ಬೆಂಗಳೂರು: ಸಮಾಜದಲ್ಲಿ ಶಾಂತಿ, ಸಮಾನತೆ, ಜ್ಯಾತ್ಯತೀತತೆ ಬಯಸದ ಬಿಜೆಪಿ ನಾಯಕರಿಗೆ ಗೋಡ್ಸೆ ಚಿಂತನೆಗಳು ಮಾದರಿಯಾಗಿವೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ತಿಳಿಸಿದರು.
ಬಿಜೆಪಿ, ಆರ್‌ಎಸ್‌ಎಸ್‌ನವರು ಸಮಾಜದಲ್ಲಿ ವಿಷ ಹರಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಅದಕ್ಕೆ ಮುಖ್ಯವಾಗಿ ಸಮಾಜದಲ್ಲಿ ಜಾತಿ, ಧರ್ಮ ಭೇದಭಾವ ಮಾಡುವಂತಹ, ದೇಶದ ಸಂಪತ್ತು ಕೆಲವೇ ವರ್ಗಗಳಿಗೆ ಮಾತ್ರ ಮೀಸಲಿಡುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಯುವ ಜನತೆಯನ್ನೇ ಗುರಿಯಾಗಿಸಿಕೊಂಡಿರುವ ಬಿಜೆಪಿ ಹಾಗೂ ಆರ್‌ಎಸ್‌ಎಸ್, ಅವರ ಮೂಲಕ ಹಸಿ ಸುಳ್ಳುಗಳನ್ನು ಸಮಾಜದ ಮೇಲೆ ಹೇರುತ್ತಿವೆ. ಹೀಗಾಗಿ ಯುವಜನತೆ ಎಚ್ಚೆತ್ತು, ಆರ್‌ಎಸ್‌ಎಸ್ ಕಾರ್ಯಚಟುವಟಿಕೆಗಳಿಂದ ದೂರ ಉಳಿಯಬೇಕು. ಇನ್ನು ಗೋಡ್ಸೆ ತಾನು ಬರೆದ ಪುಸ್ತಕದಲ್ಲಿ ಗಾಂಧಿ, ಮುಹಮ್ಮದೀಯರ ಪರ ಇದ್ದಿದ್ದರಿಂದ ಅವರನ್ನು ಕೊಲೆ ಮಾಡಿದೆ ಎಂದು ಬರೆದುಕೊಂಡಿದ್ದಾನೆ. ಆದರೆ, ಇದರಲ್ಲಿ ಸತ್ಯ ಇಲ್ಲ. ಸುಳ್ಳು ಮಾಹಿತಿ ಮೂಲಕ ಇತಿಹಾಸವನ್ನು ಬದಲಾಯಿಸುವುದು ಸರಿಯಲ್ಲ ಎಂದರು.
ರಂಗಕರ್ಮಿ ಪ್ರಸನ್ನ ಹೆಗ್ಗೋಡು ಮಾತನಾಡಿ, ಗಾಂಧಿ ಹಾಗೂ ಗೋಡ್ಸೆ ಇಬ್ಬರೂ ರಾಮನ ಭಕ್ತರೇ. ಆದರೂ ಗೋಡ್ಸೆ ಗಾಂಧಿಯನ್ನು ಕೊಂದ. ರಾಮ ರಾಜ್ಯದ ಕುರಿತು ಇಬ್ಬರ ಕಲ್ಪನೆ ಭಿನ್ನವಾಗಿತ್ತು. ಗಾಂಧಿಯವರದ್ದು ಗ್ರಾಮಾಭಿವೃದ್ಧಿ ರಾಮ ರಾಜ್ಯ ಕಲ್ಪನೆಯಾದರೆ, ಗೋಡ್ಸೆಯದ್ದು ಪುರೋಹಿತಶಾಹಿ ರಾಮ ರಾಜ್ಯ ಕಲ್ಪನೆಯಾಗಿತ್ತು. ಹೀಗಾಗಿ, ನಾವು ಯಾವ ಕಲ್ಪನೆ ಇಂದು ನಮ್ಮ ದೇಶಕ್ಕೆ ಅವಶ್ಯಕ ಎಂದುದನ್ನು ಅರ್ಥಮಾಡಿಕೊಂಡು ಮುಂದೆ ಸಾಗಬೇಕೇ ಹೊರತು, ಗಾಂಧಿ ಮೂರ್ತಿ ಧ್ವಂಸ, ಅವಹೇಳನಕಾರಿ ಮಾತು, ವಿರೋಧಿ ನಡೆಯಿಂದಲ್ಲ ಎಂದು ತಿಳಿಸಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ. ಕೃಷ್ಣ ಮಾತನಾಡಿ, ಕೆಲವು ಧಾರ್ಮಿಕ ಮೂಲಭೂತವಾದಿಗಳು ಗಾಂಧೀಜಿಯ ಕುರಿತು ಅವಹೇನಕಾರಿಯಾಗಿ ಮಾತನಾಡುವ ಮೂಲಕ ಗಾಂಧಿಯನ್ನು ಸಮಾಜದಿಂದ ಮರೆಮಾಚಲು ವಿಫಲ ಪ್ರಯತ್ನ ನಡೆಸುತ್ತಿದ್ದಾರೆ. ಯುವಜನತೆ ಗಾಂಧೀಜಿ ಬದುಕನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ದೇಶಕ್ಕಾಗಿ ಅವರು ಮಾಡಿದ ಕಾರ್ಯಗಳ ಕುರಿತು ಗಂಭೀರ ಅಧ್ಯಯನ ನಡೆಸಬೇಕು ಎಂದು ಸಲಹೆ ನೀಡಿದರು.
Advertisement
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ಗಾಂಧಿ ಭವನದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ‘ಸಬ್ ಕೋ ಸನ್ಮತಿ ದೇ ಭಗವಾನ್’ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ನಾಥೂರಾಮ್ ಗೋಡ್ಸೆ ಗಾಂಧೀಜಿ ಅವರನ್ನು ಮಾತ್ರವಲ್ಲ, ಸತ್ಯವನ್ನೇ ಕಗ್ಗೊಲೆ ಮಾಡಿದ್ದಾನೆ. ಆದರೆ, ಇಂದು ಸಾಕಷ್ಟು ಮಂದಿ ಗೋಡ್ಸೆ ಪರ ವಕಾಲತ್ತು ವಹಿಸುತ್ತಿದ್ದಾರೆ. ಅವನ ತಪ್ಪನ್ನು, ಸಮರ್ಥನೆ ಮಾಡುತ್ತಾರೆ. ಅವರಲ್ಲಿ ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಾಯಕರೂ ಇದ್ದು, ಗೋಡ್ಸೆಯನ್ನು ವೈಭವೀಕರಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
Related Articles
Advertisement
ನಿವೃತ್ತ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್, ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ಗಾಂಧಿಭವನದ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಉಪಸ್ಥಿತರಿದ್ದರು.