ತಿರುವನಂತಪುರಂ: ಜಾಗತಿಕ ಹವಾಮಾನ ಬದಲಾವಣೆ ಮತ್ತದರ ಪರಿಣಾಮವನ್ನು ಸುಧಾರಿಸಲು ವಿಶ್ವರಾಷ್ಟ್ರಗಳ ಪ್ರಯತ್ನದ ನಡುವೆಯೇ ಭಾರತದ ದೇವರನಾಡು, ಕೇರಳದಲ್ಲಿ ಪರಿಸರ ಸಂರಕ್ಷಣೆಗೆ ಸರ್ಕಾರ ದೈವಿಕ ಮಾರ್ಗವೊಂದನ್ನು ಆಯ್ದುಕೊಂಡಿದೆ. ಅದರಿಂದ ಇನ್ನು ಮುಂದೆ ಕೇರಳಕ್ಕೆ ದೇಗುಲಕ್ಕೆ ಮಾತ್ರವಲ್ಲದೇ, ದೇಗುಲ ಪರಿಸರಕ್ಕೂ ಪ್ರಖ್ಯಾತವಾಗಲಿದೆ.
ಹೌದು, ಜೂ.5ರ ಪರಿಸರ ದಿನಾಚರಣೆ ನಿಮಿತ್ತ ಕೇರಳ ಸರ್ಕಾರ “ದೇವಂಕನಂ ಚಾರುಹರಿತಂ” ಎನ್ನುವ ಯೋಜನೆಯೊಂದನ್ನು ಘೋಷಿಸಿದೆ. ಅದರ ಪ್ರಕಾರ ಸರ್ಕಾರದ ನಿರ್ವಹಣೆಯಲ್ಲಿರುವ 5 ದೇವಸ್ವಂ ಮಂಡಳಿಗಳ ವ್ಯಾಪ್ತಿಗೆ ಒಳಪಡುವ ರಾಜ್ಯದ 3,000 ದೇಗುಲಗಳು ಇನ್ನುಮುಂದೆ ಪರಿಸರಕ್ಕೆ ಮಹತ್ತರ ಕೊಡುಗೆ ನೀಡಲಿವೆ. ಈ ಯೋಜನೆಯ ಪ್ರಕಾರ, ಈ ಎಲ್ಲಾ ದೇಗುಲಗಳಲ್ಲೂ ಇನ್ನು ಮುಂದೆ ಗಿಡಗಳನ್ನು ನೆಡಲಾಗುತ್ತದೆ. ದೇಗುಲಕ್ಕೆ ಸಂಬಂಧಿಸಿದ ಹಸಿರು ತೋಪುಗಳನ್ನು ಸಂರಕ್ಷಿಸುವುದರ ಜತೆಗೆ ಫಲ-ಪುಷ್ಪಗಳಿಗೂ ಲಭ್ಯವಾಗುವಂಥ ಗಿಡಗಳನ್ನು ನೆಟ್ಟು, ಪೋಷಿಸಿ ಹೊಸ ದೇಗುಲ ಬನಗಳನ್ನೂ ನಿರ್ಮಿಸಲು ಉದ್ದೇಶಿಸಲಾಗಿದೆ.
ಜತೆಗೆ ದೇವಾಲಯದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಲ್ಯಾಣಿಗಳನ್ನು ಸರ್ಕಾರದ ವೆಚ್ಚದಲ್ಲೇ ಪುನರುಜ್ಜೀವನಗೊಳಿಸಿ, ಮಳೆನೀರಿನ ಸಂಗ್ರಹಕ್ಕೆ ಸುತ್ತಲಿನ ಹಸಿರು ಪರಿಸರಕ್ಕೆ ಅಗತ್ಯವಿರುವ ನೀರನ್ನು ಪೂರೈಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.