Advertisement

ಬಿಡುವು ಜಾರಿಮಾಡು ದೇವರೆ…

03:45 AM May 10, 2017 | |

ಈ ಬೆಳಗು ಯಾಕಾದರೂ ಆಗುತ್ತೋ ಅಂತ ಗೊಣಗುತ್ತಲೇ ಏಳುತ್ತಾಳೆ ಅವಳು. ನಿಮಿಷವೂ ನಿಲ್ಲದೆ, ಆ ಗಡಿಯಾರದ ಮುಳ್ಳಿನ ಜೊತೆಗೇ ಓಡುತ್ತಾ ಮನೆಗೆಲಸದ ಜೊತೆ ಅಡುಗೆ, ತಿಂಡಿಗಳನ್ನು ತಯಾರಿಸುವುದರೊಳಗೇ ಯಜಮಾನರ ಸೈರನ್‌ ಬೇರೆ. “ಬೇಗ ರೆಡಿ ಆದ್ರೆ ನಿನ್ನ ಆಫೀಸಿಗೆ ಬಿಟ್ಟು ಹೋಗ್ತಿನಿ. ಇಲ್ಲಾಂದ್ರೆ ಬಸ್ಸೀಗ ಹೋಗಬೇಕಾಗ್ತದ’. ಅಯ್ಯಯ್ಯಪ್ಪಾ… ಆ ಬಸ್ಸಿನಲ್ಲಿ ನಿಂತು ನೂಕಾಡಿ ಆಫೀಸು ತಲುಪುವ ಕರ್ಮವೇಕೆ ಎಂದುಕೊಂಡು ದಡಬಡಿಸಿ ಹೊರಟೇ ಬಿಡುತ್ತಾಳೆ. ಎಲ್ಲರಿಗೂ ತಿಂಡಿಯ ತಾಟು ಕೈಗಿಡುವ ಅವಳಿಗೆ ತಿನ್ನುವ ವ್ಯವಧಾನ ಎಲ್ಲಿದೆ? ಓಡಾಡುತ್ತಲೇ ಅರೆಬರೆ ತಿಂದು ಗಂಡನನ್ನು ಹಿಂಬಾಲಿಸುತ್ತಾಳೆ.

Advertisement

ಮತ್ತದೇ ಆಫೀಸು. ಹೊರೆ ಹೊರೆ ಕೆಲಸಗಳು. ಹೊಸದಾಗಿ ಬಂದ ಮೇಲಧಿಕಾರಿ ಅವಳ ವಯಸ್ಸಿಗೂ ಬೆಲೆಕೊಡದೇ ಮೂದಲಿಸಿದಾಗ, ಅವಡುಕಚ್ಚಿ ಸಹಿಸುತ್ತಾಳೆ. ಈಗ ಅವಳಿಗೆ ಮೊದಲಿನ ಉತ್ಸಾಹವಿಲ್ಲ. ಇಡೀ ದಿನ ಕಿತ್ತುಕೊಂಡು ಸುರಿವ ಬೆವರು. ಎಂಥ ಹಗುರ ಬಟ್ಟೆ ಹಾಕಿದರೂ ಮೈಬಿಗಿವ ಹಿಂಸೆ. ಇಡೀ ದಿನ ಚಿಕ್ಕಪುಟ್ಟ ವಿಷಯಕ್ಕೂ ಮಕ್ಕಳ ಮೇಲೆ ರೇಗುವಂತಾಗುತ್ತದೆ. ಅವಳಿಗೆ ಗೊತ್ತು. ತಾನೀಗ ಋತುಬಂಧದ ಹೊಸ್ತಿಲಲ್ಲಿದ್ದೇನೆ ಎಂದು. ಆದರೆ ಅದೆಲ್ಲಾ ಅರ್ಥಮಾಡಿಕೊಳ್ಳೋರು ಯಾರು? “ಏನು ಯಾರಿಗೂ ಆಗದ್ದು, ನಿನಗಾದ ಹಾಗೆ ಆಡ್ತೀಯಲ್ಲಾ? ನಿಮ್ಮವ್ವ ನಮ್ಮವ್ವ ಎಲ್ಲಾ ಇದನ್ನು ದಾಟಿಯೇ ಬಂದವರಲ್ಲವೇನು? ಅವರೆಲ್ಲಾ ಹೀಂಗ ಆಡ್ತಿದ್ರ?’ ಎಂಬ ಗಂಡನ ನುಡಿಗೆ ಅವಳು ಕಣ್ಣುತುಂಬಿಕೊಂಡು ನಿರುತ್ತರಳಾಗುವಳು.

ಇವತ್ತು ಸಹೋದ್ಯೋಗಿಯೊಬ್ಬಳು ಸ್ವಯಂ ನಿವೃತ್ತಿ ತೆಗೆದುಕೊಳ್ಳುವುದಾಗಿ ತಿಳಿಸಿದಾಗಿನಿಂದ, ಅವಳಲ್ಲೂ ಆ ನಿರ್ಧಾರ ಬಲವಾಗತೊಡಗಿದೆ. “ಸಾಕು ಇನ್ನಾದರೂ ಮನೆಯಲ್ಲಿ ಆರಾಮವಾಗಿ ಕಾಲಕಳೆಯೋಣ. ಮಗನದು ಈ ಸಲ ಎಂಜಿನಿಯರಿಂಗ್‌ ಮುಗಿಯುತ್ತೆ. ಕ್ಯಾಂಪಸ್‌ ಸೆಲೆಕ್ಷನ್‌ ಆಗಿ ಕೆಲಸ ಹಿಡಿದು ಬಿಟ್ಟರೆ, ಅರ್ಧ ಜವಾಬ್ದಾರಿ ಮುಗಿದಂತೆ. ಮಗಳ ಮದುವೆಗೆ ಈಗ ಬರುವ ಫ‌ಂಡ್‌ ಸಾಕು. ಮನದಲ್ಲಿ ಮಂಡಿಗೆ ತಿನ್ನುತ್ತಲೇ ದಿನದ ಕೆಲಸ ಮುಗಿಸಿ ಮನೆ ಸೇರುತ್ತಾಳೆ. 

“ಅಪ್ಪಾ, ನನ್ನ ದೋಸ್ತ ಬೆಂಗಳೂರಿನಾಗೆ ಎಂ.ಟೆಕ್‌. ಮಾಡ್ತಾನಂತ. ನಾನೂ ಮಾಡಬೇಕಂತೀನಿ’. ಮಗನ ಮಾತಿಗೆ ಒಂದು ಕ್ಷಣ ಸ್ತಬ್ಧಳಾಗುತ್ತಾಳೆ. ಅಂದರೆ? ಫೀಸು, ಹಾಸ್ಟೆಲ್ಲು ಅಂತ ಎಷ್ಟು ಲಕ್ಷ ಖರ್ಚು ಬರಬಹುದು? ಗಂಡನ ಪಗಾರಿನ ಬಹುಪಾಲು, ಮನೆಯ ಸಾಲ ತೀರಿಸಲೆಂದೇ ಹೋಗುತ್ತಿದೆ. ಮತ್ತೆ ಇದು ತನ್ನ ಜವಾಬ್ದಾರಿ ತಾನೆ? “ಮಮ್ಮಿ ಮುಂದಿನ ತಿಂಗಳು ನನ್‌ ಬರ್ತಡೆ. ನೀ ಗಾಡಿ ಕೊಡಿಸ್ತೇನೆ ಎಂದಿದ್ದೆ. ನೆನಪದ ಹೌದಿಲ್ಲೋ? ಮಗಳು ತೆಕ್ಕೆಬಿದ್ದು ಮುದ್ದುಗರೆಯುತ್ತ ನೆನಪಿಸುತ್ತಾಳೆ. ಮಗನ ಕಣ್ಣಲ್ಲಿ ಕನಸು, ಮಗಳ ಕಣ್ಣಲ್ಲಿ ಹೊಳಪು ಅವಳನ್ನು ಭಾವುಕಳನ್ನಾಗಿಸುತ್ತದೆ. ಸ್ವಯಂ ನಿವೃತ್ತಿಯ ನಿರ್ಧಾರವು ಇನ್ನಿಲ್ಲದಂತೆ ಮೂಲೆ ಸೇರುತ್ತದೆ.

ರೂಪಾ ರವೀಂದ್ರ ಜೋಶಿ

Advertisement
Advertisement

Udayavani is now on Telegram. Click here to join our channel and stay updated with the latest news.

Next