ವರ್ಷದ ಹಿಂದೆ ಕುದುರೆ ಸಾಕುವ ಹಂಬಲದಿಂದ ಮೈಸೂರಿನ ರೇಸ್‌ಕೋರ್ಸ್‌ನಲ್ಲಿ ಒಂದು ಕುದುರೆ ತಂದು ಸಾಕುತ್ತಿದ್ದಾರೆ.
ಶಾಲೆಗೆ ಬರುವ ಮಕ್ಕಳು ಹಠ ಮಾಡಿದರೆ ಕುದುರೆ ಮೇಲೆ ಒಂದು ಸುತ್ತು ಕರೆದುಕೊಂಡು ಬರುವುದರಿಂದ ಮಕ್ಕಳು ಖುಷಿಯಾಗುವುದರ ಜತೆಗೆ, ಶಾಲೆಗೆ ಪ್ರತಿ ನಿತ್ಯ ಆಗಮಿಸುವುದಕ್ಕೆ ಹೆಚ್ಚು ಅನುಕೂಲವಾಗಿದೆ. ●
ಶಮಂತ್ ಮಣಿ, ಮುಖ್ಯಶಿಕ್ಷಕಿ, ನಿರಂಜನ್ ಕಾನ್ವೆಂಟ್ ಯಳಂದೂರು
● ಫೈರೋಜ್ ಖಾನ್