Advertisement

ಬುದ್ಧಿಶಕ್ತಿ ಹೆಚ್ಚಿಸಿಕೊಳ್ಳಲು ಹೋಗಿ ಪ್ರಾಣಬಿಟ್ಟ ವಿದ್ಯಾರ್ಥಿ

10:28 AM Oct 18, 2019 | Lakshmi GovindaRaju |

ವಿಜಯವಾಡ/ಬೆಂಗಳೂರು: ಮೆದುಳಿನ ಸಾಮರ್ಥ್ಯ ಹೆಚ್ಚಳಕ್ಕಾಗಿ ವಿಶೇಷ ಚಿಕಿತ್ಸೆ ನೀಡುವುದಾಗಿ ಹೇಳಿಕೊಂಡಿದ್ದ ನಕಲಿ ನಾಟಿ ವೈದ್ಯನ ಮಾತಿಗೆ ಮರುಳಾದ ಆಂಧ್ರಪ್ರದೇಶದ ಗುಂಟೂರಿನ ಹರನಾಥ್‌ (15) ಎಂಬ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಸಾವಿಗೀಡಾಗಿರುವ ಆತಂಕಕಾರಿ ಘಟನೆ ಆಂಧ್ರಪ್ರದೇಶದ ವಿಜಯವಾಡದ ಗವರ್ನರ್‌ ಪೇಟ್‌ ಪ್ರಾಂತ್ಯದಲ್ಲಿ ನಡೆದಿದೆ.

Advertisement

ಈತನ ಮಾತಿಗೆ ವಿದ್ಯಾರ್ಥಿಗಳು ಮಾತ್ರವಲ್ಲ ಅವರ ಪೋಷಕರೂ ಮರುಳಾಗಿದ್ದರು. ಹಾಗಾಗಿ, ಬೆಂಗಳೂರು, ಬಳ್ಳಾರಿ, ಕಡಪ ಹಾಗೂ ತೆಲಂಗಾಣದ ನಾನಾ ಜಿಲ್ಲೆಗಳಿಂದ ಹಲವಾರು ಪೋಷಕರು ಈತನಲ್ಲಿಗೆ ತಮ್ಮ ಮಕ್ಕಳನ್ನು ಚಿಕಿತ್ಸೆಗಾಗಿ ಕರೆ ತರುತ್ತಿದ್ದರು. ಇತ್ತೀಚೆಗೆ, 11 ಮಂದಿ ವಿದ್ಯಾರ್ಥಿಗಳು ಈತನ ಚಿಕಿತ್ಸೆಗೆ ಒಳಗಾಗಿದ್ದರು.

ಮೃತ ವಿದ್ಯಾರ್ಥಿಯ ಪೋಷಕರು ನೀಡಿದ ದೂರಿನ ಆಧಾರದಲ್ಲಿ ನಾಟಿ ವೈದ್ಯ ಎನ್ನಲಾಗಿರುವ ಭುವನೇಶ್ವರ ರಾವ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಈತ ಅಸಲಿಗೆ ಯಾವುದೇ ವೈದ್ಯಕೀಯ ಪದವಿ ಪಡೆದಿಲ್ಲದಿರುವುದು ತಿಳಿದುಬಂದಿದ್ದು, ತನಿಖೆ ಮುಂದುವರಿಸಲಾಗಿದೆ.

“ಏಷ್ಯಾ ನೆಟ್‌ ತೆಲುಗು’ ಜಾಲತಾಣದ ವರದಿಯ ಪ್ರಕಾರ, ಭುವನೇಶ್ವರ ರಾವ್‌ “ಯೂ ಟ್ಯೂಬ್‌’ ವಿಡಿಯೋಗಳ ಮೂಲಕ ವಿದ್ಯಾರ್ಥಿಗಳಿಗೆ ಪರಿಚಿತನಾಗಿದ್ದ. ತನ್ನ ನಾಟಿ ವೈದ್ಯಶಾಸ್ತ್ರದಿಂದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವುದರ ಜತೆಗೆ, ಬುದ್ಧಿಮಾಂದ್ಯರನ್ನೂ ಸರಿಪಡಿಸುವುದಾಗಿ ಈತ ವಿಡಿಯೋಗಳಲ್ಲಿ ಹೇಳಿಕೊಂಡಿದ್ದ.

ಚಿಕಿತ್ಸೆ ಹೇಗೆ?: ವಿಜಯವಾಡದ ಗವರ್ನರ್‌ ಪೇಟ್‌ನಲ್ಲಿನ ಲಾಡ್ಜೊಂದರಲ್ಲಿ ಬಾಡಿಗೆಗೆ ಪಡೆಯಲಾದ ಮೂರು ಕೊಠಡಿಗಳಲ್ಲಿ ಈತನ ಚಿಕಿತ್ಸೆ ನಡೆಯುತ್ತಿದ್ದವು. ಚಿಕಿತ್ಸೆಗಾಗಿ ನೋಂದಾಯಿಸಲ್ಪಟ್ಟ ವಿದ್ಯಾರ್ಥಿಗಳು 15 ದಿನ ಲಾಡ್ಜ್ನಲ್ಲಿ ತಂಗಬೇಕಿತ್ತು. ಚಿಕಿತ್ಸೆ ಆರಂಭವಾದ ದಿನದಿಂದ ಚಿಕಿತ್ಸೆ ಮುಗಿಯುವವರೆಗೆ ವಿದ್ಯಾರ್ಥಿಗಳು ಗಂಟೆಗೊಂದರಂತೆ ಭುವನೇಶ್ವರ ರಾವ್‌ ನೀಡುತ್ತಿದ್ದ ಮಾತ್ರೆಗಳನ್ನು ಸೇವಿಸಬೇಕಿತ್ತು. ಅದರ ಜತೆಗೆ, ಮಸಾಜ್‌ ಮಾಡಿಸಿಕೊಳ್ಳಬೇಕಿತ್ತು.

Advertisement

ಮೃತ ಹರನಾಥ್‌, ಹೊಟ್ಟೆ ನೋವು ಹಾಗೂ ಆ ಹಿನ್ನೆಲೆಯಲ್ಲಿ ಓದಿನ ಮೇಲೆ ಆಸಕ್ತಿ ಬರುತ್ತಿಲ್ಲ ಎಂಬ ಕಾರಣಕ್ಕಾಗಿ ಈತನಲ್ಲಿಗೆ ಚಿಕಿತ್ಸೆಗಾಗಿ ಬಂದಿದ್ದ. ಈತನಿಗೂ ಗಂಟೆಗೊಂದು ಮಾತ್ರೆ ಹಾಗೂ ಮಸಾಜ್‌ ಚಿಕಿತ್ಸೆ ನೀಡಲಾಗುತ್ತಿತ್ತು.  ಚಿಕಿತ್ಸೆಯ ಎರಡನೇ ದಿನ, ಭುವನೇಶ್ವರ ರಾವ್‌ ಮಸಾಜ್‌ ಮಾಡುತ್ತಿದ್ದಾಗಲೇ ಹರನಾಥ್‌ ಕುರ್ಚಿಯ ಮೇಲೆ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ.

ಅಲ್ಲೇ ಇದ್ದ ಆತನ ಹೆತ್ತವರು ಅದನ್ನು ಗಮನಿಸಿ, ವೈದ್ಯರಿಗೆ ತಿಳಿಸಿದರೂ ಆತ ಏನೂ ಆಗಿಲ್ಲ ಬಿಡಿ ಎನ್ನುತ್ತಾ ಮಸಾಜ್‌ ಮುಂದುವರಿಸಿದ್ದನೆಂದು ಹೇಳಲಾಗಿದೆ. ಅದೇ ಹೊತ್ತಿಗೆ, ಹರನಾಥ್‌ ಜತೆಗೆ ಚಿಕಿತ್ಸೆ ಪಡೆಯುತ್ತಿದ್ದ ಇತರ 4 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ. ಹಾಗಾಗಿ, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಹರನಾಥ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಚಿಕಿತ್ಸೆಯಿಂದ ಬುದ್ಧಿಮತ್ತೆ ಹೆಚ್ಚಾಗುತ್ತಾ?: ವೈಜ್ಞಾನಿಕವಾಗಿ ನಿರೂಪಿಸಲ್ಪಟ್ಟ ಯೋಗ, ಧ್ಯಾನದಂಥ ಮಾನಸಿಕ, ದೈಹಿಕ ತರಬೇತಿಗಳಿಂದ ಮೆದುಳಿನ ಕಾರ್ಯಕ್ಷಮತೆಯನ್ನು ಹಂತಹಂತವಾಗಿ ಹೆಚ್ಚಿಸಬಹುದು. ಇದಕ್ಕೆ ನಮ್ಮ ನಿತ್ಯ ಜೀವನ ಕ್ರಮ, ಉತ್ತಮ ಅಭ್ಯಾಸಗಳು, ಆಹಾರ ಪ್ರಮುಖ ಪಾತ್ರ ವಹಿಸುತ್ತವೆ.

ಆಧುನಿಕ ಚಿಕಿತ್ಸಾ ವಿಧಾನಗಳೂ ಚಾಲ್ತಿಯಲ್ಲಿವೆಯಾದರೂ ತಜ್ಞ ವೈದ್ಯರ ಸಲಹೆಯಿದ್ದಲ್ಲಿ ಮಾತ್ರ ಅವನ್ನು ಪಡೆಯಬಹುದು. ಆದರೆ, ಮಾತ್ರೆಗಳು, ಟಾನಿಕ್‌ನಿಂದ ಕೆಲವೇ ದಿನಗಳಲ್ಲಿ ಸೂಪರ್‌ ಕಂಪ್ಯೂಟರ್‌ ಮಾದರಿಯಲ್ಲಿ ಬುದ್ಧಿ ಹೆಚ್ಚುತ್ತದೆ ಎಂಬಂಥ ಜಾಹೀರಾತುಗಳು ಇಂದಿನ ಯುವಕರ ದಾರಿ ತಪ್ಪಿಸುತ್ತಿವೆ ಎನ್ನುತ್ತಾರೆ ವೈದ್ಯರು.

Advertisement

Udayavani is now on Telegram. Click here to join our channel and stay updated with the latest news.

Next