Advertisement

ಗೋಹತ್ಯೆ ನಿಷೇಧ ಕಾಯ್ದೆ: ಹೈಕೋರ್ಟ್‌ ಆದೇಶ ಸ್ವಾಗತಾರ್ಹ: ಪ್ರಭು ಚವ್ಹಾಣ್‌

09:08 PM Apr 19, 2022 | Team Udayavani |

ಬೆಂಗಳೂರು: ಗೋಹತ್ಯೆ ನಿಷೇಧ (ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020) ಕಾಯ್ದೆಯ ಸೆಕ್ಷನ್‌ 5 ಅಡಿಯಲ್ಲಿ ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯವು ಅನುಮತಿಸಿ ಆದೇಶ ನೀಡಿರುವ ತೀರ್ಪು ಸ್ವಾಗತರ್ಹವಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಹೇಳಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಟಕಣೆ ಹೊರಡಿಸಿರುವ ಅವರು, ರಾಜ್ಯ ಉಚ್ಚ ನ್ಯಾಯಾಲಯ ಗೋಹತ್ಯೆ ನಿಷೇಧ ಕಾಯ್ದೆಯ ಅನುಷ್ಠಾನ ವಿಚಾರದಲ್ಲಿ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಇದನ್ನು ನಾವೆಲ್ಲರೂ ಗೌರವಿಸಿ, ಪಾಲಿಸಬೇಕು ಎಂದಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್‌ ಆರಿಫ್ ಜಮೀಲ್‌ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್‌.ಆರ್‌ ಕೃಷ್ಣಕುಮಾರ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ಇದೇ ವೇಳೆ, ನಿಯಮ ಜಾರಿಯು ಅರ್ಜಿ ಕುರಿತಂತೆ ನ್ಯಾಯಾಲಯ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿರುವುದನ್ನು ಎಲ್ಲರೂ ಸೌಹಾರ್ದದಿಂದ ಮತ್ತು ಪರಸ್ಪರ ಗೌರವದಿಂದ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಯಾವುದೇ ನಿರ್ದಿಷ್ಟ ಧರ್ಮದವರಾಗಲಿ ಪೂಜನೀಯ ಗೋಮಾತೆಯನ್ನು ಸಂರಕ್ಷಣೆ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎನ್ನುವುದನ್ನು ಅರಿತು ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ವಿಚಾರವನ್ನು ನ್ಯಾಯಾಲಯವು ಆಳವಾಗಿ ಅಧ್ಯಯನ ಮಾಡಿ ಸರಿಯಾದ ತೀರ್ಪು ನೀಡಿದೆ. ಎಲ್ಲರಿಗೂ ಅಮೃತ ನೀಡುತ್ತಿರುವ ಗೋವು ರಕ್ಷಣೆಯಾಗಬೇಕು. ಗೋವು ಜಾಗೃತಿಯಿಂದ ನಾಡು, ಜನತೆ ಒಂದುಗೂಡಲು ಸಾಧ್ಯವಾಗುತ್ತದೆ. ಗೋವಿನ ಹಾಲು ಕುಡಿಯುವವರು ಗೋ ಮಾತೆ ಸೇವೆಗೆ ಕಟಿಬದ್ಧರಾಗಬೇಕು. ಎಲ್ಲರ ತಾಯಿಯಾದ ಗೋ ಮಾತೆಯ ಸೇವೆ ದೇಶ ಕಲ್ಯಾಣಕ್ಕೆ ಪೂರಕವಾಗಿದೆ ಎಂದು ಪ್ರಭು ಚವ್ಹಾಣ್‌ ಬಣ್ಣಿಸಿದ್ದಾರೆ.

Advertisement

ಗೋವು ಪ್ರಾಣಿಯಲ್ಲ, ರಾಷ್ಟ್ರದ ಸಂಪತ್ತು. ಭಾರತೀಯ ಪರಂಪರೆಯಲ್ಲಿ ಗೋವುಗಳಿಗೆ ದೈವಿಕ ಸ್ಥಾನ ನೀಡಲಾಗಿದೆ. ಪೊಲೀಸ್‌ ಹಾಗೂ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳು ಸರ್ಕಾರದ ಆದೇಶ ಎತ್ತಿಹಿಡಿದಿರುವ ಹೈಕೋರ್ಟ್‌ ತೀರ್ಪುನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸದಾ ಜಾಗೃತರಾಗಿರಬೇಕೆಂದು ಪ್ರಭು ಚವ್ಹಾಣ್‌ ಸೂಚಿಸಿದ್ದಾರೆ.

ಗೋಹತ್ಯೆ ಕಾಯ್ದೆಯ ಸೆಕ್ಷನ್‌ 5 ಪ್ರಕಾರ, ಯಾವುದೇ ವ್ಯಕ್ತಿ ಯಾವುದೇ ರೀತಿಯಲ್ಲೂ ರಾಜ್ಯದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಲ್ಲುವ ಉದ್ದೇಶಕ್ಕೆ ಜಾನುವಾರುಗಳನ್ನು ಸಾಗಿಸಬಾರದು ಅಥವಾ ಸಾಗಣೆಗೆ ಅವಕಾಶ ಮಾಡಿಕೊಡಬಾರದು. ನಿಯಮ ಉಲ್ಲಂಘಿಸಿ ಸಾಗಣೆ ಮಾಡಿದರೆ ಅದು ಅಪರಾಧ ಕೃತ್ಯವಾಗಲಿದೆ. ಆದರೆ, ಕೃಷಿ ಮತ್ತು ಪಶುಸಂಗೋಪನೆ ಉದ್ದೇಶಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರ ನಿಗದಿಪಡಿಸಿರುವ ನಿಯಮಗಳ ಅನುಸಾರ ಜಾನುವಾರು ಸಾಗಣೆ ಅಪರಾಧ ಕೃತ್ಯವಾಗುವುದಿಲ್ಲ ಎಂದು ಪ್ರಭು ಚವ್ಹಾಣ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next