Advertisement

ಮಣ್ಣು ತಿಂದು ಹಸಿವು ನೀಗಿಸಿಕೊಂಡ ಮಕ್ಕಳು ; ದೇವರ ಸ್ವಂತ ನಾಡಲ್ಲಿ ಇದೆಂತ ಬೀಭತ್ಸ!

09:40 AM Dec 04, 2019 | Hari Prasad |

ತಿರುವನಂತಪುರಂ: ಬಡತನದ ಕಾರಣದಿಂದ ಕೇರಳದ ಕುಟುಂಬವೊಂದರ ನಾಲ್ಕು ಮಕ್ಕಳು ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಮಣ್ಣು ತಿಂದ ಘಟನೆ ತಿರುವನಂತಪುರಂನಲ್ಲಿ ನಡೆದಿದೆ. ಇಲ್ಲಿನ ಸರಕಾರಿ ಕಾರ್ಯಾಲಯ ವ್ಯಾಪ್ತಿಯಿಂದ ಕೇವಲ ಒಂದು ಕಿ.ಮೀ ದೂರದಲ್ಲಿರುವ ಉಪ್ಲಮೂಡು ಸೇತುವೆಯ ಪಕ್ಕದಲ್ಲಿ ಟೆಂಟ್ ಕಟ್ಟಿಕೊಂಡು ವಾಸವಾಗಿರುವ ಶ್ರೀ ದೇವಿ ಎಂಬ ಮಹಿಳೆ ತನ್ನ ಮಕ್ಕಳ ಹಸಿವನ್ನು ನೀಗಿಸಲಾಗದ ನತದೃಷ್ಟೆ ತಾಯಿಯಾಗಿದ್ದಾಳೆ.

Advertisement

ಶ್ರೀದೇವಿಗೆ ಏಳು ಮತ್ತು ಐದು ವರ್ಷ ವಯಸ್ಸಿನ ಇಬ್ಬರು ಗಂಡು ಮಕ್ಕಳು ಮತ್ತು ನಾಲ್ಕು ಮತ್ತು ಎರಡು ವರ್ಷದ ಹೆಣ್ಣುಮಕ್ಕಳಿದ್ದಾರೆ. ಇದೂ ಸಾಲದೆಂಬಂತೆ ಎರಡು ನವಜಾತ ಶಿಶುಗಳೂ ಶ್ರೀದೇವಿಗಿದ್ದಾರೆ. ಈ ಆರು ಮಕ್ಕಳು ಇದೀಗ ನಾಗರಿಕ ಸಮಾಜದ ಮಾನವೀಯ ಪ್ರಜ್ಞೆಗೇ ಸವಾಲಾಗಿದ್ದಾವೆ.

ಈಕೆಯ ಪತಿ ಕೂಲಿ ಕಾರ್ಮಿಕನಾಗಿದ್ದು, ದುಡಿದ ಹಣವನ್ನೆಲ್ಲಾ ತನ್ನ ದುಶ್ಚಟಗಳಿಗೆ ಸುರಿಯುತ್ತಿದ್ದಾನೆ. ತನ್ನ ಗಂಡನ ದುಶ್ಚಟ ಮತ್ತು ಬೇಜವಾಬ್ದಾರಿತನದಿಂದ ಬೇಸತ್ತ ಶ್ರೀದೇವಿ ನೇರವಾಗಿ ಸ್ಥಳೀಯ ಅಧಿಕಾರಿಗಳಿಗೆ ಪತ್ರ ಬರೆದು ತನ್ನ ಮಕ್ಕಳು ತಮ್ಮ ಹಸಿವನ್ನು ನಿವಾರಿಸಿಕೊಳ್ಳಲು ನೆಲದ ಕೊಳಕು ಮಣ್ಣನ್ನು ತಿನ್ನುತ್ತಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾಳೆ.

ಈ ಘಟನೆ ಬೆಳಕಿಗೆ ಬರುತ್ತಿದಂತೆ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಎಚ್ಚೆತ್ತುಕೊಂಡಿದ್ದು, ಆ ನಾಲ್ಕು ಮಕ್ಕಳನ್ನು ವಸತಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ. ಮತ್ತು ತಾಯಿ ಹಾಗೂ ಆಕೆಯ ಇನ್ನೆರಡು ನವಜಾತ ಶಿಶುಗಳನ್ನು ಸರಕಾರ ನಡೆಸುತ್ತಿರುವ ಆಶ್ರಯ ಕೇಂದ್ರಕ್ಕೆ ಸೇರಿಸಲಾಗಿದೆ.

ಇದೀಗ ಈ ಹೃದಯವಿದ್ರಾವಕ ಘಟನೆ ಮಾಧ್ಯಮಗಳ ಮೂಲಕ ಬೆಳಕಿಗೆ ಬರುತ್ತಿದ್ದಂತೆಯೇ ರಾಜ್ಯದೆಲ್ಲೆಡೆಯಿಂದ ಈ ಬಡ ಕುಟುಂಬಕ್ಕೆ ನೆರವು ಹರಿದು ಬರಲಾರಂಭಿಸಿದೆ ಮತ್ತು ಹಲವಾರು ಸಂಘಟನೆಗಳು ಈ ಕುಟುಂಬಕ್ಕೆ ನೆರವಾಗುವ ಭರವಸೆಯನ್ನು ನೀಡಿವೆ.

Advertisement

ತಿರುವನಂತಪುರಂ ಮೇಯರ್ ಕೆ. ಶ್ರೀಕುಮಾರ್ ಅವರು ಈ ಮಕ್ಕಳ ತಾಯಿಗೆ ಕಾರ್ಪೊರೇಷನ್ ಕಛೇರಿಯಲ್ಲಿ ಕೆಲಸ ಕೊಡಿಸುವ ಮೂಲಕ ಕುಟುಂಬದ ಆದಾಯಕ್ಕೊಂದು ಶಾಶ್ವತ ವ್ಯವಸ್ಥೆ ಕಲ್ಪಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಈ ಕುಟುಂಬಕ್ಕೆ ಸೂಕ್ತ ನೆಲೆಯನ್ನು ಒದಗಿಸುವ ನಿಟ್ಟಿನಲ್ಲಿ ಲೈಫ್ ಮಿಷನ್ ನಡಿಯಲ್ಲಿ ನಿರ್ಗತಿಕರಿಗೆ ಸರಕಾರ ಕಟ್ಟಿಸಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ಮನೆಯೊಂದನ್ನು ನೀಡುವುದಾಗಿ ಶ್ರೀಕುಮಾರ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಆದರೆ ಈ ತನ್ನ ಪತ್ನಿ ಶ್ರೀದೇವಿಯ ಆರೋಪವನ್ನು ಆಕೆಯ ಪತಿ ನಿರಾಕರಿಸಿದ್ದು, ತಾನು ದಿನಗೂಲಿ ನೌಕರನಾಗಿದ್ದು ತನಗೆ ಸಾಧ್ಯವಾದಷ್ಟು ಮಟ್ಟಿಗೆ ತನ್ನ ಮಕ್ಕಳನ್ನು ನೋಡಿಕೊಳ್ಳುತ್ತಿರುವುದಾಗಿ ಆತ ಹೇಳಿದ್ದಾನೆ.

ಇನ್ನು ಈ ಘಟನೆಯ ಕುರಿತಾಗಿ ಪ್ರತಿಕ್ರಿಯಿಸಿದ ರಾಜ್ಯದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು ನಾಲ್ಕು ಮಕ್ಕಳು ಇದೀಗ ಸರಕಾರದ ರಕ್ಷಣೆಯಲ್ಲಿರುವುದರಿಂದ ಆ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಸರಕಾರವೇ ವಹಿಸಿಕೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next